ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿರುವ ಸ್ವಂತ ನಿವೇಶನ ಇಲ್ಲದ, ಅಶಕ್ತರಾದ ಕಡು ಬಡವರಿಗೆ, ದಾನಿಗಳ ನೆರವಿನಿಂದ 100 ಮನೆಗಳನ್ನು ಒದಗಿಸುವ ಉದ್ದೇಶ ಹೊಂದಿದ್ದು, ಈಗಾಗಲೇ 80ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗಿದೆ ಎಂದು ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ. ಅವರು ಸೋಮವಾರ, ಮೂಡಬೆಟ್ಟು ನಲ್ಲಿ ದಾನಿಗಳಿಂದ ನಿರ್ಮಿಸಿದ ಸುಲೋಚನ ಚಂದು ಪೂಜಾರಿ ಇವರ ಮನೆ ಉದ್ಘಾಟಿಸಿ ಮಾತನಾಡಿದರು.

ಸರಕಾರದ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಿಲ್ಲದ, ಸ್ವಂತ ನಿವೇಶನ ಇಲ್ಲದ, ಬಡವರಿಗೆ, ದಾನಿಗಳ , ಕಟ್ಟಡ ನಿರ್ಮಾಣ ಮಾಲೀಕರ ಮನವೊಲಿಸಿ, ಅವರ ಮೂಲಕ 1.50 ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಆ ಮೂಲಕ ಬಡವರ ಬದುಕಿಗೆ ಭದ್ರತೆ ಒಗದಿಸುವ ತಮ್ಮ ಕನಸಿಗೆ ನೆರವು ನೀಡಿದ ದಾನಿಗಳು ಮತ್ತು ಕಟ್ಟಡ ನಿರ್ಮಾಣ ಮಾಲೀಕರನ್ನು ಅಭಿನಂದಿಸಿದ ಸಚಿವರು, 100 ಮನೆಗಳ ನಿರ್ಮಾಣ ಗುರಿ ಹೊಂದಿದ್ದು, ಪ್ರಸ್ತುತ 80 ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದ್ದು, 20 ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಫೆಬ್ರವರಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಲಕ್ಷ್ಮಿ ನಗರದ ವಸಂತಿ ನಾಯಕ್, ಜಯಂತಿ ದಿನೇಶ್, ಕಲ್ಮಾಡಿ ಗರಡಿ ಬಳಿಯ ಮಾಲತಿ ರಘು ಕರ್ಕೆರಾ, ಅಂಬಲಪಾಡಿ ನಾಯರ್ ಕೆರೆಯ ಸುಧಾ ಬಿ ಮಡಿವಾಳ ಅವರ ಮನೆ ಸೇರಿದಂತೆ ಒಟ್ಟು ೫ ಮನೆಗಳನ್ನು ಇಂದು ಸಚಿವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ, ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ನಗರಸಭಾ ಸದಸ್ಯರಾದ ಗಣೇಶ್ ನೇರ್ಗಿ,ಪೌರಾಯುಕ್ತ ಮಂಜುನಾಥಯ್ಯ,ದಾನಿಗಳಾದ ಕಾರ್ತಿಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Comments are closed.