ಕರಾವಳಿ

ಸಂಕಷ್ಟದಲ್ಲಿರುವ ಪಡಂಗಡಿ ಸೀತಾರಾಮ ಶೆಟ್ಟರಿಗೆ ಕುವೈಟ್ ಬಂಟರ ಸಂಘ ನೆರವು

Pinterest LinkedIn Tumblr

ಕುವೈಟ್ ಬಂಟರ ಸೇವಾಕಾರ್ಯ ಸ್ಮರಣೀಯ: ರಘುರಾಮ ಶೆಟ್ಟಿ

ಮಂಗಳೂರು : ‘ಸಮಾಜದಲ್ಲಿ ನೂರಾರು ಮಂದಿ ಅಶಕ್ತರು,ರೋಗಿಗಳು ಸರಿಯಾದ ಆಸರೆಯಿಲ್ಲದೆ ಅತ್ಯಂತ ಸಂಕಷ್ಟದಲ್ಲಿದ್ದಾರೆ. ಅಂಥವರಿಗೆ ನೆರವು ನೀಡಲು ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಕುವೈಟ್ ಬಂಟರ ಸೇವಾಕಾರ್ಯ ಸ್ಮರಣೀಯವಾದುದು ‘ ಎಂದು ಗುರುವಾಯನಕೆರೆ ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ ಹೇಳಿದರು.

ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇತ್ತೀಚೆಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಏಳಲಾಗದೆ ಜೀವನ್ಮರಣ ಸ್ಥಿತಿಯಲ್ಲಿರುವ ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಕಂಪಲಬೆಟ್ಟು ಸೀತಾರಾಮ ಶೆಟ್ಟಿಯವರಿಗೆ ಕುವೈಟ್ ಬಂಟರ ಸಂಘದ ವತಿಯಿಂದ ನೀಡಲಾದ ಸಹಾಯಧನ ವಿತರಣೆ ಸಂದರ್ಭದಲ್ಲಿ ಅವರು ಮಾತನಾಡಿದರು.

ಸಂತ್ರಸ್ತರ ಮನೆಗೆ ಭೇಟಿ ನೀಡಿದ ಕುವೈಟ್ ಬಂಟರ ಸಂಘದ ನಿಕಟಪೂರ್ವ ಸದಸ್ಯ, ಮಂಗಳೂರಿನ ಉದ್ಯಮಿ ದಿವಿನ್ ಮೇಂಡ ರೂ.25,000/- ದ ಚೆಕ್ಕನ್ನು ಸೀತಾರಾಮ ಶೆಟ್ಟರ ಪತ್ನಿ ಸುಲೋಚನಾ ಶೆಟ್ಟಿಯವರಿಗೆ ಹಸ್ತಾಂತರಿಸಿದರು.

‘ಈ ವರ್ಷ ಸೀತಾರಾಮ ಶೆಟ್ಟಿ ಸೇರಿದಂತೆ ಕಡುಬಡತನದಲ್ಲಿರುವ ಕಂದಾವರದ ಜಾರಪ್ಪ ಶೆಟ್ಟಿ, ಕುಂದಾಪುರ ಅಣ್ಣಪ್ಪ ಶೆಟ್ಟಿ, ನಿಟ್ಟೆ ಅಕ್ಷಿತಾ ಶೆಟ್ಟಿ ಮತ್ತು ಕುಟುಂಬಕ್ಕೆ ಕುವೈಟ್ ಬಂಟರ ಸಂಘ ತಲಾ 25ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಿದೆ’ ಎಂದವರು ತಿಳಿಸಿದರು.

ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಮುಖವಾಣಿ ‘ಸದಾಶಯ’ ತ್ರೈಮಾಸಿಕದ ಸಂಪಾದಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ಪತ್ನಿ ಮತ್ತು ಇಬ್ಬರು ಹೆಣ್ಮಕ್ಕಳನ್ನು ಹೊಂದಿದ್ದು ಜೀವನೋಪಾಯಕ್ಕೆ ಯಾವುದೇ ದಾರಿಯಿಲ್ಲದ ಹೊತ್ತಿನಲ್ಲಿ ಅಸಹಾಯಕರಾಗಿ ಹಾಸಿಗೆ ಹಿಡಿದಿರುವ ಸೀತಾರಾಮರ ಕುಟುಂಬಕ್ಕೆ ಉದಾರಿಗಳು ಇನ್ನಷ್ಟೂ ಹಣಕಾಸಿನ ನೆರವು ನೀಡಬೇಕಾಗಿದೆ’ ಎಂದರು.

ಉದ್ಯಮಿ ಅಶೋಕ ಮಾಡ ಕುದ್ರಾಡಿಗುತ್ತು, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ,ಗುರುವಾಯನಕೆರೆ ಬಂಟರ ಸಂಘದ ಪದಾಧಿಕಾರಿ ಗಳಾದ ಪ್ರಕಾಶ್ ಶೆಟ್ಟಿ ನೊಚ್ಚ, ಜಯಂತ ಶೆಟ್ಟಿ ಕುಂಠಿನಿ ಮತ್ತು ಆನಂದ ಶೆಟ್ಟಿ ಐಸಿರಿ ಉಪಸ್ಥಿತರಿದ್ದರು.
(ವಿ.ಸೂ: ಸಹಾಯ ಮಾಡಲು ಇಚ್ಛಿಸುವವರು ದೂರವಾಣಿ 8861770038 ಸಂಖ್ಯೆಯನ್ನು ಸಂಪರ್ಕಿಸಬಹುದು)

Comments are closed.