ಕರಾವಳಿ

ಎಸ್ಪಿ, ಐಜಿಪಿ, ಡಿಜಿಪಿ ಹಂತದ ಅಧಿಕಾರಿಗಳೂ ರಾಜಕಾರಣಿಗಳ ಮನೆ ಬಾಗಿಲು ಕಾಯುತ್ತಿರುವುದು ವಿಷಾದನೀಯ : ಜಿ.ಎ.ಬಾವಾ

Pinterest LinkedIn Tumblr

ಮಂಗಳೂರು, ಡಿಸೆಂಬರ್. 11: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ಅವರ “ಕೈಗೆ ಬಂದ ತುತ್ತು” ಕೃತಿ ಬಿಡುಗಡೆ ಹಾಗೂ “ಅಂದಿನ ಮತ್ತು ಇಂದಿನ ಅಪರಾಧಗಳು” ಪೊಲೀಸರು ಕುರಿತ ಸಂವಾದ ಕಾರ್ಯಕ್ರಮ ರವಿವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಅವರು, ಅತಿಯಾದ ರಾಜಕೀಯ ಹಸ್ತಕ್ಷೇಪದಿಂದ ಪೊಲೀಸ್ ಇಲಾಖೆ ಹದಗೆಡುತ್ತಿದೆ. ಸುಮಾರು 30 ವರ್ಷಗಳ ಹಿಂದೆ ಕಿರಿಯ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳನ್ನು ಭೇಟಿ ಮಾಡಿದರೆ ಹಿರಿಯ ಅಧಿಕಾರಿಗಳು ತರಾಟೆಗೆ ತೆಗೆದು ಕೊಳ್ಳುತ್ತಿದ್ದರು. ಆದರೆ, ಈಗ ಎಸ್ಪಿ, ಐಜಿಪಿ, ಡಿಜಿಪಿ ಹಂತದ ಅಧಿಕಾರಿಗಳೂ ರಾಜಕಾರಣಿಗಳ ಮನೆಯ ಬಾಗಿಲು ಕಾಯುತ್ತಿರುವುದನ್ನು ಕಾಣುತ್ತಿದ್ದೇವೆ. ಇದು ಅತ್ಯಂತ ನೋವಿನ ಸಂಗತಿ. ಇದರಿಂದ ಪೊಲೀಸರ ಗೌರವವೂ ಕುಗ್ಗುತ್ತಿದೆ ಎಂದರು.

ನಾನು ರಾಜಕೀಯದಲ್ಲಿದ್ದರೂ ಪೊಲೀಸರ ಕರ್ತವ್ಯದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸುವುದನ್ನು ಬೆಂಬಲಿಸುವುದಿಲ್ಲ ಎಂದು ಪ್ರಸ್ತುತ ಕಾಂಗ್ರೆಸ್ ಪಕ್ಷ ಸೇರಿರುವ ಜಿ.ಎ.ಬಾವಾ ಹೇಳಿದರು.

ತಂತ್ರಜ್ಞಾನದ ಬಳಕೆ ಹೆಚ್ಚಿರುವ ಇಂದಿನ ಕಾಲದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಮಾನವ ಬುದ್ಧಿಮತ್ತೆ ಮತ್ತು ನೈಪುಣ್ಯವನ್ನೇ ಅವಲಂಬಿಸಿ ಕೆಲಸ ಮಾಡಬೇಕಾಗುತ್ತದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿ ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ಹರೀಶ್ಚಂದ್ರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೊಲೀಸರಿಗೆ ಮಾಹಿತಿ ಕೊಟ್ಟವರ ಹೆಸರು ಬೇಗ ಬಹಿರಂಗವಾಗುತ್ತಿದೆ. ಇದರಿಂದಾಗಿ ಅವರು ತೊಂದರೆಗೆ ಸಿಲುಕುತ್ತಾರೆ. ಮಾಹಿತಿದಾರರ ಕುರಿತು ವಿವರ ಸೋರಿಕೆ ಆಗದಂತೆ ಹಿರಿಯ ಅಧಿಕಾರಿಗಳು ಸದಾ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಸಾಹಿತಿ ನಾ. ದಾಮೋದರ ಶೆಟ್ಟಿ ಅವರು ‘ಕೈಗೆ ಬಂದ ತುತ್ತು’ ಕೃತಿ ಕುರಿತು ಮಾತನಾಡಿದರು. ಮಂಗಳೂರು ನಗರ ಪೊಲೀಸ್ ಕಮಿನಷರ್ ಟಿ.ಆರ್.ಸುರೇಶ್, ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಪೆಮ್ಮಯ್ಯ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಮಿತ್ರ ಹೆರಾಜೆ ಸಂವಾದದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Comments are closed.