ಕರಾವಳಿ

ಅತಿಯಾದ ಪ್ರೋಟಿನ್ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆ

Pinterest LinkedIn Tumblr

ನಮ್ಮ ಶರೀರದ ಪ್ರತಿಯೊಂದು ಜೀವಕೋಶ ಮತ್ತು ಅಂಗಕ್ಕೂ ಪ್ರೋಟಿನ್ ಅತ್ಯಗತ್ಯವಾಗಿದೆ. ಅದು ನಮ್ಮ ಸ್ನಾಯುಗಳನ್ನು ಬಲಗೊಳಿಸುವುದರಿಂದ ಹಿಡಿದು ಜೀರ್ಣಕಾರ್ಯವನ್ನು ಸುಸೂತ್ರಗೊಳಿಸುವವರೆಗೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಕಷ್ಟು ಪ್ರೋಟಿನ್ ಸೇವಿಸದಿದ್ದರೆ ಸ್ನಾಯುಗಳು ಬಲಗುಂದುತ್ತವೆ.

ಪ್ರೋಟಿನ್ ಸೇವನೆ ಮುಖ್ಯವಾಗಿದೆಯಾದರೂ ಅತಿಯಾದ ಸೇವನೆ ವ್ಯತಿರಿಕ್ತ ಪರಿಣಾಮಗಳನ್ನಂಟು ಮಾಡುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಅದು ಪಿತ್ತೋದ್ರೇಕ ಮತ್ತು ಅತಿಸಾರದಂತಹ ಅಹಿತಕರ ಲಕ್ಷಣಗಳನ್ನು ತೋರಿಸಬಹುದು. ಅತಿಯಾದ ಪ್ರೋಟಿನ್ ಸೇವನೆಯಿಂದ ರಕ್ತದಲ್ಲಿ ಅಮಿನೊ ಆಯಸಿಡ್, ಇನ್ಸುಲಿನ್ ಅಥವಾ ಅಮೋನಿಯಾ ಉತ್ಪತ್ತಿಯಾಗುವುದರಿಂದ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ನಾವು ಸೇವಿಸುವ ಪ್ರೋಟಿನ್ಯುಕ್ತ ಆಹಾರ ನಮ್ಮ ಶರೀರವನ್ನು ಸೇರುವ ಶೇ.35 ಕ್ಯಾಲೊರಿಗಳಷ್ಟಿರಬೇಕು ಎಂದು ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ ಶಿಫಾರಸು ಮಾಡಿದೆ. ಸರಾಸರಿಯಾಗಿ ಮಹಿಳೆಯರು ದಿನಕ್ಕೆ 35 ಗ್ರಾಂ ಮತ್ತು ಪುರುಷರು ಸುಮಾರು 56 ಗ್ರಾಂ ಪ್ರೋಟಿನ್ ಸೇವಿಸಬೇಕು. ಅಲ್ಲದೆ ಕ್ರಿಯಾಶೀಲ ವ್ಯಕ್ತಿಗಳಿಗೆ ಇತರರಿಗಿಂತ ಹೆಚ್ಚು ಪ್ರೋಟಿನ್ ಅಗತ್ಯವಾಗಿರುತ್ತದೆ. ಹೀಗಾಗಿ ನೀವು ದಿನವೂ ವ್ಯಾಯಾಮ ಮಾಡುತ್ತೀ ರಾದರೆ ಪ್ರೋಟಿನ್ ಸೇವನೆಯ ಪ್ರಮಾಣವನ್ನು ವೈದ್ಯರಿಂದ ತಿಳಿದುಕೊಳ್ಳುವುದು ಒಳ್ಳೆಯದು.

ಅತಿಯಾದ ಪ್ರೋಟಿನ್ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಮಾಹಿತಿ ಇಲ್ಲಿದೆ.

