ಕರಾವಳಿ

ತಾಯಿ ಸಾಕುವವರೂ ಸಮಾಜಕ್ಕೆ ಬೇಕು : ಪ್ರೊ. ಎಚ್. ರಮೇಶ್ ಕೆದಿಲಾಯ / ಜ್ಞಾನದ ಹಸಿವಿಗೆ ಪುಸ್ತಕಗಳೇ ಸಾಕು- ಅಪ್ಪಾ ಸಾಹೇಬ ಅಲಿಬಾದಿ

Pinterest LinkedIn Tumblr

ಮೂಡಬಿದಿರೆ ಡಿಸೆಂಬರ್. 3: ಜನರು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಜ್ಞಾನದ ಹಸಿವಿಗೆ ಪುಸ್ತಕಗಳೇ ಆಹಾರ ಎಂದು ಕವಿ ಅಪ್ಪಾ ಸಾಹೇಬ ಅಲಿಬಾದಿ, ಅಥಣಿ ಹೇಳಿದರು.

ಆಳ್ವಾಸ್ ನುಡಿಸಿರಿ-2017ರ ಪ್ರಯುಕ್ತ ರತ್ನಾಕರವರ್ಣಿ ವೇದಿಕೆಯಲ್ಲಿ ಆಯೋಜಿಸಿದ್ದ ಕವಿಸಮಯ-ಕವಿನಮನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಜನರಿಗೆ ಪುಸ್ತಕಗಳೇ ಮನರಂಜನಾಮಾಧ್ಯಮಗಳಾಗಿದ್ದವು. ಆದರೆ ಈ ಎಲೆಕ್ಟ್ರನಿಕ್ ಯುಗದಲ್ಲಿ ಕೇವಲ ಟಿ.ವಿ., ಮೊಬೈಲ್‌ಗಳಿಗೆ ಜನ ಮಾರುಹೋಗುತ್ತಿದ್ದಾರೆ. ಪುಸ್ತಕ ಪ್ರೀತಿ ಕಡಿಮೆಯಾಗಿದೆ ಎಂದು ಹೇಳಿದರು.

ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಮುಂದೆ ಅದು ತಲೆಯೆತ್ತಿ ನಿಲ್ಲುವಂತೆ ಮಾಡುತ್ತದೆ. ಓದುವಿಕೆಯಿಂದ ನಮ್ಮ ಬೌದ್ಧಿಕ ಮಟ್ಟ ಹೆಚ್ಚುತ್ತದೆ. ಆದರೆ ಮೊಬೈಲ್ ಎಂಬ ಮಾಯಜಾಲದೊಳಗೆ ಸಿಕ್ಕ ವ್ಯಕ್ತಿ ಅದರಿಂದ ಹೊರಬಂದು ಸಾಧನೆಯ ಹಾದಿಯಲ್ಲಿ ಸಾಗುವುದು ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟರು.

ರೈತರ ಬಗ್ಗೆ ಮಾತನಾಡುತ್ತಾ, ರೈತರು ಸಂಕಷ್ಟದಲ್ಲಿದ್ದಾರೆ. ಅವರ ಮೊರೆ ಕೇಳುವವರಿಲ್ಲ. ನಾನು ರೈತರ ಕಷ್ಟವನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಅನುಭವಿಸಿದ್ದೇನೆ. ರೈತರ ಆತ್ಮಹತ್ಯೆಯ ಪ್ರಮಾಣದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ ಇದೆ ಎಂದಾದರೆ ರೈತರ ಬದುಕು ಎಷ್ಟು ದುಸ್ತರವಾಗಿದೆ ನೀವೆ ಯೋಚಿಸಿ ಎಂದರು.

ಕಾರ್ಯಕ್ರಮದಲ್ಲಿ ರೈತರ ನೋವಿನ ಕುರಿತಾಗಿ ಅಪ್ಪಾ ಸಾಹೇಬ ಅಲಿಬಾದಿ ಬರೆದ ಹಾಡನ್ನು ಹಿನ್ನೆಲೆಗಾಯಕ ರವೀಂದ್ರ ಪ್ರಭು ಹಾಡಿದರು.

ತಾಯಿ ಸಾಕುವವರೂ ಸಮಾಜಕ್ಕೆ ಬೇಕು : ಪ್ರೊ. ಎಚ್. ರಮೇಶ್ ಕೆದಿಲಾಯ

ಮೂಡಬಿದಿರೆ ಡಿಸೆಂಬರ್. 3: ತಾಯಿ ಸಾಕುವವರೂ ಬೇಕಲ್ಲ, ನಮಗೆ ನಿಮಗೆ ಈ ಸಮಾಜಕ್ಕೆ ಎಂಬ ಒಂದು ವಾಕ್ಯಕ್ಕೆ ಸಿಡಿದ ಚಪ್ಪಾಳೆಗಳು ಅವರ ಮಾತುಗಳು ಜನರ ಮನಸ್ಸಿಗೆ ನಾಟಿತೆಂಬುವುದಕ್ಕೆ ಸಾಕ್ಷಿಯಾಗಿತ್ತು. ಆಳ್ವಾಸ್ ನುಡಿಸಿರಿ 2017ರ ಕವಿನಮನ ಕಾರ್ಯಕ್ರಮದಲ್ಲಿ ಪ್ರೊ. ಎಚ್. ರಮೇಶ್ ಕೆದಿಲಾಯ ಅವರ ‘ನಾಯಿ ಸಾಕುತ್ತಾರೆ’ ಎಂಬ ಕವನ ವಾಚನಕ್ಕೆ ಸಿಕ್ಕ ಪ್ರತಿಕ್ರಿಯೆ ಹೀಗಿತ್ತು.

