ಹೈದರಾಬಾದ್: ಟಾಲಿವುಡ್ ನ ಖ್ಯಾತ ಹಾಸ್ಯನಟ ‘ಬೊಮ್ಮರಿಲ್ಲು’ ಖ್ಯಾತಿಯ ವಿಜಯ್ ಸಾಯಿ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಹೈದರಾಬಾದಿನ ಯೂಸಫ್ ಗೂಡಾದಲ್ಲಿರುವ ವಿಜಯ್ ಸಾಯಿ ನಿವಾಸದಲ್ಲಿ ನೇಣು ಬಿಗಿದುಕೊಂಡು ನಟ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುಟುಂಬದ ಮೂಲಗಳು ತಿಳಿಸಿರುವಂತೆ ಸಾಲದಿಂದ ಬೇಸತ್ತಿದ್ದ ನಟ ವಿಜಯ್ ಸಾಯಿ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಕೆಲ ತಿಂಗಳುಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದ ನಟ ವಿಜಯ್ ಸಾಯಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಬಳಿಕ ಚಿತ್ರಗಳ ಅವಕಾಶ ಸಿಗದೇ ಕಂಗೆಟ್ಟಿದ್ದ ನಟ ವಿಜಯ್ ಸಾಯಿ ಆರ್ಥಿಕ ಸಮಸ್ಯೆಗಳು ತಲೆದೊರಿದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ಸ್ನೇಹಿತರು ಹೇಳಿದ್ದಾರೆ. ವಿಜಯ್ ಎಲ್ಲರ ಜತೆಗೆ ಆತ್ಮೀಯವಾಗಿದ್ದ. ಆರ್ಥಿಕ ಸಮಸ್ಯೆಗಳ ಜತೆಗೆ ಕೌಟುಂಬಿಕ ಸಮಸ್ಯೆಗಳು ಇದ್ದ ಕಾರಣ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಕಲಾವಿದರ ಸಂಘದ ಅಧ್ಯಕ್ಷ ಶಿವಾಜಿ ರಾಜಾ ಹೇಳಿದ್ದಾರೆ.
ಹಾಸ್ಯನಟನಾಗಿ ಕರಿಯರ್ ಆರಂಭಿಸಿದ ವಿಜಯ್ ತೆಲುಗಿನ ಯಶಸ್ವಿ ನಿರ್ದೇಶಕ ರವಿಬಾಬು ತೆಗೆದ ‘ಅಮ್ಮಾಯಿಲು ಅಬ್ಬಾಯಿಲು’ ಚಿತ್ರದ ಮೂಲಕ ಜನಪ್ರಿಯರಾಗಿದ್ದರು. ಆ ಬಳಿಕ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಅಷ್ಟಾಗಿ ಹೆಸರು ಬರಲಿಲ್ಲ. ಬೊಮ್ಮರಿಲ್ಲು, ಮಂತ್ರ ಸೇರಿದಂತೆ ಹಲವಾರು ಚಿತ್ರಗಳ ಹಾಸ್ಯಪಾತ್ರಗಳಲ್ಲಿ ಕಾಣಿಸಿಕೊಂಡು ನಟ ವಿಜಯ್ ಸಾಯಿ ಎಲ್ಲರನ್ನೂ ರಂಜಿಸಿದ್ದರು.