ಕರಾವಳಿ

ದೀಪಕ್ ರಾವ್ ಹತ್ಯೆ ಖಂಡಿಸಿ ಪ್ರತಿಭಟನೆ : ಪಿಎಫ್‌ಐ ಮತ್ತು ಎಸ್‌ಡಿಪಿಐಯನ್ನು ನಿಷೇಧಿಸಲು ಆಗ್ರಹ

Pinterest LinkedIn Tumblr

ಮಂಗಳೂರು, ಜನವರಿ.5: ಕಾಟಿಪಳ್ಳದಲ್ಲಿ ನಡೆದ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಹತ್ಯೆಯನ್ನು ಖಂಡಿಸಿ ಹಾಗೂ ಪಿಎಫ್‌ಐ ಮತ್ತು ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ನಗರದ ಬೆಸೆಂಟ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಪ್ರತಿಭಟನಾ ಸಭೆಯನ್ನುದ್ದೇಶಿಸಿ ವಿಎಚ್‌ಪಿ ಮುಖಂಡ ಎಂ.ಬಿ.ಪುರಾಣಿಕ್ ಮಾತನಾಡಿ,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ. ಅಮಾಯಕ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದ್ದರೂ ಸರಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಚುನಾವಣೆ ಬರುತ್ತಿದ್ದಂತೆ ಕೋಮುಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಹತ್ಯೆ ಹಿಂದೆ ಪಿಎಫ್‌ಐ ಮತ್ತು ಎಸ್ಡಿಪಿಐ ಸಂಘಟನೆಯ ಕೈವಾಡ ಇರುವುದು ಈಗಾಗಲೇ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಿಎಫ್‌ಐ ಮತ್ತು ಎಸ್ಡಿಪಿಐ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ವೇಳೆ ರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಡೆಸಿದ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಜರಂಗದಳದ ಮುಖಂಡ ಶರಣ್ ಪಂಪ್ವೆಲ್, ವಿಎಚ್‌ಪಿ ಜಗದೀಶ್ ಶೇಣವ, ಬಿಜೆಪಿ ರಾಜ್ಯ ಮುಖಂಡ ಬದ್ರಿನಾತ್ ಕಾಮಾತ್, ಬಿಜೆಪಿ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ವೇದವ್ಯಾಸ ಕಾಮತ್, ಪ್ರಮುಖರಾದ ಗೋಪಾಲ್ ಕುತ್ತಾರ್, ಸಂಜಯ್ ಪ್ರಭು ಮತ್ತಿತರರು ರಾಸ್ತಾ ರೋಕೊದಲ್ಲಿ ಪಾಲ್ಗೊಂಡಿದ್ದರು. ಬಂಧಿಸಲಾದ ಪ್ರತಿಭಟನಕಾರರನ್ನು ಬಳಿಕ ಪೊಲೀಸರು ಬಿಡುಗಡೆಗೊಳಿಸಿದರು.

Comments are closed.