ಕರಾವಳಿ

ಮೀನು ತಿಂದು ಧರ್ಮಸ್ಥಳ ಭೇಟಿ ವಿವಾದಕ್ಕೆ ಸಿದ್ದರಾಮಯ್ಯ ಸೃಷ್ಠೀಕರಣ : ದೇವರಿಗೆ ಅಪವಿತ್ರವಾಗುತ್ತದೆಯೇ ಸಿ.ಎಂ ಪ್ರಶ್ನೆ..

Pinterest LinkedIn Tumblr

ಚಿಕ್ಕಬಳ್ಳಾಪುರ, ಅಕ್ಟೋಬರ್.30: ಮೀನು ತಿಂದು ಧರ್ಮಸ್ಥಳ ಭೇಟಿ ಮಾಡಿದ ಬಗ್ಗೆ ಎದ್ದಿರುವ ವಿವಾದಕ್ಕೆ ಟೀಕಾಕಾರರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, ಮೀನು ತಿಂದು ಗರ್ಭಗುಡಿಯ ಒಳಗೆ ಹೋಗಿ ದರ್ಶನ ಮಾಡಿದ್ದರೆ ದೇವರಿಗೆ ಅಪವಿತ್ರವಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಮಾಡಬಾರದ ಕೆಟ್ಟ ಕೆಲಸಗಳನ್ನೆಲ್ಲಾ ಮಾಡಿ ಗಂಧದ ಕಡ್ಡಿ ಹಚ್ಚಿ, ಆರತಿ ಬೆಳಗಿ, ತೆಂಗಿನಕಾಯಿ ಒಡೆದರೂ ದೇವರು ಮೆಚ್ಚುವುದಿಲ್ಲ. ಶುದ್ಧವಾದ ಮನಸ್ಸಿನಿಂದ ಪೂಜೆ ಮಾಡುವವರನ್ನು ಮಾತ್ರ ದೇವರು ಮೆಚ್ಚುತ್ತಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬೀರೇಶ್ವರ ಸ್ವಾಮಿ ದೇವಾಲಯದ ಉದ್ಘಾಟನೆ ನೆರವೇರಿಸಿ ಸಿಎಂ ಮಾತನಾಡಿದರು.

“ಇತ್ತೀಚೆಗೆ ನಾನು ಮಂಗಳೂರಿಗೆ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಹೋಗಿದ್ದೆ. ಅಲ್ಲಿಯ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು ದೇವರ ದರ್ಶನ ಮಾಡಿ ಹೋಗುವಂತೆ ಹೇಳಿದ್ದರು. ಇದರಂತೆ ನಾನು ದೇವಸ್ಥಾನಕ್ಕೆ ಹೋಗಿದ್ದೆ” ಎಂದು ಸಿದ್ದರಾಮಯ್ಯ ಹೇಳಿದರು.

“ಮಂಗಳೂರಿನಲ್ಲಿ ಮೀನು ತಿಂದಿದ್ದು ನಿಜ. ಆದರೆ ನಾನು ಗರ್ಭಗುಡಿಗೆ ಹೋಗಲಿಲ್ಲ. ಹೊರಗಿನಿಂದಲೇ ದೇವರ ದರ್ಶನ ಮಾಡಿ ಬಂದೆ. ಒಂದು ವೇಳೆ ಒಳಗೆ ಹೋಗಿ ದರ್ಶನ ಮಾಡಿದ್ದರೆ ದೇವರಿಗೆ ಅಪವಿತ್ರವಾಗುತ್ತಿತ್ತೇ ?” ಎಂದವರು ಪ್ರಶ್ನಿಸಿದರು.

ದೇವರ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಮತ್ತು ಕಲ್ಪನೆ ಇಲ್ಲದವರು ಮಾತ್ರ ಅಪವಿತ್ರದ ಮಾತುಗಳನ್ನಾಡಲು ಸಾಧ್ಯ. ಒಂದು ಬಾರಿ ಮಾಂಸ ಸೇವಿಸಿದರೆ ಅದು 48 ಗಂಟೆಗಳ ಕಾಲ ನಮ್ಮ ಶರೀರದಲ್ಲಿ ಇರುತ್ತದೆ. ಹಾಗಾದರೆ ಇಂದು ಮಾಸ ತಿಂದವರು ನಾಳೆ ದೇವಾಲಯಕ್ಕೆ ಹೋಗುವಂತಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

“ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ, ನನ್ನ ಕಾಲೇ ಕಂಬ, ದೇಹವೇ ದೇಗುಲ, ನನ್ನ ಶಿರವೇ ಹೊನ್ನ ಕಳಸವಯ್ಯ ಕೂಡಲ ಸಂಗಮದೇವ ಎಂದು ಬಸವಣ್ಣನವರು 850 ವರ್ಷಗಳ ಹಿಂದೆ ಹೇಳಿದ್ದಾರೆ. ಮನುಷ್ಯನ ಬದುಕು ಸಾರ್ಥಕವಾಗಬೇಕಾದರೆ ಮೊದಲು ಮನುಷ್ಯನಾಗಿ ಬಾಳಬೇಕು. ಮತ್ತೊಬ್ಬರನ್ನು, ಮತ್ತೊಂದು ಧರ್ಮದವರನ್ನು ದ್ವೇಷ ಮಾಡುವವರು ಮನುಷ್ಯರೇ ಅಲ್ಲ. ಮನುಷ್ಯ-ಮನುಷ್ಯರ ನಡುವೆ ಬೆಂಕಿ ಹಚ್ಚುವವರು ಮನುಷ್ಯರಾಗುವುದಿಲ್ಲ. ಇಂತಹವರಿಂದ ದೇವಾಲಯ ಪವಿತ್ರವಾಗಲು ಸಾಧ್ಯವಿಲ್ಲ. ಅಂಥವರನ್ನು ದೇವರೇ ದೂರ ಇಡುತ್ತಾನೆ ಎಂದು ಸಿಎಂ ಹೇಳಿದರು.

Comments are closed.