ಕರಾವಳಿ

ಭೂಕಬಳಿಕೆ ಆರೋಪ : ಬಿಜೆಪಿಯಿಂದ ಸಚಿವ ರೈ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು

Pinterest LinkedIn Tumblr

ಮಂಗಳೂರು, ನವೆಂಬರ್.16: ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿ.ರಮಾನಾಥ ರೈಯವರು ಕಳ್ಳಿಗೆಯಲ್ಲಿ ಸರಕಾರಿ ಜಾಗವನ್ನು ಕಬಳಿಸಿದ್ದಾರೆ.ರಮಾನಾಥ್ ರೈ ಅವರ ಪತ್ನಿ ಅಕ್ರಮ ಸಕ್ರಮದ ಮೂಲಕ ಬಡವರ ಜಾಗ ಕಬಳಿಸಿದ್ದಾರೆ. ಹೆಂಡತಿಯ ಹೆಸರಿನಲ್ಲಿ 3 ಎಕರೆ 4 ಸೆಂಟ್ಸ್ ಜಾಗ ಕಬಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿ, ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗುವುದು ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ಜಿತೇಂದ್ರ ಕೊಟ್ಟಾರಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಭೂಮಿ ಮಂಜೂರು ಮಾಡುವ ಜತೆಯಲ್ಲಿ ಅವರ ವಿರುದ್ಧ ಅತಿಕ್ರಮಣದ ಆರೋಪಗಳು ಮಾಧ್ಯಮಗಳ ಮೂಲಕ ಹೊರಬಂದಿದೆ. ಈ ಕುರಿತು ಉಸ್ತುವಾರಿ ಸಚಿವರ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.

ಮಾಣಿ ಗ್ರಾಮದಲ್ಲಿ ಸಚಿವರು ತಮ್ಮ ಪತ್ನಿ ಹೆಸರಿನಲ್ಲಿ ದರ್ಖಾಸ್ತು ಭೂಮಿಯನ್ನು ತಮ್ಮ ಪ್ರಭಾವ ಬಳಸಿಕೊಂಡು ಪಡೆದುಕೊಂಡಿದ್ದಾರೆ. ಈ ಸಮಯದಲ್ಲಿ ಅವರು ಶಾಸಕ ಹಾಗೂ ಸಚಿವ ಸ್ಥಾನದಲ್ಲಿ ಇದ್ದು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಭೂ ಸುಧಾರಣೆ ಕಾಯಿದೆ ಪ್ರಕಾರ ಈ ಭೂಮಿ ಮಂಜೂರು ಆಗಿಲ್ಲ ಎಂದು ಅವರು ಆರೋಪ ಮಾಡಿದರು.

ಇದೇ ಮಾದರಿಯಲ್ಲಿ ಬಂಟ್ವಾಳದ ಕಳ್ಳಿಗೆ ಗ್ರಾಮವನ್ನು ಪೋಡಿಮುಕ್ತ ಎಂದು ಗ್ರಾಮ ಪಂಚಾಯತ್ ಹೇಳಿದರೂ ಕೂಡ ಸರ್ವೆ ಸಂಖ್ಯೆ 97/1ರಲ್ಲಿ 28 ಎಕರೆ ಜಾಗದಲ್ಲಿ ಸಚಿವರು 10 ಎಕರೆಯಲ್ಲಿ ರಬ್ಬರ್ ಬೆಳೆಸಿದ ವಿಚಾರವನ್ನು ಇದರಲ್ಲಿ ಪ್ರಸ್ತಾಪ ಮಾಡಿಯೇ ಇಲ್ಲ. ಸಚಿವರು ಎಲ್ಲ ಭೂಮಿಗೂ ದಾಖಲೆಗಳು ಇದೆ ಎಂದು ಹೇಳಿದ್ರೂ ಕೂಡ ಅವರ ದಾಖಲೆಗಳು ಸರಿಯಿಲ್ಲ ಎನ್ನುವುದು ನಮ್ಮ ಆರೋಪ. ಇದಕ್ಕೆ ಸಚಿವರು ಉತ್ತರ ನೀಡಲಿ ಎಂದು ಹೇಳಿದರು.

ಬಿಜೆಪಿ ಸಚಿವರಲ್ಲಿ ದಾಖಲೆ ಕೇಳುತ್ತಿಲ್ಲ. 1 ಎಕರೆ ಜಾಸ್ತಿ ಭೂಮಿ ಹೇಗೆ ಬಂದಿದೆ ಎಂದು ಕೇಳುತ್ತಿದ್ದೇವೆ. ರೈಯವರು ಚುನಾವಣಾ ಆರೋಗಕ್ಕೆ ನೀಡಿರುವ ಆದಾಯ ತೆರಿಗೆ ಘೋಷಣೆಯಲ್ಲಿ ಪತ್ನಿ ಹೆಸರನ್ನು ಧನಭಾಗ್ಯ ರೈ ಎಂದು ಹೇಳಿದ್ದಾರೆ ಹೊರತು ಶೈಲಾ ರೈ ಎಂದು ಎಲ್ಲೂ ಹೇಳಿಲ್ಲ. ರಾಜ್ಯ ಸರ್ಕಾರ ಮೇ 15ರಂದು ಕಳ್ಳಿಗೆ ಗ್ರಾಮವನ್ನು ಪೋಡಿ ಮುಕ್ತ ಗ್ರಾಮ ಎಂದು ಘೋಷಿಸಿದ್ದು, ಗ್ರಾಮದ 97/1ರಲ್ಲಿ 28 ಎಕರೆ ಜಾಗವನ್ನು ಅತಿಕ್ರಮಣ ಮಾಡಿ, 10 ಎಕರೆಯಲ್ಲಿ ಸಚಿವರು ರಬ್ಬರ್ ತೋಟಮಾಡಿದ್ದಾರೆ.

ಪೋಡಿ ಅಳತೆ ಮಾಡಲು ನೀಡಿರುವ ಸೂಚನೆಯಲ್ಲಿ ಈ ಸರ್ವೇ ನಂಬರ್ ಇಲ್ಲ. ದಾಖಲೆಯಿಂದಲೇ ತೆಗೆದು ಹಾಕಲಾಗಿದೆ. ಸಚಿವರು ಅಧಿಕಾರ ದುರ್ಬಳಕ್ಕೆ ಮಾಡಿ ಅದನ್ನು ದಾಖಲೆಯಿಂದ ತೆಗೆದು ಹಾಕಿದ್ದಾರೆ. ಇದಕ್ಕೂ ಸಚಿವರು ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು.

Comments are closed.