ಉಡುಪಿ: ಜಿಲ್ಲೆಯ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ಸುಗಳ ಅಗತ್ಯ ಬಹಳಷ್ಟಿದ್ದು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಬಸ್ಸುಗಳನ್ನು ಓಡಿಸಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚಿಸಲಾಯಿತು.

ಜಿಲ್ಲೆಯ ನಿಡಂಬಳ್ಳಿಗೆ ನರ್ಮ್ ಬಸ್ ಓಡಿಸುವ ಬಗ್ಗೆ ಜನಾರ್ಧನ್ ತೋನ್ಸೆ ಅವರು, ಕುಂದಾಪುರದ ಗ್ರಾಮಾಂತರ ಪ್ರದೇಶಕ್ಕೆ, ಕಾಪು, ಎಲ್ಲೂರು ರಸ್ತೆಯಲ್ಲಿ ಬಸ್‌ಗಳ ಬೇಡಿಕೆ ಬಗ್ಗೆ ಇಂದೂ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪಾ ಸುವರ್ಣ, ಶೋಭಾ.ಜಿ.ಪುತ್ರನ್, ಲಕ್ಷೀ ಮಂಜು ಬಿಲ್ಲವ,ಜಯಶ್ರೀ ಮೊಗವೀರ ಅವರು ಬೇಡಿಕೆ ಮಂಡಿಸಿದರು.
ಈ ಸಂದರ್ಭದಲ್ಲಿ ಉತ್ತರಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೈಕೋರ್ಟ್ ಆದೇಶದಂತೆ ಒಟ್ಟು 11 ಬಸ್‌ಗಳ ಪರ್ಮಿಟ್ ರದ್ದುಪಡಿಸಿದ್ದು, ಶಿರ್ವ ಮಂಚೆಕಲ್, ಕೊಕ್ಕರ್ಣೆ, ಅಮಾಸೆಬೈಲು, ಆಗುಂಬೆ, ಶಿವಮೊಗ್ಗ ಮಾರ್ಗದ ಬಸ್‌ಗಳ ತಾತ್ಕಾಲಿಕ ಪರ್ಮಿಟ್ ರದ್ದಾಗಿದೆ.
ಹೈಕೋರ್ಟ್‌ನಲ್ಲಿ ಕ್ರಾನಲಜಿಕಲ್ ಆರ್ಡರ್ ಪ್ರಕಾರವೇ ಪರ್ಮಿಟ್ ನೀಡಲು ಸೂಚಿಸಲಾಗಿದೆ ಎಂದು ವಿವರಿಸಿದರಲ್ಲದೆ, ಇದರಿಂದ ಪಾಸು ಪಡೆದುಕೊಂಡ ವಿದ್ಯಾರ್ಥಿಗಳಿಗ ಅನಾನುಕೂಲವಾಗಿದೆ ಎಂಬ ಮಾಹಿತಿಯನ್ನು ನೀಡಿದರು.
ಕೆ.ಎಸ್.ಆರ್.ಟಿ.ಸಿ. ಗೆ ಸಂಬಂಧಿಸಿದ 63 ಅರ್ಜಿಗಳನ್ನು 30-8-2017 ರಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಗೆ ಮಂಡಿಸಿದ್ದು, ಪ್ರಾಧಿಕಾರವು ಹೊಸದಾಗಿ ಜಂಟಿ ಮಾರ್ಗ ಸಮೀಕ್ಷೆ ನಡೆಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೆ.ಎಸ್.ಆರ್.ಟಿ.ಸಿ ಮತ್ತು ಆರ್.ಟಿ.ಒ ಅಧಿಕಾರಿ ಉತ್ತರಿಸಿದರು.
ಮುಂದಿನ ಆರ್ ಟಿ ಎ ಸಭೆಯಲ್ಲಿ ಕೆಲವೊಂದು ಸಮಸ್ಯೆಗಳಿಗ ಪರಿಹಾರ ದೊರಕಿಸುವ ಭರವಸೆಯನ್ನು ಅಧಿಕಾರಿಗಳು ವಿಧಾನಪರಿಷತ್ ಸದಸ್ಯರಾದ ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ನೀಡಿದರು.
ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಅವರಿಗೆ ನೀಡಿದ ಪಾಸು ನಿರುಪಯೋಗವಾಗದಂತೆ ಕಾಯಬೇಕಾದ ಹೊಣೆ ಅಧಿಕಾರಿಗಳದ್ದು ಎಂದ ಅವರು, ಜನರಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು.
ವಾರಾಹಿ ಎಡದಂಡೆ ನಾಲೆಯ 23ನೇ ಕಿ.ಮೀನ್ಲಲಿ ಕಾಲುವೆ ಒಡೆದು ತಗ್ಗು ಪ್ರದೇಶದ ಕೃಷಿ ಭೂಮಿ, ತೋಟಗಳಲ್ಲಿ ನೀರು ತುಂಬಿದ್ದು, ಪರಿಹಾರ ನೀಡುವಂತೆ ತಾಲೂಕು ಪಂಚಾಯತ್ ಅಧ್ಯಕ್ಷರು ಕುಂದಾಪುರ ಇವರ ಬೇಡಿಕೆಗೆ ಸಂಬಂಧಿಸಿದಂತೆ ಯೋಜನೆಯಡಿ ಪರಿಹಾರ ನೀಡುವ ಬಗ್ಗೆ ಡಿಸೆಂಬರ್ ಒಳಗೆ ಕ್ರಮಕೈಗೊಂಡು ವರದಿ ಒಪ್ಪಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ವಾರಾಹಿ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು.
ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ಅಲಭ್ಯತೆ ಬಗ್ಗೆ ರೇಷ್ಮಾ ಉದಯಕುಮಾರ್ ಶೆಟ್ಟಿ ಸಭೆಯ ಗಮನಸೆಳೆದರು. ಮಾತೃಪೂರ್ಣ ಯೋಜನೆಯ ಸಾಧಕ ಬಾಧಕಗಳ ಕುರಿತು ಸಭೆಯಲ್ಲಿ ಸವಿವರ ಚರ್ಚೆ ನಡೆದು ಇಲಾಖೆಯ ನಿರ್ದೇಶಕರ ಗಮನಕ್ಕೆ ಸಮಸ್ಯೆಗಳನ್ನು ತರಲಾಗಿದ್ದು ಪರಿಹಾರ ರೂಪಿಸುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶಿವಾನಂದ ಕಾಪಶಿ ಅವರು ಭರವಸೆ ನೀಡಿದರು.
ಆಧಾರ ಕೇಂದ್ರಗಳನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರ ಕೆ ಬಾಬು ಶೆಟ್ಟಿ, ಉದಯ ಎಸ್ ಕೋಟ್ಯಾನ್, ಶಶಿಕಾಂತ ಪಡುಬಿದ್ರೆ, ಶಾಸಕ ಕೋಟ ಶ್ರೀನಿವಾಸ್ ಪೂಜಾರಿ ಚರ್ಚೆಯಲ್ಲಿ ಪಾಲ್ಗೊಂಡರು.
ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಇದ್ದರು.
Comments are closed.