ಕರಾವಳಿ

65 ವರ್ಷದ ವೃದ್ಧನಿಂದ ಎಂಟರ ಬಾಲೆಗೆ ಲೈಂಗಿಕ ಕಿರುಕುಳ : ಆರೋಪಿ ಪೊಲೀಸ್ ವಶ

Pinterest LinkedIn Tumblr

ಮಂಗಳೂರು: ಎಂಟು ವರ್ಷದ ಬಾಲಕಿಯ ಮೇಲೆ 60 ವರ್ಷದ ವೃದ್ಧನೋರ್ವ ಅತ್ಯಾಚಾರವೆಸಗಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ-ಉಚ್ಚಿಲ ನಿವಾಸಿ, ಅಂಗಡಿ ಮಾಲಕ ಅಬ್ದುಲ್ ರಝಾಕ್ (65) ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಈತನ ವಿರುದ್ಧ ಬಾಲಕಿಯ ಪೋಷಕರು ಉಳ್ಳಾಲ ಪೊಲೀಸ್ ಠಾಣೆಗೆ ನಿನ್ನೆ ತಡರಾತ್ರಿ ದೂರು ನೀಡಿದ್ದರು.

ಉಚ್ಚಿಲದಲ್ಲಿ ದಿನಸಿ ಅಂಗಡಿ ಹೊಂದಿರುವ ಈತ ನಿನ್ನೆ ಸಂಜೆ ಅಂಗಡಿಗೆ ಬಂದಿದ್ದ 8ರ ಹರೆಯದ ಬಾಲಕಿಗೆ ತನ್ನ ಅಂಗಡಿಯೊಳಗಡೆ ಕಿರುಕುಳ ನೀಡಿದ್ದ ಎನ್ನಲಾಗಿದ್ದು, ಈ ವಿಚಾರವನ್ನು ಬಾಲಕಿ ಮನೆಯಲ್ಲಿ ತಿಳಿಸಿದ್ದಳು. ಇದನ್ನು ಬಾಲಕಿಯ ತಾಯಿ ಮತ್ತು ಅಜ್ಜಿ ಅಂಗಡಿಗೆ ಬಂದು ಪ್ರಶ್ನಿಸಲು ಮುಂದಾದಾಗ ಅಂಗಡಿ ಮಾಲಕ ರಝಾಕ್ ಕೋಪಗೊಂಡು ಅವರನ್ನೇ ದಬಾಯಿಸಿ ಕಳುಹಿಸಿದ್ದ ಎನ್ನಲಾಗಿದೆ.

ಈ ವಿಷಯ ಪರಿಸರದಲ್ಲಿ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಎರಡು ಕೋಮಿನ ಜನರು ಜಮಾಯಿಸಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಆರೋಪಿ ರಝಾಕ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕಾಗಮಿಸಿದ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಸಹಿತ ಉಳ್ಳಾಲ ಅಪರಾಧ ಹಾಗೂ ಕಾನೂನು ವಿಭಾಗದ ಉಪನಿರೀಕ್ಷಕರು ಜಮಾಯಿಸಿದ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Comments are closed.