ಕರಾವಳಿ

ದೀಪಕ್‌ ರಾವ್‌ ಹತ್ಯೆ ಖಂಡಿಸಿ ಬಿಜೆಪಿಯಿಂದ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ : ಹಲವರ ಬಂಧನ

Pinterest LinkedIn Tumblr

ಮಂಗಳೂರು : ಮಂಗಳೂರಿನ ಸುರತ್ಕಲ್‌ ಸಮೀಪದ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂಪರ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌ ಹತ್ಯೆ ಖಂಡಿಸಿ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಪಕ್ಷದ ಜಿಲ್ಲಾ ಕಚೇರಿಯಿರುವ ಪಿವಿಎಸ್ ಸರ್ಕಲ್ ಬಳಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.

ಈ ವೇಳೆ ರಾಜ್ಯ ಸರಕಾರದ ಆಡಳಿತ ವೈಫಲ್ಯದ ಬಗ್ಗೆ ಘೋಷಣೆ ಕೂಗಿದ ಪ್ರತಿಭಟನಕಾರರು ಇತ್ತೀಚಿನ ಕೆಲವು ದಿನಗಳಲ್ಲಿ ದೀಪಕ್‌ ರಾವ್‌ ಸೇರಿದಂತೆ ಜಿಲ್ಲೆಯಲ್ಲಿ ಕೆಲವರ ಹತ್ಯೆ ನಡೆದಿದ್ದು, ಈ ಸರಣಿ ಹತ್ಯೆಯ ನೈತಿಕ ಹೊಣೆಹೊತ್ತು ರಾಜ್ಯ ಗೃಹ ಸಚಿವ ರಾಮಲಿಂಗ ರೆಡ್ಡಿ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ ದೀಪಕ್‌ ರಾವ್‌ ಹತ್ಯಾ ಪ್ರಕರಣದಲ್ಲಿ ದೀಪಕ್ ರಾವ್ ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಾಹನ ಸಂಚಾರಕ್ಕೆ ಅವಕಾಶ ನೀಡದೆ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಬಂದರು ಠಾಣಾ ಪೊಲೀಸರು ಹಾಗೂ ಪಾಂಡೆಶ್ವರ ಠಾಣಾ ಪೊಲೀಸರು ಪ್ರತಿಭಟನ ಕಾರರನ್ನು ಸುತ್ತುವರಿದು ಬಲವಂತವಾಗಿ ಬಂಧಿಸಿ ಠಾಣೆಗೆ ಕರೆದೊಯ್ದರು.

ಬಿಜೆಪಿ ಮುಖಂಡರಾದ ವೇದವ್ಯಾಸ ಕಾಮಾತ್, ಮೋನಪ್ಪ ಭಂಡಾರಿ, ಸತೀಶ್ ಪ್ರಭು,ಸಂಜಯ್ ಪ್ರಭು, ರೂಪಾ ಡಿ ಬಂಗೇರಾ, ಪೂರ್ಣಿಮಾ ಸೇರಿದಂತೆ ಪಕ್ಷದ ಹಲವಾರು ಪ್ರಮುಖರನ್ನು ಬಂಧಿಸಿ ಪೊಲೀಸರು ಠಾಣೆಗೆ ಕರೆದೊಯ್ದರು.

Comments are closed.