ಕರಾವಳಿ

ಮೃತ ಬಶೀರ್ ಕುಟುಂಬಕ್ಕೆ ಸರಕಾರದಿಂದ 10 ಲಕ್ಷ ರೂ.ಪರಿಹಾರ ಘೋಷಣೆ : 50 ಲಕ್ಷ ರೂ. ಪರಿಹಾರ ನೀಡಲು ಆಗ್ರಹ

Pinterest LinkedIn Tumblr

ಮಂಗಳೂರು, ಜನವರಿ.7: ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ಹತ್ಯೆ ನಡೆದ ಬಳಿಕ ನಗರದ ಕೊಟ್ಟಾರ ಚೌಕಿ ಬಳಿ ದುಷ್ಕರ್ಮಿಗಳಿಂದ ಮಾರಣಾಂತಿಕ ದಾಳಿಗೊಳಗಾಗಿ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗ್ಗೆ ಮೃತಪಟ್ಟ ಆಕಾಶಭವನ ನಿವಾಸಿ ಬಶೀರ್(47) ಕುಟಂಬಕ್ಕೆ ಸರಕಾರ 10 ಲಕ್ಷ ರೂ. ಪರಿಹಾರ ಘೋಷಿಸಿದೆ.

ರಾಜ್ಯಸರಕಾರ ಮತ್ತು ಜಿಲ್ಲಾಡಳಿತದಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಮೃತ ಬಶೀರ್‌ ಕುಟುಂಬಕ್ಕೆ ಜಿಲ್ಲಾಧಿಕಾರಿ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡುತ್ತಿದ್ದಂತೆ ಸ್ಥಳದಲ್ಲಿದ್ದ ಸಂಬಂಧಿಗಳು, ಸ್ಥಳೀಯರು 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ದೀಪಕ್ ರಾವ್ ಹತ್ಯೆಯಾದ ದಿನವೇ ದೀಪಕ್‌ ಸಾವಿಗೆ ಪ್ರತೀಕಾರವಾಗಿ ರಾತ್ರಿ ಕೊಟ್ಟಾರ ಚೌಕಿ ಬಳಿ ಅಬ್ದುಲ್ ಬಶೀರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಅಂಗಡಿ ಬಂದ್ ಮಾಡಿ ಮನೆಗೆ ತೆರಳುತ್ತಿದ್ದ ಫಾಸ್ಟ್‌ಫುಡ್‌ ವ್ಯಾಪಾರಿ ಬಶೀರ್ ಮೇಲೆ ನಾಲ್ವರು ದುಷ್ಕರ್ಮಿಗಳು ಲಾಂಗು, ಮಚ್ಚುಗಳಿಂದ ಹದಿನೇಳು ಬಾರಿ ಹಲ್ಲೆ ಮಾಡಿದ್ದರು. ಕುತ್ತಿಗೆ, ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರವಾಗಿ ಹಲ್ಲೆಯಾಗಿದ್ದರಿಂದ ಕಿಡ್ನಿ ಸಂಪೂರ್ಣ ನಿಷ್ಕ್ರಿಯವಾಗಿತ್ತು.

ಈ ವೇಳೆ ಸ್ಥಳೀಯರಾದ ಕೇಶವ್ ಎಂಬವರು ಅದೇ ದಾರಿಯಾಗಿ ಬರುತ್ತಿದ್ದ ಆ್ಯಂಬುಲೆನ್ಸ್ ಚಾಲಕ ಶೇಖರ್ ಅವರೊಂದಿಗೆ ಸೇರಿ ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದರು. ಮೊನ್ನೆಯಿಂದಲೇ ಅನೇಕ ಬಾರಿ ಕುತ್ತಿಗೆ, ತಲೆ ಭಾಗಗಳಿಗೆ ಸೇರಿದಂತೆ ಅನೇಕ ಬಾರಿ ಬಶೀರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸಾವಿನವರೆಗೂ ತುರ್ತು ನಿಗಾ ಘಟಕದಲ್ಲೇ ಇದ್ದ ಬಶೀರ್ ಕೊನೆಗೂ ಸಾವನ್ನಪ್ಪಿದ್ದಾರೆ.

ಅಕಾಶಭವನದ ನಿವಾಸಿಯಾಗಿರುವ ಬಶೀರ್, ಪತ್ನಿ ಖುಲ್ಫ್, ಮೂರು ಗಂಡು ಹಾಗೂ ಒಂದು ಹೆಣ್ಣು ಮಕ್ಕಳು ಹಾಗೂ ಸಂಬಂಧಿಕರನ್ನು ಅಗಲಿದ್ದಾರೆ. ಇಬ್ಬರು ಗಂಡು ಮಕ್ಕಳು ವಿದೇಶದಲ್ಲಿ ಉದ್ಯೋಗ ನಿಮಿತ್ತ ತೆರಳಿದ್ದರು. ಇನ್ನೊಬ್ಬ ಮಗ ಮೂರು ತಿಂಗಳ ಹಿಂದೆಯಷ್ಟೇ ವಿದೇಶಕ್ಕೆ ಹೋಗಿದ್ದರು. ಇದೀಗ ತಂದೆಯ ಸಾವಿನ ಸುದ್ದಿ ಕೇಳಿ ಬರುವುದಕ್ಕೆ ತಯಾರಿ ಮಾಡುತ್ತಿದ್ದಾರೆಂದು ಅವರ ಸಂಬಂಧಿ ತಿಳಿಸಿದ್ದಾರೆ. ಬಶೀರ್ ಮೃತದೇಹವನ್ನು ಕೂಳೂರು ಮಸೀದಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಶಾಸಕ ಮೊಯ್ದಿನ್ ಬಾವ ಹಾಗೂ ಪೊಲೀಸ್ ಕಮಿಷನರ್ ಟಿ. ಆರ್. ಸುರೇಶ್ ಎ.ಜೆ. ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಫಲಿಸದ ಹಾರೈಕೆ:

ದೀಪಕ್ ಕಳೆದುಕೊಂಡ ನೋವಿನಲ್ಲೂ ಮಂಗಳೂರಿನ ಎಲ್ಲಾ ಧರ್ಮದವರೂ ಬಶೀರ್ ಬದುಕುಳಿಯಲಿ ಎಂದು ಹಾರೈಸಿದ್ದರು. ಆದರೆ, ಅವರ ಹಾರೈಕೆಯ ಹೊರತಾಗಿಯೂ ಬಶೀರ್ ಸಾವು ಜನರಿಗೆ ಆಘಾತವಾಗಿದೆ. ಅವರ ಸಾವಿಗೆ ಕಾರಣರಾದವರನ್ನು ಜನ ಶಪಿಸುತ್ತಿದ್ದಾರೆ. ನಾಲ್ವರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

Comments are closed.