“ಅಕಾಲದಲ್ಲಿ ಅಂಧನಾದ ವ್ಯಕ್ತಿಗೆ ಎರಡು ರೀತಿಯ ಜನರು ನೆನಪಿರುತ್ತಾರೆ. ಒಂದು ಮುಖವಿರುವವರು ಅಂದರೆ ದೃಷ್ಟಿ ಇದ್ದಾಗ ಕಂಡ ಮುಖಗಳು, ಮತ್ತೊಂದು ಮುಖವಿಲ್ಲದವರು, ಆತ ಅಂಧನಾದ ಮೇಲೆ ಸಂಧಿಸಿದ ವ್ಯಕ್ತಿಗಳು. ಆದರೆ ನಮ್ಮೆಲ್ಲರಿಗೂ ಕಣ್ಣಿದ್ದೂ ಮುಖವಿಲ್ಲದವರ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ತಂದೆ-ತಾಯಿ, ಬಂಧು-ಬಳಗದವರೇ ನಮಗೆ ಕಾಣದಾಗಿದ್ದಾರೆ” ಎಂದು ಅಭಿಪ್ರಾಯಪಟ್ಟರು.

“ಒಬ್ಬರ ಒಳ್ಳೆಯ ಕೆಲಸವನ್ನು ಮೆಚ್ಚುವಂತಹ ಅಂತರಾತ್ಮವನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ಧರ್ಮಕ್ಕೆ ಖುಷಿ ಹಂಚುವುದಕ್ಕೂ ಹಿಂಜರಿಯುತ್ತಿದ್ದೇವೆ. ಈ ಮನೋಭಾವವನ್ನು ಬದಲಿಸುವ ಕಾರ್ಯದಲ್ಲಿ ಕಾವ್ಯ ಮುನ್ನಡೆಯಬೇಕು. ಕಾರಣ ಅನುಭವ ಅಂತರಾತ್ಮ ಮುಟ್ಟಿದಾಗಲೇ ಕಾವ್ಯ ಸೃಜಿಸುವುದಕ್ಕೆ ಸಾಧ್ಯ” ಎಂದವರು ಪ್ರತಿಪಾದಿಸಿದರು.

“ನಾಯಿ ಸಾಕುವ ವ್ಯವಧಾನವಿರುವ ಇಂದಿನ ಯುವಜನತೆಗೆ, ತನ್ನ ತಾಯಿಯನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ. ಒಂದು ಶ್ವಾನದ ಬಗೆಗಿರುವ ಆಸ್ಥೆ ಕೂಡ ತನ್ನ ಹೆತ್ತವರ ವಿಷಯದಲ್ಲಿ ಇಲ್ಲವಾಗುತ್ತಿದೆ. ಅವರು ಅಪೇಕ್ಷಿಸುವ ಎರಡು ಪ್ರೀತಿಯ ಮಾತು ಸಹ ಅವರ ಪಾಲಿಗೆ ಭಾರವಾಗುತ್ತಿದೆ” ಎಂದು ವಿಡಂಬನಾತ್ಮವಾಗಿ ಇಂದಿನ ಸಂಬಂಧಗಳ ಪರಿಸ್ಥಿಯನ್ನು ತಮ್ಮ ಕವನದ ಮುಖೇನ ವಾಚಿಸಿದರು.

ಪ್ರೊ. ಎಚ್. ರಮೇಶ್‌ರ “ನಾಯಿ ಸಾಕುತಾರೆ” ಕವನವನ್ನು ಎಮ್.ಎಸ್.ಗಿರಿಧರ್ ರಾಗ ಸಂಯೋಜನೆಯಲ್ಲಿ ಸಂಗೀತ ಬಾಲಕೃಷ್ಣ ಗಾಯನ ಪ್ರಸ್ತುತಪಡಿಸಿದರು. ಅದಕ್ಕೆ ಬಾಗೋರು ಮಾರ್ಕಂಡೇಯ ತಮ್ಮ ಕುಂಚದ ಮೂಲಕ ಚಿತ್ರ ರೂಪ ನೀಡಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷರಾದ ಟಾ.ನಾಗತಿಹಳ್ಳಿ ಚಂದ್ರಶೇಖರ್, ನುಡಿಸಿರಿಯ ಉಪಾಧ್ಯಕ್ಷರಲ್ಲೊಬ್ಬರಾದ ಡಾ.ಜಯಪ್ರಕಾಶ್ ಮಾವಿನಕುಳಿ ಉಪಸ್ಥಿತರಿದ್ದರು.

500ಕ್ಕೂ ಹೆಚ್ಚು ಲೇಖನ – ಮನಮುಟ್ಟುವ ಕವನ

ಸುಮಾರು 500ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಪ್ರೊ. ಎಚ್. ರಮೇಶ್ ಕೆದಿಲಾಯ ಹಲವಾರು ಪತ್ರಿಕೆಗಳಲ್ಲಿ ತಮ್ಮ ಸಾಹಿತ್ಯವನ್ನು ಪ್ರಕಟಿಸುತ್ತಿರುತ್ತಾರೆ. ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಇವರು ಇಂತಹ ಅನೇಕ ಕವನಗಳನ್ನು ಜನರ ಮನಮುಟ್ಟುವಂತೆ ರಚಿಸುತ್ತಾರೆ.

Comments are closed.