ಕ್ರೀಡೆ

ಕೊನೆಯ ಗಳಿಗೆಯಲ್ಲಿ ಪರೋಕ್ಷವಾಗಿ ಅನಿಲ್ ಕುಂಬ್ಳೆಗೆ ಟಾಂಗ್ ಕೊಟ್ಟ ನೆಹ್ರಾ…!

Pinterest LinkedIn Tumblr

ನವದೆಹಲಿ: ಟೀಂ ಇಂಡಿಯಾದಲ್ಲಿ ಗ್ರೆಗ್ ಚಾಪೆಲ್ ನಂತರ ಕೋಚ್ ವಿವಾದ ಹುಟ್ಟುಕೊಂಡಿದ್ದು, ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಡುವೆ. ಈ ವಿವಾದದ ಬಗ್ಗೆ ಇಂದು ವೃತ್ತಿ ಜೀವನಕ್ಕೆ ನಿವೃತ್ತಿ ಹೇಳುತ್ತಿರುವ ಆಶಿಷ್ ನೆಹ್ರಾ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಇಂದು ನಡೆಯಲಿರುವ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳುತ್ತಿರುವ 38 ವರ್ಷದ ಹಿರಿಯ ವೇಗಿ ಅನಿಲ್ ಕುಂಬ್ಳೆ ಹೆಸರು ಪ್ರಸ್ತಾಪಿಸದೇ ಕೋಚ್ ಕಾರ್ಯ ವೈಖರಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಲಿ ಕೋಚ್ ರವಿ ಶಾಸ್ತ್ರಿ ಕಾರ್ಯವೈಖರಿಯನ್ನು ಹಾಡಿ ಹೊಗಳಿದರು. ಇನ್ನೊಂದೆಡೆ ಕೋಚ್ ಮತ್ತು ನಾಯಕನ ಸಾಮರಸ್ಯದ ಬಗ್ಗೆ ಮಾತನಾಡಿದ ಅವರು ಕುಂಬ್ಳೆ ಹೆಸರು ಹೇಳದೆಯೇ ‘ಒಂದು ವೇಳೆ ಕೋಚ್ 50 ವರ್ಷದ ವಯಸ್ಸಿನವರಾಗಿದ್ದರೆ, ನಾಯಕ 28 ವರ್ಷದವರಾಗಿದ್ದರೆ, ಕೋಚ್ ತನ್ನ ಮನಸ್ಥಿತಿಯೇ ನಾಯಕನದ್ದಾಗಿರಬೇಕೆಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಹಾಗೆ ಮಾಡಿದಲ್ಲಿ ಸಾಮರಸ್ಯ ಸಾಧ್ಯವಿಲ್ಲ’ ಎಂದಿದ್ದಾರೆ.

ಈ ಮೂಲಕ ಅನಿಲ್ ಕುಂಬ್ಳೆ ತಮ್ಮ ಮನಸ್ಥಿತಿಯನ್ನು ನಾಯಕನ ಮೇಲೆ ಹೇರಲು ಯತ್ನಿಸಿದ್ದು ತಪ್ಪು ಎಂದು ಪರೋಕ್ಷವಾಗಿ ಹೇಳಿದರು. ಇನ್ನೊಂದೆಡೆ, ಹಾಲಿ ಕೋಚ್ ರವಿಶಾಸ್ತ್ರಿ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಸ್ವಭಾವಕ್ಕೆ ತಕ್ಕದಾಗಿ ನಡೆದುಕೊಳ್ಳುತ್ತಾರೆ. ಹಾಗಾಗಿಯೇ ಅವರಿಬ್ಬರ ಜೋಡಿ ಯಶಸ್ವಿಯಾಗಿದೆ ಎಂದಿದ್ದಾರೆ.

Comments are closed.