ಕರಾವಳಿ

ಸುರತ್ಕಲ್-ಬಿ.ಸಿ.ರೋಡ್ ಚತುಷ್ಪಥ ಮೇಲ್ದರ್ಜೆಗೆ 800 ಕೋಟಿ ರೂ.ವೆಚ್ಚದ ಅಂದಾಜುಪಟ್ಟಿ ಸಿದ್ಧ :ಸಂಸದ ನಳಿನ್

Pinterest LinkedIn Tumblr

ಮಂಗಳೂರು : ಸಾಗರ್‌ಮಾಲಾ ಯೋಜನೆಯಡಿ ಸುರತ್ಕಲ್, ಕೊಟ್ಟಾರ ಮತ್ತು ಬಿ.ಸಿ.ರೋಡ್‌ನಲ್ಲಿ ಸಮಾನಾಂತರ ಫ್ಲೈ ಓವರ್ ನಿರ್ಮಾಣ ಸಹಿತ 800 ಕೋಟಿ ರೂ.ವೆಚ್ಚದಲ್ಲಿ ಸುರತ್ಕಲ್-ಬಿ.ಸಿ.ರೋಡ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ (66) ಮೇಲ್ದರ್ಜೆಗೇರಿಸುವ ಕಾಮಗಾರಿಗಳ ಅಂದಾಜುಪಟ್ಟಿ ಸಿದ್ಧ ಸಿದ್ದಪಡಿಸಲಾಗಿದೆ. ಈ ಹೆದ್ದಾರಿಯ ತುರ್ತು ನಿರ್ವಹಣೆಗೆ 10 ಕೋಟಿ ರೂ. ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.

ಸುರತ್ಕಲ್- ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮಗ್ರ ಅಭಿವೃದ್ಧಿಯಾಗಲಿದ್ದು 30 ಕಿ.ಮೀ. ಉದ್ದದ ಹೊಸ ಸರ್ವಿಸ್ ರಸ್ತೆ ನಿರ್ಮಾಣವಾಗಲಿದೆ. ಇದರಲ್ಲಿ ಬೈಕಂಪಾಡಿಯಿಂದ ಕುಂಟಿಕಾನದವರೆಗೆ 7 .ಕಿ.ಮೀ. ಕಾಂಕ್ರಿಟ್ ಷಟ್ಪಥ ರಸ್ತೆ ನಿರ್ಮಾಣವಾಗಲಿದೆ. ನಂತೂರಿನಲ್ಲಿ ಓವರ್ ಪಾಸ್, ಕೂಳೂರಿನಲ್ಲಿ ಹೊಸ ಸೇತುವೆ, ಹೊನ್ನಕಟ್ಟೆ ಮತ್ತು ಪಣಂಬೂರಿನಲ್ಲಿ ಅಂಡರ್ ಪಾಸ್, ಪಡೀಲ್ ಜಂಕ್ಷನ್ ಅಭಿವೃದ್ಧಿ, ಬ್ರಹ್ಮರಕೂಟ್ಲುವಿನಲ್ಲಿ ಕಿರು ಸೇತುವೆ ಕಾಮಗಾರಿ ಒಳಗೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುಪುರ ಹೊಸ ಸೇತುವೆ : ಕುಲಶೇಖರ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ನವೀಕರಣ ಕಾಮಗಾರಿಗೆ 17.50 ಕೋಟಿ ರೂ. ಹಾಗೂ ಗುರುಪುರದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ 50 ಕೋಟಿ ರೂ.ಬಿಡುಗಡೆಯಾಗಿದೆ. ಈ ಹೆದ್ದಾರಿ 45 ಮೀ. ಅಗಲೀಕರಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು ಶೀಘ್ರ ಭೂ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ .

ಚಾರ್ಮಾಡಿ ರಸ್ತೆ : ಬಿ.ಸಿ.ರೋಡ್-ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯ ದ್ವಿಪಥ ಅಗಲೀಕರಣ ಮತ್ತು ಅಭಿವೃದ್ದಿಗಾಗಿ (ಕಿ.ಮೀ.19.80ರಿಂದ 40)159.70 ಕೋಟಿ ರೂ. ಅಂದಾಜು ಪಟ್ಟಿಯನ್ನು ಅನುಮೋದನೆಗಾಗಿ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಈ ಹೆದ್ದಾರಿಯ ಮಣಿಹಳ್ಳ, ನಿಡಿಗಲ್ ಮತ್ತು ಚಾರ್ಮಾಡಿಹಳ್ಳ ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿಯ ಟೆಂಡರ್ ಅನುಮೋದನೆಗೆ ಸಲ್ಲಿಕೆಯಾಗಿದೆ 2017-18 ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಹೆಚ್ಚುವರಿ ಅಭಿವೃದ್ದಿ ಕಾಮಗಾರಿಗೆ (ಕಿ.ಮೀ.40ರಿಂದ 75) 290 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಕೆಯಾಗಿದೆ.

ಸಿ.ಆರ್.ಎಫ್ ಕಾಮಗಾರಿ : ಸಿ‌ಆರ್‌ಎಫ್ ಕಾಮಗಾರಿಯಲ್ಲಿ ಮೊದಲ ಹಂತದಲ್ಲಿ ೧೪ ಕಾಮಗಾರಿಗಳಿಗೆ 65.40 ಕೋಟಿ ರೂ. ಮತ್ತು ದ್ವಿತೀಯ ಹಂತದಲ್ಲಿ 8 ಕಾಮಗಾರಿಗಳಿಗೆ 55.5 ಕೋಟಿ ರೂ.ಅನುದಾನ ಮಂಜೂರಾಗಿದೆ. ಸಿ‌ಆರ್‌ಎಫ್ ಯೋಜನೆಯಡಿ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರ ಹೆಚ್ಚುವರಿ ಅನುದಾನ ಬಿಡುಗಡೆಯಾಗಲಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.