ನಿರ್ಜಲೀಕರಣ:
ಬ್ಲಡ್ ಯೂರಿಯಾ ನೈಟ್ರೋಜನ್ ಮೂತ್ರಪಿಂಡಗಳ ಕಾರ್ಯ ನಿರ್ವಹಣೆ ಸಂದರ್ಭ ಉತ್ಪತ್ತಿಯಾಗುವ ತ್ಯಾಜ್ಯಗಳಲ್ಲೊಂದಾಗಿದೆ. ಪ್ರೋಟಿನ್ ಸೇವನೆ ಹೆಚ್ಚಿದರೆ ಹೆಚ್ಚುವರಿ ನೈಟ್ರೋಜನ್ ಅನ್ನು ಶರೀರದಿಂದ ಹೊರಹಾಕಲು ಹೆಚ್ಚಿನ ನೀರಿನ ಬಳಕೆಯಾಗುವುದರಿಂದ ನಿರ್ಜಲೀಕರಣ ಹೆಚ್ಚುತ್ತದೆ. ಆದ್ದರಿಂದ ಪ್ರತಿ 100 ಗ್ರಾಂ ಪ್ರೋಟಿನ್ಗೆ ಅರ್ಧ ಗ್ಯಾಲನ್ ನೀರು ಕುಡಿಯಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

ಮೂತ್ರಿಪಿಂಡಗಳಿಗೆ ಅಪಾಯ:
ಅತಿಯಾದ ಪ್ರೋಟಿನ್ ಇರುವ ಆಹಾರ ಸೇವಿಸಿದರೆ ನಮ್ಮ ಶರೀರವು ಅದನ್ನು ಜೀರ್ಣಿಸಿಕೊಳ್ಳುವಾಗ ತ್ಯಾಜ್ಯಗಳನ್ನು ಹೊರಹಾಕುವ ಪ್ರಮುಖ ಕಾರ್ಯವನ್ನು ನಿರ್ವಹಿಸುವ ಮೂತ್ರಪಿಂಡಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ. ಮೂತ್ರಪಿಂಡ ಕಾಯಿಲೆಯ ಆರಂಭಿಕ ಹಂತದಲ್ಲಿರುವವರಲ್ಲಿ ಮಾತ್ರ ಮೂತ್ರಪಿಂಡಗಳಿಗೆ ಇಂತಹ ಹಾನಿಯಾಗಿರುವುದು ಕಂಡು ಬರುತ್ತದೆ ಎಂದೂ ಅಧ್ಯಯನಗಳು ತೋರಿಸಿವೆ.

ತೂಕ ಹೆಚ್ಚುವಿಕೆ:
ನಮ್ಮ ದೇಹವು ಪ್ರತಿದಿನ ನಿರ್ದಿಷ್ಟ ಪ್ರಮಾಣದ ಪ್ರೋಟಿನ್ ಸೇವನೆಗೆ ಹೊಂದಿಕೊಂಡಿರುತ್ತದೆ. ಪ್ರೋಟಿನ್ನ ಪ್ರತಿ ಗ್ರಾಮ್ ನಾಲ್ಕು ಕ್ಯಾಲೊರಿಗಳನ್ನೊಳ ಗೊಂಡಿರುತ್ತದೆ. ಅತಿಯಾದ ಪ್ರೋಟಿನ್ ಸೇವಿಸಿದರೆ ಅದು ಶರೀರದ ತೂಕ ಹೆಚ್ಚಲು ಕಾರಣವಾಗುತ್ತದೆ. ಉದಾಹರಣೆಗೆ ನಾವು 100 ಗ್ರಾಂ ಪ್ರೋಟಿನ್ ಸೇವಿಸಿದರೆ ನಮ್ಮ ಶರೀರವು 50 ಗ್ರಾಂ ಅನ್ನು ಮಾತ್ರ ಬಳಸಿಕೊಳ್ಳುತ್ತದೆ ಮತ್ತು 200 ಕ್ಯಾಲೊರಿಗಳಿಗೆ ಸಮವಾಗಿರುವ ಉಳಿದ 50 ಗ್ರಾಂ ಪ್ರೋಟಿನ್ ಕೊಬ್ಬಿನ ರೂಪದಲ್ಲಿ ಶರೀರದಲ್ಲಿ ಸಂಗ್ರಹವಾಗುತ್ತದೆ.

