ಕರಾವಳಿ

ಕುಂದಾಪುರದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

Pinterest LinkedIn Tumblr

ಕುಂದಾಪುರ: 1956ರಲ್ಲಿ ಭಾಷಾವಾರು ಪ್ರಾಂತ್ಯ ಉದಯವಾದರೂ ಕೂಡ ಸಮಗ್ರ ಕನ್ನಡದವರು ಒಂದಾಗಿರಲು ಅಸಾಧ್ಯವಾಗಿತ್ತು. 1973ರಲ್ಲಿ ಅಂದಿನ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರು ಮೈಸೂರನ್ನು ಕರ್ನಾಟಾ ಎಂದು ಮರುನಾಮಕರಣ ಮಾಡಿದರು. ಆಲೂರು ವೆಂಕಟರಾಯ, ಬಳ್ಳಾರಿಯ ರಂಝಾನ್ ಸಾಹೇಬ್ ಸೇರಿದಂತೆ ಹಲವು ಮಹನೀಯರು ಸಮಗ್ರ ಕರ್ನಾಟಕವನ್ನು ಒಂದುಗೂಡಿಸುವಲ್ಲಿ ಪರಿಶ್ರಮಪಟ್ಟಿದ್ದರು. ಕರ್ನಾಟಕ ಏಕೀಕರಣಕ್ಕೂ ಕೂಡ ದ.ಕ ಜಿಲ್ಲೆಯ ಹಲವರ ಪರಿಶ್ರಮವಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಹೇಳಿದರು.

ಅವರು ಬುಧವಾರದಂದು ಕುಂದಾಪುರ ತಾಲೂಕು ಆಡಳಿತ, ಕುಂದಾಪುರ ತಾಪಂ ಹಾಗೂ ಪುರಸಭೆ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕ್ರತಿಗೆ ಕರ್ನಾಟಕ ಅಪಾರ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಹೋರಾಟ ಮತ್ತು ಬಳಿಕದ ಕರ್ನಾಟಕ ಏಕೀಕರಣ ಹೆಸರಿನಲ್ಲಿ ನಾಡು ನುಡಿಯ ಸ್ವಾಭಿಮಾನವನ್ನು ಕನ್ನಡಿಗರು ಮೆರೆದಿದ್ದಾರೆ. ಕವಿರಾಜ ಮಾರ್ಗದಿಂದ ಹಿಡಿದು ಇಂದಿನವರೆಗೂ ವೈವಿಧ್ಯಮಯವಾದ ವಿಫುಲ ಸಾಹಿತ್ಯ ಕನ್ನಡದಲ್ಲಿದ್ದು ೮ ಜ್ನಾನಪೀಟ ಪ್ರಶಸ್ತಿ ಸಿಕ್ಕಿದೆ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮೂಲಕ ಕನ್ನಡವನ್ನು ಬೆಳೆಸಲು ಹಲವು ಪ್ರಯತ್ನ ಮಾಡಲಾಗಿದೆ. ಕನ್ನಡ ಭಾಷೆಯನು ಆಡಳಿತದಲ್ಲಿ ಬಳಸಲು ಪ್ರಯತ್ನಿಸಲಾಗುತ್ತಿದೆ. ಇಂಗ್ಲೀಷ್ ಭ್ರಮೆಯಿಂದ ಕನ್ನಡ ಶಾಲೆಗಳು ಮುಚ್ಚುವಂತಾಗಿದೆ. ಕನ್ನಡಶಾಲೆಗಳನ್ನು ಉಳಿಸಿ ಬೆಳೆಸಲು ಸರಕಾರಿ ಶಾಲೆಗಳಲ್ಲಿ ಕ್ಷೀರ ಭಾಗ್ಯ, ವಿದ್ಯಾಸಿರಿ ಮೂಲಕ ಕನ್ನಡ ಕಲಿಕೆ ಪ್ರಮಾಣ ಹೆಚ್ಚುವ ಕೆಲಸ ರಾಜ್ಯ ಸರ್ಕಾರ ಮಾಡಿದೆ. ಕರ್ನಾಟಕದ ಐಟಿ ಕ್ಷೇತ್ರವೂ ಜಗದ್ವಿಖ್ಯಾತವಾಗಿದೆ ಎಂದರು.

ಕುಂದಾಪುರ ತಾಲೂಕು ಪಂಚಾಯತಿ ಅಧ್ಯಕ್ಷ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಪುರಸಭೆ ಸದಸ್ಯರಾದ ಪುಷ್ಟಾ ಶೇಟ್, ಶಕುಂತಲಾ, ಪುರಸಭೆ ಮಾಜಿ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಕುಂದಾಪುರ ತಾಪಂ ಮುಖ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಡಿ‌ವೈಎಸ್ಪಿ ಪ್ರವೀಣ್ ನಾಯ್ಕ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರ ತಹಶಿಲ್ದಾರ್ ಜಿ.ಎಂ.ಬೋರ್ಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ವಂದಿಸಿದರು.

ಕುಂದಾಪುರ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್. ಪಥಸಂಚಲನ ನೇತೃತ್ವ ವಹಿಸಿದ್ದರು. ಅಗ್ನಿಶಾಮಕ ದಳ, ವಿವಿಧ ಶಾಲೆಗಳ ಎನ್‌ಸಿಸಿ, ಸೇವಾದಳ, ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಪರೇಡ್ ನಡೆಸಿದರು. ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ಆಕರ್ಷಿಸಿತು.

Comments are closed.