ಕರಾವಳಿ

ನವೆಂಬರ್.15: ಮಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಸಹಕಾರ ಸಪ್ತಾಹ ಕಾರ್ಯಕ್ರಮ

Pinterest LinkedIn Tumblr

ಮಂಗಳೂರು, ನ. 10 : 64ನೇ ಅಖಿಲ ಭಾರತ ಸಹಕಾರ ಸಪ್ತಾಹ-2017 ಅಂಗವಾಗಿ ನ. 15ರಂದು ನಗರದ ನೆಹರೂ ಮೈದಾನದಲ್ಲಿ ರಾಜ್ಯ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,”ಸಹಕಾರ ಸಂಸ್ಥೆಗಳು: ಉತ್ಪಾದಕರಿಂಗ ಗ್ರಾಹಕರವರೆಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ತೆಂಗಿನ ನಾರಿನ ಮಹಾಮಂಡಳ ನಿ., ಬೆಂಗಳೂರು, ದ. ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಮಂಗಳೂರು, ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರರ ಮಹಾಮಂಡಳ ನಿ., ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಲಿ., ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ರಿ., ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆಯ ಸಹಯೋಗದೊಂದಿಗೆ ಈ ರಾಜ್ಯಮಟ್ಟದ ಕಾರ್ಯಕ್ರಮ ಮಂಗಳೂರಿನ ನೆಹರೂ ಮೈದಾನದ ಫುಟ್‌ಬಾಲ್ ಗ್ರೌಂಡ್‌ನಲ್ಲಿ ನಡೆಯಲಿದೆ ಎಂದು ಹೇಳಿದರು.

ನವೆಂಬರ್ 15ರಂದು ಬೆಳಿಗ್ಗೆ 10:30ಕ್ಕೆ ಸಹಕಾರ ಸಚಿವ ರಮೇಶ್ ಜಾರಕಿಹೊಳಿ ಅವರು ಸಹಕಾರ ಸಪ್ತಾಹದ ಉದ್ಘಾಟನೆ ಹಾಗೂ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 9 ಗಂಟೆಗೆ ಕೊಡಿಯಾಲ್ಬೈಲ್ನಲ್ಲಿರುವ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಪ್ರಧಾನ ಕಚೇರಿಯಿಂದ ನೆಹರೂ ಮೈದಾನದವರೆಗೆ ಜಾಥಾ ನಡೆಯಲಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಈ ಜಾಥಾವನ್ನು ಉದ್ಘಾಟಿಸಲಿದ್ದಾರೆ. ಸಚಿವ ಬಿ.ರಮಾನಾಥ ರೈ ಧ್ವಜಾರೋಹಣ ನೆರವೇರಿಸಲಿದ್ದು, ಸಚಿವ ಯು.ಟಿ.ಖಾದರ್ ಅವರು ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ನ ನಿರ್ದೇಶಕರೂ ಆಗಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದರು.

ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಶೇಖರ ಗೌಡ ವಿ. ಮಾಲಿ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ, ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವ, ಮನಪಾ ಮೇಯರ್ ಕವಿತಾ ಸನಿಲ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ಅಧ್ಯಕ್ಷ ಜಿ.ಪಿ.ಪಾಟೀಲ, ರಾಜ್ಯ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳದ ಅಧ್ಯಕ್ಷ ಅಣ್ಣಾ ಸಾಹೇಬ ಶಂಕರ ಜೊಲ್ಲೆ, ರಾಜ್ಯ ಸಹಕಾರ ತೆಂಗಿನ ನಾರಿನ ಮಹಾಮಂಡಳದ ಅಧ್ಯಕ್ಷ ಎಂ.ಕೆ.ಪುಟ್ಟರಾಜು, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರರ ಮಹಾಮಂಡಳದ ಅಧ್ಯಕ್ಷ ಯಶಪಾಲ್ ಎ.ಸುವರ್ಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಪ್ರತಿ ವರ್ಷ ನವೆಂಬರ್ 14ರಿಂದ 20ರವರೆಗೆ ರಾಷ್ಟ್ರಾದಾದ್ಯಂತ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯುತ್ತದೆ. ಪಂಡಿತ್ ನೆಹರೂರವರ ಜನ್ಮ ದಿನವಾದ ನವೆಂಬರ್ 14ರಂದು ಸಪ್ತಾಹದ ಉದ್ಘಾಟನೆ ನಡೆಸಲಾಗುತ್ತದೆ. ಸಪ್ತಾಹದ ಅವಧಿಯಲ್ಲಿ ಸಹಕಾರ ಚಳುವಳಿ ನಡೆದು ಬಂದ ಹಾದಿಯ ಅವಲೋಕನ ನಡೆಸಿ ಭವಿಷ್ಯದ ಸಹಕಾರಿ ಚಳುವಳಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಬಗ್ಗೆ ಚಿಂತನೆ ನಡೆಸುವುದೇ ಸಹಕಾರಿ ಸಪ್ತಾಹದ ಮುಖ್ಯ ಉದ್ದೇಶವಾಗಿರುತ್ತದೆ.

64ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಸಹಕಾರ ಸಂಸ್ಥೆಗಳನ್ನು ಗಣಕೀಕರಣಗೊಳಿಸುವ ಮೂಲಕ ಜನರ ಸಬಲೀಕರಣ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಅದೇ ರೀತಿಯಲ್ಲಿ ರಾಜ್ಯಮಟ್ಟದ ಏಳು ದಿನದ ಕಾರ್ಯಕ್ರಮಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದ್ದು, ಉದ್ಘಾಟನಾ ಕಾರ್ಯಕ್ರಮವು ಬೆಳಗಾವಿ ಜಿಲ್ಲೆಯಲ್ಲಿ ಹಾಗೂ ಸಮಾರೋಪ ಕಾರ್ಯಕ್ರಮವನ್ನು ರಾಯಚೂರಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

ಬೃಹತ್ ಸಹಕಾರಿ ಸಮಾವೇಶ : ಆಕರ್ಷಕ ಮೆರವಣಿಗೆ

ಕಾರ್ಯಕ್ರಮದಲ್ಲಿ ಅವಿಭಜಿತ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಸಹಕಾರಿ ಬಂಧುಗಳು, ರೈತರು, ಸ್ವಸಹಾಯ ಗುಂಪಿನ ಸದಸ್ಯರು, ಸೇರಿ ಸುಮಾರು 12,000 ಜನ ಸೇರುವ ಬೃಹತ್ ಸಹಕಾರಿ ಸಮಾವೇಶ ಇದಾಗಿದೆ.

ಸಪ್ತಾಹದ ಉದ್ಘಾಟನೆಗಿಂತ ಮುಂಚಿತವಾಗಿ ದ. ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಕೊಡಿಯಾಲ್‌ಬೈಲ್, ಮಂಗಳೂರು ಇದರ ಪ್ರಧಾನ ಕಛೇರಿಯ ಆವರಣದಿಂದ ನೆಹರೂ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಮೊಳಹಳ್ಳಿ ಶಿವರಾಯರ ಸ್ತಬ್ಧ ಚಿತ್ರ ಹಾಗೂ ಜಿಲ್ಲೆಯ ಸಹಕಾರ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸ್ತಬ್ಧ ಚಿತ್ರಗಳು, ಡೊಳ್ಳುಕುಣಿತ, ವೀರಗಾಸೆ, ಕೇರಳ ಚೆಂಡೆ, ಕಲ್ಲಡ್ಕ ಗೊಂಬೆ ಮುಂತಾದ ೨೨ ವಿವಿಧ ಮನೋರಂಜನಾ ತಂಡಗಳೊಂದಿಗೆ ಅದ್ದೂರಿಯ ಸಮುದಾಯದತ್ತ ಸಹಕಾರ ಜಾಥಾ ನಡೆಯಲಿದೆ ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರವಿರಾಜ್ ಹೆಗ್ಡೆ, ಹರೀಶ್ ಆಚಾರ್, ಟಿ.ಜಿ.ರಾಜಾರಾಮ ಭಟ್, ಸದಾಶಿವ ಉಳ್ಶಾಲ, ಸತ್ಯನಾರಾಯಣ, ಚಿತ್ತರಂಜನ್ ಬೋಳಾರ, ಪ್ರವೀಣ್ ನಾಯಕ್, ರಾಜಾರಾಂ ಭಟ್, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ ಸಲೀಂ ಮೊದಲಾದವರು ಉಪಸ್ಥಿತರಿದ್ದರು.

Comments are closed.