ಎಲುಬುಗಳ ದುರ್ಬಲಗೊಳ್ಳುವಿಕೆ:
ನಮ್ಮ ಶರೀರದಲ್ಲಿಯ ಮೂಳೆಗಳು ನಾಶಗೊಳ್ಳುವ ಮತ್ತು ದುರ್ಬಲಗೊಳ್ಳುವ ಸ್ಥಿತಿಯನ್ನು ಆಸ್ಟಿಯೊಪೊರೊಸಿಸ್ ಎಂದು ಕರೆಯಲಾಗುತ್ತದೆ. ಅತಿಯಾಗಿ ಪ್ರೋಟಿನ್ ಸೇವಿಸಿದಾಗ ನಾವು ವಿಸರ್ಜಿಸುವ ಮಲದಲ್ಲಿ ಕ್ಯಾಲ್ಶಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಜೀರ್ಣ ವ್ಯವಸ್ಥೆಯ ಅಗತ್ಯಗಳಿಗನುಗುಣವಾಗಿ ಅದು ನಮ್ಮ ಎಲುಬುಗಳಲ್ಲಿಯ ಕ್ಯಾಲ್ಶಿಯಂ ಅನ್ನು ಬಳಸಿಕೊಳ್ಳುತ್ತದೆ. ನಮ್ಮ ಆಹಾರ ಶೇ.50ಕ್ಕೂ ಹೆಚ್ಚಿನ ಪ್ರೋಟಿನ್ ಒಳಗೊಂಡಿದ್ದರೆ ಅದು ಪ್ರತಿ ವರ್ಷ ಶೇ.1ರಷ್ಟು ಎಲುಬು ನಾಶಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಅಧ್ಯಯನಗಳಿಂದ ಬೆಳಕಿಗೆ ಬಂದಿದೆ.

ಮಲಬದ್ಧತೆ:
ಅತಿಯಾದ ಪ್ರಮಾಣದಲ್ಲಿ ಪ್ರೋಟಿನ್ ಸೇವಿಸುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶವನ್ನೂ ಸೇವಿಸಬೇಕು ಎನ್ನುವುದು ಗೊತ್ತಿರುವುದಿಲ್ಲ. ನಾರಿನ ಕೊರತೆಯು ಮಲಬದ್ಧತೆಗೆ ಕಾರಣವೇ ಹೊರತು ಪ್ರೋಟಿನ್ ಅಲ್ಲ. ಹೆಚ್ಚು ನಾರಿನಂಶ ಒಳಗೊಂಡಿರುವ ಆಹಾರದ ನಿಯಮಿತ ಸೇವನೆ ಈ ಸಮಸ್ಯೆಯಿಂದ ಪಾರಾಗಲು ಅತ್ಯುತ್ತಮ ಮಾರ್ಗವಾಗಿದೆ.

ಪಿತ್ತೋದ್ರೇಕ:
ಅತಿಯಾದ ಪ್ರೋಟಿನ್ ಸೇವನೆಯಿಂದ ಜೀರ್ಣ ಕ್ರಿಯೆ ಸರಿಯಾಗಿ ಆಗದೆ ವಾಕರಿಕೆಯ ಅನುಭವವನ್ನುಂಟು ಮಾಡಬಹುದು. ನಾವು ಪ್ರೋಟಿನ್ ಸೇವಿಸಿದಾಗ ಜಠರ ಮತ್ತು ಸಣ್ಣಕರುಳಿನಲ್ಲಿರುವ ಜೀರ್ಣ ಕಿಣ್ವಗಳು ಅದರ ದೊಡ್ಡ ಕಣಗಳನ್ನು ನಮ್ಮ ಶರೀರವು ನಂತರ ಹೀರಿಕೊಳ್ಳಬಹುದಾದ ಅಮಿನೊ ಆಯಸಿಡ್ ಆಗಿ ವಿಭಜಿಸುತ್ತವೆ. ಪ್ರೋಟಿನ್ನ ದಿಢೀರ ಒಳಹರಿವಿನಿಂದಾಗಿ ಅದಕ್ಕೆ ಹೊಂದಿಕೆಯಾಗುವಂತೆ ಜೀರ್ಣ ಕಿಣ್ವಗಳ ಕ್ರಿಯಾಶೀಲತೆಯೂ ಹೆಚ್ಚುತ್ತದೆ. ಜೀರ್ಣ ವ್ಯವಸ್ಥೆ ಸಹಜ ಸ್ಥಿತಿಗೆ ಮರಳುವವರೆಗೂ ವಾಕರಿಕೆಯ ಅನುಭವವಾಗುತ್ತಲೇ ಇರುತ್ತದೆ.

