ಕರಾವಳಿ

ಡಿ.26ರಂದು ಮಂಗಳೂರಿನಲ್ಲಿ ಬ್ಯಾರಿ ಸಾಂಸ್ಕೃತಿಕ ಸಂಭ್ರಮ

Pinterest LinkedIn Tumblr

ಮಂಗಳೂರು, ಡಿಸೆಂಬರ್.23: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬ್ಯಾರಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಡಿ.26ರಂದು ಬೆಳಗ್ಗೆ 10ಕ್ಕೆ ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.

ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಆಹಾರ ಸಚಿವ ಯು.ಟಿ. ಖಾದರ್, ನಗರಾಭಿವೃದ್ಧಿ ಮತ್ತು ಹಜ್ಜ್ ಸಚಿವ ಆರ್. ರೋಶನ್ ಬೇಗ್, ಮಾಜಿ ಸಚಿವ ಬಿ.ಎ.ಮೊಹಿದಿನ್ ಗೌರವ ಭಾಗವಹಿಸಲಿದ್ದಾರೆ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರು ಮೊಹಮ್ಮದ್ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ಬೆಳಗ್ಗೆ 10ರಿಂದ 11ರ ತನಕ ಇಬ್ರಾಹೀಂ ಬಾತಿಷಾ ನೇತೃತ್ವದಲ್ಲಿ ಬ್ಯಾರಿ ಸಾಹಿತ್ಯ ಮತ್ತು ಸಂಗೀತ ಸಂಗಮ ನಡೆಯಲಿದೆ. 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಹಾಗೂ ನೂತನ ಸದಸ್ಯರ ಪರಿಚಯ ಕಾರ್ಯಕ್ರಮ ಹಾಗೂ ಊಟದ ವಿರಾಮದ ನಂತರ ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ನಾಲ್ಕು ಗಂಟೆ ವರೆಗೆ ಬ್ಯಾರಿ ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮ ಆಯೋಜಿಸಲಾಗಿದೆ. ದಕಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಮತ್ತು ಮೈಸೂರು ಭಾಗಗಳಿಂದ ಒಂದು ಸಾವಿರಕ್ಕೂಅಧಿಕ ಬ್ಯಾರಿ ಭಾಷಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಭವನ ನಿರ್ಮಾಣಕ್ಕೆ ಆದ್ಯತೆ: ಕಳೆದ ನವೆಂಬರ್ ತಿಂಗಳಲ್ಲಿ ತಮ್ಮನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಮುಂದಿನ ಅವಧಿಯಲ್ಲಿ ನಗರ ಹೊರವಲಯದ ಬೈತುರ್ಲಿಯಲ್ಲಿ ಈಗಾಗಲೇ ಅಕಾಡೆಮಿ ಖರೀದಿಸಿರುವ ಜಾಗದಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಎಂಟು ಕೋಟಿ ರೂ. ಮೊತ್ತದ ಅಂದಾಜುಪಟ್ಟಿ ತಯಾರಿಸಿ, ವಿಶೇಷ ಅನುದಾನ ಅಥವಾ ಮುಂದಿನ ಬಜೆಟ್‌ನಲ್ಲಿ ಘೋಷಿಸಿ ಬಿಡುಗಡೆ ಮಾಡಿಸಲು ಮತ್ತು ಈಗಾಗಲೇ ಮಂಗಳೂರು ವಿವಿಯಲ್ಲಿ ಬ್ಯಾರಿ ಪೀಠ ಸ್ಥಾಪನೆ ಘೋಷಿಸಿದ್ದು, ಅದರ ಕಾರ್ಯಾರಂಭಕ್ಕೆ ಅನುದಾನ ಬಿಡುಗಡೆ ಮಾಡಿಸಲು ಸಿಎಂ ಬಳಿಗೆ ನಿಯೋಗ ತೆರಳಲಾಗುವುದು ಎಂದು ಅವರು ಹೇಳಿದರು.

ಹಿಂದಿನ ಅವಧಿಯಲ್ಲಿ ಪ್ರಕಟಗೊಂಡಿರುವ ಬ್ಯಾರಿ ನಿಘಂಟು ಮತ್ತು ಇತರ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಶಾಲೆಗಳು ಹಾಗೂ ಲೈಬ್ರೆರಿಗಳಿಗೆ ತಲುಪಿಸಲಾಗುವುದು. ರಾಜ್ಯದ ಮೂಲೆಗಳಿಗೆ ಬ್ಯಾರಿ ಭಾಷೆಯ ಸಾಹಿತ್ಯ, ಸಂಸ್ಕೃತಿಯ ಸೊಗಡು ತಲುಪಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ಬ್ಯಾರಿ ಅಕಾಡೆಮಿ ಸದಸ್ಯರಾದ ಬಶೀರ್ ಬೈಕಂಪಾಡಿ, ಹುಸೈನ್ ಕಾಟಿಪಳ್ಳ, ಬಶೀರ್ ಅಹ್ಮದ್ ಕಿನ್ಯ, ಪಿ.ಎಂ. ಹಸನಬ್ಬ ಮೂಡಬಿದಿರೆ, ಮುಹಮ್ಮದ್ ಆರಿಫ್ ಪಡುಬಿದ್ರಿ, ಆಯಿಶಾ ಯು.ಕೆ.ಉಳ್ಳಾಲ, ಸಲೀಂ ಬರಿಮಾರು ಬಂಟ್ವಾಳ, ಎಸ್. ಎಂ. ಶರೀಫ್ ಮಡಿಕೇರಿ, ಕೆ.ಎಂ.ಮುಹಮ್ಮದ್‌ಅನ್ಸಾರ್ ಬೆಳ್ಳಾರೆ, ಮುಹಮ್ಮದ್ ತನ್ಸೀಫ್‌ಕಿಲ್ಲೂರು, ರಿಜಿಸ್ಟ್ರಾರ್ ಚಂದ್ರಹಾಸ ರೈಬಿ. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.