ಕರಾವಳಿ

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 50ನೇ ವರ್ಷದ ವರ್ಧಂತ್ಯುತ್ಸವ

Pinterest LinkedIn Tumblr

ಬೆಳ್ತಂಗಡಿ, ಅಕ್ಟೋಬರ್. 25: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರಹೆಗ್ಗಡೆಯವರ ಪಟ್ಟಾಭಿಷೇಕದ 50ನೇ ವರ್ಷದ ವರ್ಧಂತ್ಯುತ್ಸವವನ್ನು ಶ್ರೀಕ್ಷೇತ್ರದಲ್ಲಿ ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಜನರು ಸ್ವತಃ ತಮ್ಮದೇ ಉತ್ಸವ ಎನ್ನುವಂತೆ ವರ್ಧಂತ್ಯೋತ್ಸವವನ್ನು ಆಚರಿಸದರು. ಪಟ್ಟಾಭಿಷೇಕ ವರ್ಧಂತಿಯ ಸುವರ್ಣ ಮಹೋತ್ಸವ ಸಡಗರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಿಸರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು.

ಸುವರ್ಣ ಸಂಭ್ರಮ 1968ರ ಅಕ್ಟೋಬರ್ 24ರಂದು ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿದ್ದರು. ಈ ವರ್ಷ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಸಂಭ್ರಮ. ಸಮಾಜದ ಎಲ್ಲಾ ಸದ್ಕಾರ್ಯಗಳಲ್ಲಿ ಧ್ರುವ ನಕ್ಷತ್ರವಾಗಿರುವ ಧರ್ಮಸ್ಥಳ ಧರ್ಮಾಧಿಕಾರಿಗಳ ಉತ್ಸವ ಸಾವಿರಾರು ಅಭಿಮಾನಿಗಳ ಶುಭ ಹಾರೈಕೆಯೊಂದಿಗೆ ಸಂಪನ್ನಗೊಂಡಿದೆ.

ಅದ್ಧೂರಿ ಮೆರವಣಿಗೆ ಉತ್ಸವದ ಹಿನ್ನೆಲೆಯಲ್ಲಿ ನೆಲ್ಯಾಡಿ ಬೀಡುವಿನಿಂದ ದೇವಸ್ಥಾನದ ಪ್ರಮುಖ ರಸ್ತೆಗಳಲ್ಲಿ ವಿಶೇಷ ವಾಹನದ ಮೂಲಕ ವೀರೇಂದ್ರ ಹೆಗ್ಗಡೆಯವರ ಮೆರವಣಿಗೆ ನಡೆಸಲಾಯಿತು. ನಾಡಿನ ಸಂಸ್ಕೃತಿ, ಪರಂಪರೆ ಸಾರುವ ಸ್ತಬ್ಧಚಿತ್ರಗಳು, ಕಲಾ ಪ್ರಕಾರಗಳು ಧರ್ಮಸ್ಥಳದ ಹಿರಿಮೆಯನ್ನು ಸಾರಿದವು.

ಸಾರ್ವಜನಿಕರಿಂದ ಅಭಿಮಾನಿಗಳ ಮಹಾಪೂರ ಬೆಳಗ್ಗೆ ಮಂಜುನಾಥ ಸ್ವಾಮಿಯ ದರ್ಶನ ಪಡೆದ ವಿರೇಂದ್ರ ಹೆಗ್ಗಡೆ ಕುಟುಂಬ ದೇವರಿಗೆ ವಿಶೇಷ ಪೂಜೆ ಸಲ್ಲಸಿತು. ನಂತರ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕಾಲ ಕಳೆದ ವಿರೇಂದ್ರ ಹೆಗ್ಗಡೆಯವರಿಗೆ ಸಾವಿರಾರು ಅಭಿಮಾನಿಗಳು, ಯತಿಶ್ರೇಷ್ಠರು, ವಿವಿಧ ಕ್ಷೇತ್ರಗಳ ಗಣ್ಯರು ಫಲ-ಪುಷ್ಪ ನೀಡಿ ಶುಭಾಶಯ ಸಲ್ಲಿಸಿದರು.

ಗ್ರಾಮಸ್ಥರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಕಳೆದ ಐದು ದಶಕಗಳಲ್ಲಿ ಹಲವಾರು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಮಾಡಿದ್ದು ಎಲ್ಲವನ್ನೂ ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿದೆ. ಕ್ಷೇತ್ರ ವೇಗವಾಗಿ ಬೆಳೆದಿದೆ ನಾನೂ ಅದರೊಂದಿಗೆ ಸಾಗಿದ್ದೇನೆ. ಈ ಹಿಂದಿನ ಧರ್ಮಾಧಿಕಾರಿಗಳ ರೂಪದಲ್ಲಿಯೇ ಸೇವಾ ಕಾರ್ಯಗಳನ್ನು ಮುಂದುವರಿಸಿದ್ದೇನೆ. ರಾಜ್ಯದಾದ್ಯಂತ ಜನರು ಪ್ರೀತಿ ಇಟ್ಟುಕೊಂಡಿದ್ದಾರೆ. ಅವರೆಲ್ಲರಿಗೂ ಆಭಾರಿಯಾಗಿದ್ದೇನೆ,” ಎಂದು ಹೇಳಿದರು.