ಹೊಟ್ಟೆ ಕಿವಿಚುವಿಕೆ ಮತ್ತು ಉಬ್ಬರಿಕೆ:
ಒಂದೇ ಬಾರಿ ಅತಿಯಾಗಿ ಪ್ರೋಟಿನ ಸೇವಿಸುವದರಿಂದ ನಮ್ಮ ಜೀರ್ಣ ಕಿಣ್ವಗಳು ತಮ್ಮ ಸಾಮರ್ಥ್ಯವನ್ನು ಮೀರಿ ಕೆಲಸ ಮಾಡಬೇಕಾಗುತ್ತದೆ ಮತ್ತು ಇದು ಜೀರ್ಣ ಕಾರ್ಯವನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ಹೊಟ್ಟೆ ಕಿವಿಚಿದಂತಾಗುತ್ತದೆ ಮತ್ತು ಉಬ್ಬರಿಸುತ್ತದೆ.

ಆಯಾಸ:
ಹೆಚ್ಚಿನ ಜನರು ಶರೀರದ ತೂಕವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪ್ರೋಟಿನ್ ಸಮೃದ್ಧ ಆಹಾರವನ್ನು ಸೇವಿಸುತ್ತಾರೆ ಮತ್ತು ಪಿಷ್ಟಯುಕ್ತ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಆದರೆ ಇದು ಆಯಾಸ ಸೇರಿದಂತೆ ಕೆಲವು ಅನಪೇಕ್ಷಿತ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು.

ಕಡಿಮೆ ಹಸಿವು:
ಅತಿಯಾದ ಪ್ರೋಟಿನ್ ಸೇವನೆ ಹಸಿವನ್ನು ತಗ್ಗಿಸುವ ಹಾರ್ಮೋನ್ನ ಬಿಡುಗಡೆಯನ್ನು ಹೆಚ್ಚಿಸುತ್ತದೆ. ಸರಿಯಾದ ಪ್ರಮಾಣದಲ್ಲಿ ಪ್ರೋಟಿನ್ ಸಮೃದ್ಧ ಆಹಾರ ಶರೀರದ ತೂಕವನ್ನು ಕಡಿಮೆ ಮಾಡಲು ಉತ್ತಮ ವಿಧಾನವಾಗಿರಬಹುದು. ಆದರೆ ಇತ್ತೀಚಿಗೆ ಇಲಿಗಳ ಮೇಲೆ ನಡೆಸಲಾದ ಸಂಶೋಧನೆಯು ಅತಿಯಾದ ಪ್ರೋಟಿನ್ ಸೇವನೆಯು ಮಾನವರಲ್ಲಿ ಹಸಿವು ಕ್ಷೀಣಿಸುವಿಕೆಯೊಂದಿಗೆ ತಳುಕು ಹಾಕಿಕೊಂಡಿರುವ ಪೆಪ್ಟೈಡ್ ವೈವೈ(ಪಿವೈವೈ) ಎಂಬ ಹಸಿವು ನಿಯಂತ್ರಕ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ ಎನ್ನುವುದನ್ನು ಬೆಳಕಿಗೆ ತಂದಿದೆ.

Comments are closed.