ಮಂಗಳೂರು, ಅಕ್ಟೋಬರ್.27: ಬಿಜೆಪಿಯ ಮಂಗಳೂರು ನಗರ ದಕ್ಷಿಣ ಸಮಿತಿ ವತಿಯಿಂದ ಮಂಗಳೂರು ಮಿನಿ ವಿಧಾನ ಸೌಧದದ ಅವ್ಯವಸ್ಥೆಯ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಂಗಳೂರು ದಕ್ಷಿಣ ವಿಧಾನ ಮಂಡಲದ ಅಧ್ಯಕ್ಷ ವೇದವ್ಯಾಸ ಕಾಮತ್ ಅವರು ಮಾತನಾಡಿ, ಮಂಗಳೂರಿನ ಮಿನಿ ವಿಧಾನಸೌಧದಲ್ಲಿ ನೋಂದಣಿ ಕಚೇರಿ, ಮಂಗಳೂರು ಎಸಿ ಕಚೇರಿ, ಮಂಗಳೂರು ತಹಶೀಲ್ದಾರ್ ಕಚೇರಿ, ರೆಕಾರ್ಡ್ ರೂಮ್, ಕಂದಾಯ ನಿರೀಕ್ಷಕರ ಕಚೇರಿ ಹೀಗೆ ಹಲವು ಸರಕಾರಿ ಕಚೇರಿಗಳಿವೆ.
ಆದರೆ, ಇಲ್ಲಿ ಸಕಾಲಕ್ಕೆ ಸಾರ್ವಜನಿಕರಿಗೆ ಸೇವೆ ಸಿಗುತ್ತಿಲ್ಲ. ಆರ್ಟಿಸಿ ಸಹಿತ ಎಲ್ಲ ದಾಖಲೆಪತ್ರಗಳನ್ನು ಪಡೆಯಲು ಸರದಿ ಸಾಲಿನಲ್ಲಿ ನಿಲ್ಲಬೇಕಿದೆ. ಹಾಗೇ ನಿಂತರೂ ಪ್ರಯೋಜನವಿಲ್ಲ. ವಿದ್ಯುತ್ ಬಿಲ್ ಪಾವತಿಸದ ಕಾರಣ ಗುರುವಾರ ಮಧ್ಯಾಹ್ನ ಮೆಸ್ಕಾಂ ವಿದ್ಯುತ್ ಸಂಪರ್ಕ ಕಡಿದು ಹಾಕಿದೆ. ಸಿಬ್ಬಂದಿಯ ಕೊರತೆಯೂ ಇದೆ. ಲಂಚ ಕೊಟ್ಟರೆ ಮಾತ್ರ ಸಿಬ್ಬಂದಿ ಕೆಲಸ ಮಾಡುತ್ತಾರೆ. ಇದು ಕಾಂಗ್ರೆಸ್ ನ ದುರಾಡಳಿತಕ್ಕೆ ಕಾರಣ ಎಂದು ದೂರಿದರು. ಈ ಎಲ್ಲಾ ಅವ್ಯವಸ್ಥೆಗಳಿಗೆ ಹೊಣೆ ಹೊತ್ತು ಜಿಲ್ಲೆಯ ಸಚಿವರು, ಶಾಸಕರು ರಾಜಿನಾಮೆ ನೀಡಬೇಕೆಂದು ಅವರು ಆಗ್ರಹಿಸಿದರು.
ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಪಕ್ಷದ ಮುಖಂಡರಾದ ರವಿಶಂಕರ್ ಮಿಜಾರ್,ಜಿತೇಂದ್ರ ಕೊಟ್ಟಾರಿ, ಸಂಜಯ ಪ್ರಭು, ಭಾಸ್ಕರ ಚಂದ್ರ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.