ಕರಾವಳಿ

ಪಂಪ್‌ವೆಲ್ ಫ್ಲೈಓವರ್‌ನ ‘ಗರ್ಡರ್‌’ನಲ್ಲಿ ಬಿರುಕು : ತೆರವು ಕಾರ್ಯಾಚರಣೆ ಆರಂಭ

Pinterest LinkedIn Tumblr

ಮಂಗಳೂರು : ಪಂಪ್‌ವೆಲ್ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್‌ ‘ಗರ್ಡರ್‌’ನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದೀಗ ಇದರ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.ರಾ.ಹೆ. 66 ಹಾಗೂ 75ರ ಸಂಗಮ ಸ್ಥಳವಾದ ಪಂಪ್‌ ವೆಲ್‌ನ ಫ್ಲೈಓವರ್‌ ಕಾಮಗಾರಿ ಆರಂಭಗೊಂಡು ಹಲವಾರು ವರ್ಷಗಳು ಕಳೆದರೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಉಡುಪಿ- ಕಾಸರಗೋಡು ಮಾರ್ಗದ ಪಂಪ್‌ವೆಲ್‌ನಲ್ಲಿ ಈ ಫ್ಲೈ ಓವರ್‌ ನಿರ್ಮಾಣವಾಗುತ್ತಿದ್ದು, 600 ಮೀ. ಉದ್ದ ಹಾಗೂ 20 ಮೀ. ಅಗಲವಿರಲಿದೆ. ನಂತೂರಿನಿಂದ ಬರುವಾಗ ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿಯಿಂದ ಇಂಡಿಯಾನ ಆಸ್ಪತ್ರೆ ಮುಂಭಾಗದವರೆಗೆ ಫ್ಲೈ ಓವರ್‌ ನಿರ್ಮಾಣವಾಗಲಿದೆ.

ಇದೀಗ ಫ್ಲೈ ಓವರ್‌ನ ಒಂದು ಭಾಗದಲ್ಲಿ ಅಳವಡಿಸಿದ ‘ಗರ್ಡರ್‌’ (ಕಾಂಕ್ರೀಟ್‌ನ ಉದ್ದದ ಸ್ತಂಭಗಳು) ನ ಕಾಮಗಾರಿಯಲ್ಲಿ ಲೋಪ ಎದುರಾಗಿದ್ದು, ಬಿರುಕು ಕಾಣಿಸಿಕೊಂಡಿರುವ ‘ಗರ್ಡರ್‌’ ನ್ನು ಹಿಟಾಚಿ ಯಂತ್ರದ ಮೂಲಕ ಕತ್ತರಿಸಲಾಗುತ್ತಿದೆ.

ಫ್ಲೈ ಓವರ್‌ ಜೋಡಿಸುವ ‘ಗರ್ಡರ್‌’ ಅಳವಡಿಕೆ ಇಲ್ಲಿ ನಡೆಯುತ್ತಿದೆ. ಐದಾರು ಗರ್ಡರ್‌ಗಳನ್ನು ಜೋಡಿಸಲಾಗಿದೆ. ಗರ್ಡರ್‌ಗಳನ್ನು ಕಾಮಗಾರಿ ಕೈಗೊಂಡ ಗುತ್ತಿಗೆದಾರರು ನಿಗದಿತ ಸ್ಥಳದಲ್ಲಿ ನಿರ್ಮಿಸಿ, ಬೃಹತ್‌ ಗಾತ್ರದ ಲಾರಿಯ ಮೂಲಕ ಕಾಮಗಾರಿ ನಡೆಸುವಲ್ಲಿಗೆ ತಂದು ಅದನ್ನು ಅತ್ಯಂತ ಜಾಗ್ರತೆಯಿಂದ ಜೋಡಿಸುತ್ತಾರೆ. ಆದರೆ, ಪಂಪ್‌ವೆಲ್‌ನಲ್ಲಿ ಜೋಡಿಸಿದ ಒಂದು ಗರ್ಡರ್‌ನಲ್ಲಿ ಸ್ವಲ್ಪ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ಬದಲಿಸಲು ನಿರ್ಧರಿಸಿ, ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದಾಗ, ಒಂದು ಗರ್ಡರ್‌ನಲ್ಲಿ ಬಿರುಕು ಇರುವುದನ್ನು ಪತ್ತೆ ಹಚ್ಚಿದ್ದಾರೆ. ಗರ್ಡರ್‌ ಜೋಡಿಸುವಾಗ ಆದ ಎಡವಟ್ಟಿನಿಂದಾಗಿ ಇದರಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿತ್ತು. ಅಧಿಕಾರಿಗಳ ಸೂಚನೆ ಮೇರೆಗೆ ಗರ್ಡರ್‌ ತೆರವು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ ಅಂತ್ಯದ ವೇಳೆಗೆ ಪೂರ್ಣಗೊಳ್ಳಬೇಕಿದ್ದ ಫ್ಲೈ ಓವರ್‌ ಕಾಮಗಾರಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.

ಪ್ರಸಕ್ತ ರಸ್ತೆಗಿಂತ ನೂತನ ಫ್ಲೈ ಓವರ್‌ ಸುಮಾರು ಐದೂವರೆ ಮೀ. ಎತ್ತರವಿರಲಿದೆ. ಕಾಮಗಾರಿಗಾಗಿ ಪಂಪ್‌ವೆಲ್‌ನ ಸುಂದರ ವೃತ್ತ ಹಾಗೂ ಕಲಶ ತೆಗೆಯಲಾಗಿದೆ. ಕುಂದಾಪುರದಿಂದ ತಲಪಾಡಿವರೆಗೆ (ಮಧ್ಯೆ ಸ್ವಲ್ಪ ಹೊರತುಪಡಿಸಿ) ಹೆದ್ದಾರಿ ಚತುಷ್ಪಥ ಕಾಮಗಾರಿಯನ್ನು ನವಯುಗ ಕಂಪೆನಿಯವರು ನಿರ್ವಹಿಸಿರುವುದರಿಂದ ಕಾಮಗಾರಿಗೆ ತಗಲುವ ಒಟ್ಟು ವೆಚ್ಚದಲ್ಲಿ ಪಂಪ್‌ವೆಲ್‌ ಹಾಗೂ ತೊಕ್ಕೊಟ್ಟು ಫ್ಲೈ ಓವರ್‌ ಖರ್ಚು ಸೇರಿಕೊಂಡಿದೆ.

ಕಾಮಗಾರಿ ಮುಗಿದ ಮೇಲೆ ನಂತೂರಿನಿಂದ ಕಾಸರಗೋಡು ಕಡೆಗೆ ತೆರಳುವವರುಫ್ಲೈ ಓವರ್‌ ಮೂಲಕ, ಬೆಂಗಳೂರು ಕಡೆಗೆ ತೆರಳುವ ವಾಹನಗಳು ಫ್ಲೈ ಓವರ್‌ನ ಕೆಳಗಡೆಯಿಂದ ಸಾಗಬೇಕಿದೆ. ಕಂಕನಾಡಿ ಕಡೆಯಿಂದ ಬರುವ ವಾಹನಗಳು ಕೂಡ ಕೆಳರಸ್ತೆಯನ್ನೇ ಬಳಸಿಕೊಳ್ಳಬೇಕಿದೆ.

Comments are closed.