ಕರಾವಳಿ

ಕ್ರೀಡಾ ರಾಜಧಾನಿಯಾಗಿ ಉಡುಪಿ – ಸಚಿವ ಪ್ರಮೋದ್ ಮಧ್ವರಾಜ್

Pinterest LinkedIn Tumblr

ಉಡುಪಿ: ಉಡುಪಿಯಲ್ಲಿ ಎಲ್ಲಾ ರೀತಿಯ ಕ್ರೀಡೆಗಳನ್ನು ನಡೆಸಲು ಅಗತ್ಯವಾಗುವಂತೆ , ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಉಡುಪಿಯನ್ನು ಕ್ರೀಡಾ ರಾಜಧಾನಿಯನ್ನಾಗಿ ಮಾಡುವ ತಮ್ಮ ಆಶಯ ಸಾಕಾರಗೊಂಡಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಗುರುವಾರ, ಉಡುಪಿ ಅಜ್ಜರಕಾಡಿನ ಈಜುಕೊಳದ ಮೇಲ್ಚಾವಣಿ ನಿರ್ಮಾಣ ಮಾಡುವ ಕುರಿತ 1.51 ಕೋಟಿ ರೂ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಉಡುಪಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್ ಪ್ರಾರಂಭಿಸಲು ಈಗಾಗಲೇ ಟೆಂಡರ್ ನೀಡಲಾಗಿದೆ, 3.75 ಕೋಟಿ ವೆಚ್ಚದಲ್ಲಿ ಒಳಾಂಗಣ ಲಾನ್ ಟೆನ್ನಿಸ್ ಕ್ರೀಡಾಂಗಣ, ಕಬಡ್ಡಿ ಕ್ರೀಡಾಂಗಣ ಹಾಗೂ ಕುಸ್ತಿ ಕ್ರೀಡಾಂಗಣ ನಿರ್ಮಾಣ ಮಾಡಲು ಹಣಕಾಸು ಇಲಾಖೆಯ ಅನುಮೋದನೆ ದೊರೆತಿದ್ದು,ಕಾಮಗಾರಿ ಪ್ರಾರಂಭವಾಗಲಿದೆ, 1 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಕ್ರೀಡಾ ಹಾಸ್ಟೆಲ್ ನಿರ್ಮಾಣ ಮಾಡಲು ಟೆಂಡರ್ ಕರೆದಿದ್ದು, ಈ ಹಾಸ್ಟೆಲ್‌ನಲ್ಲಿ ಕ್ರೀಡಾಪಟುಗಳು ಪದವಿಯವರೆಗೂ ಮುಂದುವರೆಯಲು ಅವಕಾಶ ಕಲ್ಪಿಸಲಾಗಿದೆ, ಮಲ್ಪೆ ಮತ್ತು ಪಡುಕರೆಯಲ್ಲಿ ಸಾಹಸ ಕ್ರೀಡೆ ನಡೆಸಲು 2 ಎಕ್ರೆ ಜಾಗ ಗುರುತಿಸಲಾಗಿದೆ, ಮಲ್ಪೆ ಬೀಚ್ ನಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಬೀಚ್ ವಾಕರ್ ಏರ್ಪಡಿಸಲು ಅಗತ್ಯ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ, ಉಡುಪಿ ಒಳಾಂಗಣ ಕ್ರೀಡಾಂಗಣಕ್ಕೆ ಎಸಿ ಅಳವಡಿಸಲು ಹಣ ಬಿಡುಗಡೆ ಮಾಡಲಾಗಿದು, ಟೆಂಡರ್ ಕಾಮಗಾರಿ ಅಂತಿಮ ಹಂತದಲ್ಲಿದೆ, ಬ್ರಹ್ಮಾವರದಲ್ಲಿ ೫.೫ ಎಕ್ರೆ ಪ್ರದೇಶದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ, ಕ್ರೀಡಾ ಸಚಿವರಾದ ನಂತರ ಉಡುಪಿಯಲ್ಲಿ ಕ್ರೀಡಾಭಿವೃದ್ದಿಗಾಗಿ 20 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಲಾಗಿದ್ದು, ಉಡುಪಿಯಲ್ಲಿ ಎಲ್ಲಾ ರೀತಿಯ ಕ್ರೀಡೆಗಳನ್ನು ನೆಡೆಸಲು ಅಗತ್ಯ ಮೂಲಭೂತ ಸೌಕರ್ಯ ಒಗದಿಸುವ ಮೂಲಕ ಕ್ರೀಡಾ ರಾಜಧಾನಿಯನ್ನಾಗಿ ಮಾಡಲು ಪ್ರಯತ್ನಿಸಲಾಗಿದೆ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಅಭಿಜಿನ್, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಈಜುಕೊಳದ ಉಸ್ತುವಾರಿ ವಹಿಸಿರುವ ಯತೀಶ್, ರಾಜ್ಯ ಯುವ ಒಕ್ಕೂಟಗಳ ಅಧ್ಯಕ್ಷ ಡಾ. ಬಾಲಾಜಿ ಮತ್ತಿತರರು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು

 

Comments are closed.