ಕರಾವಳಿ

ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಜೀವನದಲ್ಲಿ ಯಶಸ್ವಿ ಖಂಡಿತ : ವಿದ್ಯಾರ್ಥಿಗಳಿಗೆ ಧರಣೇಂದ್ರ ಕುಮಾರ್ ಕರೆ

Pinterest LinkedIn Tumblr

ಮ0ಗಳೂರು ನವೆಂಬರ್ 15 : ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಸಮಾಜದ ಆಗುಹೋಗುಗಳನ್ನು ಅರಿತು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್ ಹೇಳಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಉಜಿರೆ ಎಸ್‍ಡಿಎಂ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ವೇಣೂರು ಬಜಿರೆ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ “ವ್ಯಸನ ಮುಕ್ತ ಭಾರತ ಹಾಗೂ ಗಾಂಧೀ ಚಿಂತನೆಗಳು” ಕುರಿತು ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳನ್ನು ಕೇವಲ ಅಧ್ಯಯನಕ್ಕೆ ಸೀಮಿತಗೊಳಿಸುವುದು ವಿಷಾಧಕರವಾಗಿದೆ. ಸಮಾಜಮುಖಿಯಾಗಿ ಬೆಳೆಸಿದರೆ, ಅವರು ಸಮಾಜಕ್ಕೆ ಆಸ್ತಿಯಾಗಬಲ್ಲರು. ಇದರಿಂದ ಸಮಾಜದಲ್ಲಿ ಕೆಡುಕುಗಳ ವಿರುದ್ಧ ಧ್ವನಿ ಎತ್ತಲು ಚಿಕ್ಕಂದಿನಲ್ಲೇ ಅವರಿಗೆ ಧೈರ್ಯ ಬರುತ್ತದೆ. ಇದು ಅಂತಿಮವಾಗಿ ಮಹಾತ್ಮಾ ಗಾಂಧೀಜಿ ಕನಸಾದ ದುಶ್ಚಟರಹಿತವಾದ ಸಮಾಜ ನಿರ್ಮಾಣಕ್ಕೆ ಪೂರಕವಾಗುತ್ತದೆ ಎಂದು ಧರಣೇಂದ್ರ ಕುಮಾರ್ ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ಜಯರಾಂ ಪೂಜಾರಿ, ಮಾದಕ ವ್ಯಸನಗಳಿಗೆ ಆಕರ್ಷಣೆಯಿಂದ ಯುವ ಜನತೆ ತಮ್ಮ ಸುಂದರ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಶೈಕ್ಷಣಿಕ ಸಂಸ್ಥೆಗಳನ್ನೇ ಕೇಂದ್ರೀಕರಿಸಿ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಚಟುವಟಿಕೆ ಕಂಡುಬರುತ್ತಿರುವುದು ಕಳವಳಕಾರಿ. ಇಂತಹ ದುಶ್ಟ ಶಕ್ತಿಗಳ ನಿಗ್ರಹಕ್ಕೆ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ಕರೆ ನೀಡಿದರು. ಯುವಜನತೆ ಒಳ್ಳೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಶಿಕ್ಷಣದ ಮೂಲತತ್ವವನ್ನು ಅರಿಯಬೇಕು ಎಂದರು.

ಮಾದಕ ವಸ್ತುಗಳ ಚಟಕ್ಕೆ ಬೀಳುವ ವ್ಯಕ್ತಿಯು ಅದರಿಂದ ಹೊರಬರಲು ಬಹಳ ಕಷ್ಟಪಡಬೇಕಾಗುತ್ತದೆ. ವರ್ತಮಾನ ಕಾಲದಲ್ಲಿ ಸಂಸಾರಗಳು ಕಿರಿದಾಗಿದ್ದು, ಇರುವ ಒಬ್ಬ ಮಕ್ಕಳೂ ದುಶ್ಚಟಗಳಿಗೆ ದಾಸರಾದರೆ, ಪಾಲಕರಲ್ಲೂ ಅತಂತ್ರ ಭವಿಷ್ಯ ಮೂಡಿಸುತ್ತದೆ. ದೇಶ ಸ್ವಾತಂತ್ರ್ಯ ಗಳಿಸಲು ಪಟ್ಟ ಕಷ್ಟ ಮತ್ತು ಹೋರಾಟದ ಚರಿತ್ರೆಯನ್ನು ಮನಗಂಡು ಇಂದಿನ ವಿದ್ಯಾರ್ಥಿಗಳು ದೇಶವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ಪಣತೊಡಬೇಕು ಎಂದು ಜಯರಾಂ ಪೂಜಾರಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‍ಡಿಎಂ ಕಾಲೇಜಿನ ಉಪನ್ಯಾಸಕ ಡಾ. ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬಜಿರೆ ಶಾಲಾ ಮುಖ್ಯೋಪಾಧ್ಯಾಯಿನಿ ಕಮಲಾಜಿ ಎಸ್. ಜೈನ್, ಎನ್‍ಎಸ್‍ಎಸ್ ಯೋಜನಾಧಿಕಾರಿ ಗಣೇಶ ವಿ. ಶೆಂಡೈ, ಉಪನ್ಯಾಸಕಿ ಆಶಾಕಿರಣ್ ಉಪಸ್ಥಿತರಿದ್ದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿದರು. ವಿದ್ಯಾರ್ಥಿನಿ ಜ್ಯೋತಿಕಾ ವಂದಿಸಿದರು. ಕಾರ್ಯಕ್ರಮದ ಬಳಿಕ ಗಣೇಶ ನಾವಡ ಅವರ ತಂಡದವರಿಂದ ಸಾಮಾಜಿಕ ಸಾಂಸ್ಕಂತಿಕ ಕಾರ್ಯಕ್ರಮ ನಡೆಯಿತು.

Comments are closed.