ರಾಷ್ಟ್ರೀಯ

ಪ್ರಭಾವಿ ಶಾಸಕನ ಪುತ್ರನಿಗೆ ರಾಜಸ್ತಾನ ವಿಧಾನಸಭೆ ಗುಮಾಸ್ತನ ಹುದ್ದೆ! ಕೆಲಸಕ್ಕಾಗಿ 12,453 ಮಂದಿ ಅಭ್ಯರ್ಥಿಗಳು ಅರ್ಜಿ

Pinterest LinkedIn Tumblr

ಜೈಪುರ: ರಾಜಸ್ತಾನದ ವಿಧಾನಸಭೆಯ ಗುಮಾಸ್ತ ಹುದ್ದೆಗೆ ಸ್ನಾತಕೋತ್ತರ ಪದವೀದರರು, ಎಂಜಿನಿಯರ್ ಗಳು, ಚಾರ್ಟೆಡ್ ಅಕೌಂಟೆಂಟ್ ಗಳು ಅರ್ಜಿ ಸಲ್ಲಿಸಿದ್ದರೂ ಸ್ಥಳೀಯ ಪ್ರಭಾವಿ ಶಾಸಕನ ಪುತ್ರನಿಗೆ ಹುದ್ದೆ ನೀಡಿರುವುದು ರಾಜಸ್ಥಾನದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಅರೆ..ಪ್ರಭಾವಿ ಶಾಸಕನ ಪುತ್ರ ಎಂದರೆ ಆತನೂ ತನ್ನ ತಂದೆಯಂತೆ ರಾಜಕಾರಣಕ್ಕೆ ಬರಬಹುದು ಎಂದು ಎಣಿಸಿರಬಹುದು. ಆದರೆ ಇದು ನೈಜ ಘಟನೆ. ರಾಜಸ್ತಾನದ ಪ್ರಭಾವಿ ಶಾಸಕ ಎಂದೇ ಗುರಿತಿಸಿಕೊಂಡಿರುವ ಜಮ್ವಾ ರಾಮಘಡ್ ಶಾಸಕ ಜಗದೀಶ್ ನಾರಾಯಣ್ ಮೀನಾ ಅವರು ಇದೀಗ ವಿವಾದಕ್ಕೆ ಕಾರಣರಾಗಿದ್ದಾರೆ. ಅವರ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿದ್ದ ಅಭ್ಯರ್ಥಿಗಳ ಹೊರತಾಗಿಯೂ 10ನೇ ತರಗತಿ ಓದಿರುವ ಅವರ ಪುತ್ರ 30 ವರ್ಷದ ರಾಮಕೃಷ್ಣ ಮೀನಾಗೆ ರಾಜಸ್ತಾನ ವಿಧಾನಸಭೆ ಗುಮಾಸ್ತ ಹುದ್ದೆ ನೀಡಲಾಗಿದೆ.

ಮೂಲಗಳ ಪ್ರಕಾರ ರಾಜಸ್ತಾನ ವಿಧಾನಸಭೆಯ ಒಟ್ಟು 18 ಗುಮಾಸ್ತ ಹುದ್ದೆಗೆ ಈ ಹಿಂದೆ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಸುಮಾರು 12,453 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಅಚ್ಚರಿ ಎಂದರೆ ಈ ಹುದ್ದೆಗಾಗಿ 129 ಎಂಜಿನಿಯರ್ಗಳು, 23 ವಕೀಲರು, ಚಾರ್ಟೆಡ್ ಅಕೌಂಟೆಂಟ್ ಗಳು ಮತ್ತು 393 ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಕೆ ಮಾಡಿದ್ದರು. ಕಳೆದ ಡಿಸೆಂಬರ್ 15ರಂದು ಈ ಅರ್ಜಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಆಯ್ಕೆಯಾಗಿರುವ ಒಟ್ಟು 18 ಅಭ್ಯರ್ಥಿಗಳ ಪೈಕಿ ಶಾಸಕನ ಪುತ್ರ ರಾಮಕೃಷ್ಣ ಮೀನಾ ಕೂಡ ಒಬ್ಬರಾಗಿದ್ದಾರೆ. ಆಯ್ಕೆ ಪಟ್ಟಿಯಲ್ಲಿ ಮೀನಾ 12ನೇ ಸ್ಥಾನ ಪಡೆದಿದ್ದಾರೆ.

ಇನ್ನು ಶಾಸಕನ ಪುತ್ರ ಗುಮಾಸ್ತನ ಹುದ್ದೆಗೆ ಆಯ್ಕೆಯಾಗಿರುವು ಸ್ಥಳೀಯ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಅತ್ಯುನ್ನತ ಪದವೀದರರ ಹೊರತಾಗಿಯೂ ಕೇವಲ 10ನೇ ತರಗತಿ ಓದಿರುವ ಶಾಸಕನ ಪುತ್ರನಿಗೆ ಕೆಲಸ ನೀಡಿರುವುದನ್ನು ಕಾಂಗ್ರೆಸ್ ಖಂಡಿಸಿದೆ. ಪ್ರಭಾವಿ ಶಾಸಕನ ಮಗನಿಗೆ ಕೆಲಸ ನೀಡುವ ಮೂಲಕ ಆಡಳಿತಾರೂಢ ಬಿಜೆಪಿ ಸರ್ಕಾರ ಆ ಹುದ್ದೆ ಸೇರಬೇಕಿದ್ದ ಓರ್ವ ಅರ್ಹ ಅಭ್ಯರ್ಥಿಗೆ ಮೋಸ ಮಾಡಿದೆ ಎಂದು ಆರೋಪಿಸಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಆಗ್ರಹಿಸಿದ್ದಾರೆ. ಅಲ್ಲದೆ ವಿಧಾನಸಭೆಯ ಪ್ರಮುಖ ಹುದ್ದೆಗಳನ್ನು ಬಿಜೆಪಿ ಸರ್ಕಾರ ತನ್ನ ಆಪ್ತರಿಗೆ ಮತ್ತು ಶಾಸಕರ ಕುಟುಂಬಸ್ಥರಿಗೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಆರೋಪ ನಿರಾಕರಿಸಿದ ಶಾಸಕ ಜಗದೀಶ್ ನಾರಾಯಣ್ ಮೀನಾ
ಇನ್ನು ತಮ್ಮ ಪುತ್ರನಿಗೆ ದುರುದ್ದೇಶದಿಂದ ಗುಮಾಸ್ತ ಹುದ್ದೆ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ಜಗದೀಶ್ ನಾರಾಯಣ್ ಮೀನಾ, ತನ್ನ ಮಗ ನಿಯಮಗಳಂತೆಯೇ ಅರ್ಜಿ ಸಲ್ಲಿಕೆ ಮಾಡಿ ಆಯ್ಕೆಯಾಗಿದ್ದಾನೆ. ಆತನ ಆಯ್ಕೆಯಲ್ಲಿ ನನ್ನ ರಾಜಕೀಯ ಪ್ರಭಾವ ಬಳಸಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಒಂದು ವೇಳೆ ನನ್ನ ರಾಜಕೀಯ ಪ್ರಭಾವ ಬಳಸಿಕೊಂಡು ಹುದ್ದೆ ಕೊಡಿಸುವುದಿದ್ದರೆ ಆತನಿಗೆ ಇದಕ್ಕಿಂತಲೂ ಉನ್ನತ ಮಟ್ಟದ ಹುದ್ದೆಯನ್ನೇ ಕೊಡಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.

Comments are closed.