ಮಂಗಳೂರು: ‘ಕೃಷಿ ಮತ್ತು ಟೈಲರ್ ವೃತ್ತಿಯೊಂದಿಗೆ ಯಕ್ಷಗಾನ ತಾಳಮದ್ದಳೆಯಲ್ಲಿ ನುರಿತ ಅರ್ಥಧಾರಿಯಾಗಿ ಹೆಸರು ಪಡೆದವರು ಎ. ಕೆ. ನಾರಾಯಣ ಶೆಟ್ಟರು. ಅವರ ಮಾರ್ಗದರ್ಶನದಿಂದಲೇ ತಾನಿಂದು ನಾಲ್ಕು ಜನ ಗುರುತಿಸುವ ಉದ್ಯಮಿಯಾಗಿ ಬೆಳೆಯಲು ಸಾಧ್ಯವಾಯಿತು’ ಎಂದು ಮಹೇಶ್ ಮೋಟಾರ್‍ಸ್ ಮಾಲಿಕ ಮತ್ತು ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘದ ಉಪಾಧ್ಯಕ್ಷ ಎ.ಕೆ. ಜಯರಾಮ ಶೇಕ ಹೇಳಿದ್ದಾರೆ.
`ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಮಂಗಳೂರಿನ ಪುರಭವನದಲ್ಲಿ ಏರ್ಪಡಿಸಿದ ಪಂಚಮ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದಲ್ಲಿ ಕೀರ್ತಿಶೇಷ ಅರ್ಥಧಾರಿಗಳಾದ ಎ. ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಅವರ ಸಂಸ್ಮರಣಾ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.
ದಿ| ನಾರಾಯಣ ಶೆಟ್ಟರಂತೆಯೇ ಅವರ ನಿಕಟ ಬಂಧು ದಿ| ಎ. ಕೆ. ಮಹಾಬಲ ಶೆಟ್ಟರು ಸ್ವತಃ ಅರ್ಥಧಾರಿಯಾಗಿ ಫರಂಗಿಪೇಟೆ ಪರಿಸರದಲ್ಲಿ ನೂರಾರು ಯಕ್ಷಗಾನ ಕಾರ್ಯಕ್ರಮಗಳನ್ನು ಸಂಯೋಜಿಸಿದವರು. ಇವರಿಬ್ಬರೂ ಕಲೆಯೊಂದಿಗೆ ಬದುಕು ಕಟ್ಟಿಕೊಂಡ ಮಹನೀಯರು’ ಎಂದವರು ನುಡಿದರು.ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸಂಸ್ಮರಣಾ ಜ್ಯೋತಿ ಬೆಳಗಿದರು.
‘ಜಾಗರದ ಜೋಶಿ’ ಬಿಡುಗಡೆ:
ಲೇಖಕ ನಾ. ಕಾರಂತ ಪೆರಾಜೆ ಸಂಪಾದಿಸಿದ ಡಾ. ಎಂ. ಪ್ರಭಾಕರ ಜೋಶಿ ಅವರ ಪೂರ್ವ ಪ್ರಕಟಿತ ಲೇಖನ – ಮುನ್ನುಡಿಗಳ ಸಂಕಲನ ‘ಜಾಗರದ ಜೋಶಿ’ ಕೃತಿಯನ್ನು ಬೆಂಗಳೂರಿನ ಉದ್ಯಮಿ ಹಾಗೂ ಮದರ್ ಫೌಂಡೇಷನ್ ಅಧ್ಯಕ್ಷ ರಾಜೇಶ್ ಶೆಟ್ಟಿ ಕುತ್ಯಾರು ಬಿಡುಗಡೆ ಗೊಳಿಸಿದರು. ನ್ಯಾಯವಾದಿ ಪುಳಿಂಚ ಶ್ರೀಧರ ಶೆಟ್ಟಿ, ಮುಂಬಯಿ ಉದ್ಯಮಿ ಹಾಗೂ ಅಡ್ಯಾರ್ ಗಾರ್ಡನ್‌ನ ಆಡಳಿತ ನಿರ್ದೇಶಕ ಕಿಶನ್ ಶೆಟ್ಟಿ, ನಿವೃತ್ತ ಪ್ರಾಚಾರ್ಯ ಪೂವಪ್ಪ ಶೆಟ್ಟಿ ತುಂಬೆ, ಪ್ರಗತಿಪರ ಕೃಷಿಕ ಜಯರಾಮ ಸಾಮಾನಿ ಮುಖ್ಯ ಅತಿಥಿಗಳಾಗಿದ್ದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆ ಗೈದರು. ಸುಧಾಕರ ರಾವ್ ಪೇಜಾವರ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ದಿನಕರ ಎಸ್. ಪಚ್ಚನಾಡಿ ನಿರೂಪಿಸಿದರು. ಕರುಣಾಕರ ಶೆಟ್ಟಿ ಪಣಿಯೂರು, ಎಂ ಸುಂದರ ಶೆಟ್ಟಿ ಬೆಟ್ಟಂಪಾಡಿ, ಎ. ಶಿವಾನಂದ ಕರ್ಕೇರ, ವಕ್ವಾಡಿ ಶೇಖರ ಶೆಟ್ಟಿ, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಕೃಷ್ಣಪ್ಪ ಗೌಡ ಪಡ್ಡಂಬೈಲ್, ಸಿದ್ಧಾರ್ಥ ಆಜ್ರಿ, ಅಶೋಕ ಮಾಡ, ನಿವೇದಿತಾ ಎನ್. ಶೆಟ್ಟಿ ಮತ್ತು ಶೋಭಾ ಕೇಶವ ಉಪಸ್ಥಿತರಿದ್ದರು.
ಬಳಿಕ ಪಟ್ಲ ಸತೀಶ್ ಶೆಟ್ಟಿ ಮತ್ತು ಭವ್ಯಶ್ರೀ ಕುಲ್ಕುಂದ ಅವರ ಭಾಗವತಿಕೆಯಲ್ಲಿ ‘ಗಾಂಗೇಯ’ ತಾಳಮದ್ದಳೆ ಜರಗಿತು.