ಕರಾವಳಿ

ತಲಪಾಡಿ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳ ಬಂಧನ :ಮಾರಕಾಯುಧ, ಮೆಣಸಿನ ಹುಡಿ ವಶ

Pinterest LinkedIn Tumblr

ಮಂಗಳೂರು/ ಉಳ್ಳಾಲ, ಡಿಸೆಂಬರ್. 16: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಸಮೀಪದ ಕೆ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಪ್ರಯಾಣಿಕರ ದರೋಡೆ ನಡೆಸಲು ಹೊಂಚುಹಾಕುತ್ತಿದ್ದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ತಲಪಾಡಿ ನಿವಾಸಿ ಮುಹಮ್ಮದ್ ಫಯಾಝ್ (19), ಕೋಟೆಕಾರು ನಿವಾಸಿ ಯಾಹ್ಯಾ (26) ಹಾಗೂ ಕುತ್ತಾರು ನಿವಾಸಿ ಅಬ್ದುಲ್ ತೌಸೀಫ್ (19) ಬಂಧಿತ ಆರೋಪಿಗಳು. ಆರೋಪಿಗಳ ಬಳಿಯಿದ್ದ ಮಾರಕಾಯುಧ, ಮೆಣಸಿನ ಹುಡಿ, ಚೂರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಲಪಾಡಿ ಬಳಿಯ ಕೆ.ಸಿ.ರೋಡಿನಲ್ಲಿರುವ ಮಂಗಳೂರು – ಕೇರಳ ರಾ.ಹೆ.66ರಲ್ಲಿ ರಾತ್ರಿ ಹಾದುಹೋಗುವ ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ತಡೆದು ಅವರ ಸೊತ್ತುಗಳನ್ನು, ಚಿನ್ನಾಭರಣಗಳನ್ನು ದರೋಡೆ ನಡೆಸಲು ಆರೋಪಿಗಳು ಯತ್ನಿಸುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಠಾಣಾಧಿಕಾರಿ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಕೆ.ಸಿ.ರೋಡಿನಿಂದ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜಾರು ಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಗಳ ಪೈಕಿ ಯಾಹ್ಯಾ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ಮತ್ತು ಮಂಗಳೂರು ಉತ್ತರ ಠಾಣೆಯಲ್ಲಿ ಹಲ್ಲೆ, ಜೀವಬೆದರಿಕೆ ದೂರು ದಾಖಲಾಗಿವೆ. ಆರೋಪಿ ಫಯಾಝ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಕೊಲೆಯತ್ನ ಮತ್ತು ಅಕ್ರಮ ಶಸ್ತ್ರಾಸ್ತ್ರ ಉಪಯೋಗ ಮತ್ತು ವಿಟ್ಲ ಠಾಣೆಯಲ್ಲಿ ಕಳವು ಪ್ರಕರಣವಿದೆ. ಆರೋಪಿ ಅಬ್ದುಲ್ ತೌಸೀಫ್ ವಿರುದ್ಧ ಮಂಗಳೂರು ಉತ್ತರ ಠಾಣೆಯಲ್ಲಿ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ ಹಾಗೂ ಉಳ್ಳಾಲ ಠಾಣೆಯಲ್ಲಿ ಗಾಂಜಾ ಸೇವನೆ ಮಾಡಿದ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.