ಮುಂದಿನ ವರ್ಷದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಇನ್ನಷ್ಟು ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದ ಅವರು ಬೆಂಗಳೂರಿನ ನೆಲಮಂಗಲದಲ್ಲಿ ನೂತನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ಆರಂಭಿಸಲಾಗುವುದು, ಉಡುಪಿ ಆಯುರ್ವೇದ ಆಸ್ಪತ್ರೆಯ ವಿಸ್ತರಣೆ ಹಾಗೂ ಮಂಗಳೂರಿನಲ್ಲಿ ನೂತನ ಶಾಲೆಯ ಆರಂಭಿಸುವುದಾಗಿ ಹಗೂ ಆಯುರ್ವೇದ ಹಾಗೂ ಅಲೋಪತಿಯಲ್ಲಿ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು.

ಉತ್ಸವಕ್ಕೆ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮನ ಪ್ರಮುಖ ಆಕರ್ಷಣೆಯಾಗಿತ್ತು. ಮೈಸೂರು ಮಹಾರಾಜರನ್ನು ದೇವಸ್ಥಾನದ ಆಡಳಿತ ಮಂಡಳಿ ಭವ್ಯ ಮೆರವಣಿ ಮೂಲಕ ಸ್ವಾಗತಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಯದುವೀರ್ ಒಡೆಯರ್ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಮೈಸೂರು ಅರಮನೆಯ ಸಂಬಂಧ ತುಂಬಾ ಹಳೆಯದು ಅದನ್ನು ಮೂಂದುವರಿಸಿಕೊಂಡು ಹೋಗುತ್ತೇವೆ. ಧರ್ಮಾಧಿಕಾರಿಯವರು ಹಮ್ಮಿಕೊಂಡಿರುವ ಸಮಾಜಸೇವಾ ಚಟುವಟಿಕೆ ಗಳು ಮಾದರಿಯಾಗಿದ್ದು, ಸಮಾಜದಲ್ಲಿ ಬದಲಾವಣೆಗಳನ್ನು ತಂದಿವೆ ಎಂದರು.

ಶಿಕ್ಷಣ ತಜ್ಞ ಗುರುರಾಜ್ ಕರಜಗಿ ಅಭಿನಂದನಾ ಭಾಷಣ ಮಾಡಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್‌. ಪ್ರಭಾಕರ್‌ ಅವರಿಗೆ ಸುಜ್ಞಾನಪ್ರಭಾ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

ಕ್ಷೇತ್ರದಲ್ಲಿ ಸುದೀರ್ಘ‌ ಅವಧಿ ಸೇವೆ ಸಲ್ಲಿಸಿದ ಮಣೆಗಾರ್‌ ಅನಂತ ಪದ್ಮನಾಭ ಭಟ್‌, ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಜಮಾ ಉಗ್ರಾಣ ಮುತ್ಸದ್ದಿ ಬಿ. ಭುಜಬಲಿ, ಹೆಗ್ಗಡೆಯವರ ಕಾರ್ಯ ದರ್ಶಿ ಕೃಷ್ಣ ಸಿಂಗ್‌, ಕಟ್ಟಡ ವಿಭಾಗದ ಗೋಪಾಲ್‌ ಮೆನನ್‌, ಚಾಲಕ ಧನಕೀರ್ತಿ ಶೆಟ್ಟಿ, ಚಾಲಕ ದಿವಾಕರ ಪ್ರಭು ಅವರನ್ನು ಕ್ಷೇತ್ರದ ಪರವಾಗಿ ಸಮ್ಮಾನಿಸಲಾಯಿತು. ಸ್ವರ್ಣಾನುಭವ ಸ್ಮರಣಸಂಚಿಕೆ ಬಿಡುಗಡೆ ಮಾಡಲಾಯಿತು. ಸಮ್ಮಾನಿತರ ಪರವಾಗಿ ಅನಂತ ಪದ್ಮನಾಭ ಭಟ್‌ ಹಾಗೂ ಸೀತಾರಾಮ ತೋಳ್ಪಾಡಿತ್ತಾಯ ಅನಿಸಿಕೆ ಹೇಳಿದರು.

ಲಕ್ಷ್ಮೀನಾರಾಯಣ ರಾವ್‌, ಎ.ವಿ. ಶೆಟ್ಟಿ ಅವರು ಸಮ್ಮಾನ ಪತ್ರ ವಾಚಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಹಣಕಾಸು ನಿರ್ದೇಶಕ ಶಾಂತಾರಾಮ ಪೈ ಹಾಗೂ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌ ಸ್ವಾಗತಿಸಿದರು. ಉಪನ್ಯಾಸಕಿ ಶ್ರುತಿ ಜೈನ್‌ ರೆಂಜಾಳ, ಶಿಕ್ಷಕ ರಾಮಚಂದ್ರ ರಾವ್‌ ನಿರ್ವಹಿಸಿದರು. ಶುಭಚಂದ್ರರಾಜ್‌ ವಂದಿಸಿದರು.

Comments are closed.