ಬಂಟ್ವಾಳ, ಅಕ್ಟೋಬರ್.22: ದ.ಕ. ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ, ಶಿಲಾನ್ಯಾಸ ನೆರವೇರಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಗಳೂರಿಗೆ ಆಗಮಿಸಿದರು. ಬಳಿಕ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 252.50 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ಹಾಗೂ ಶಿಲಾನ್ಯಾಸ ನೆರವೇರಿಸಿದರು.
ಮೊದಲಿಗೆ ಬಿ.ಸಿ.ರೋಡ್ನಲ್ಲಿ 90 ಸೆಂಟ್ಸ್ ವಿಸ್ತೀರ್ಣದ ಜಮೀನಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಿನಿ ವಿಧಾನ ಸೌಧವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಧ್ಯಾಹ್ನ ಉದ್ಘಾಟಿಸಿದರು.
ಬಳಿಕ ಬಿ.ಸಿ.ರೋಡ್ನಲ್ಲಿ 1.50 ಎಕರೆ ನಿವೇಶನದಲ್ಲಿ ಸುಮಾರು 10.7 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೆ.ಎಸ್.ಆರ್.ಟಿ.ಸಿ. ನೂತನ ಬಸ್ಸು ನಿಲ್ದಾಣವನ್ನು ಉದ್ಘಾಟಿಸಿದರು.
ಇದೇ ಸಂದರ್ಭ ಒಟ್ಟು 148.29 ಕೋಟಿ ರೂ.ಗಳ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ 104.21 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಿದರು.
ಬಳಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು,”ಯಡಿಯೂರಪ್ಪ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ನನ್ನ ಮತ್ತು ಶಿವಕುಮಾರ್ ಹೆಸರು ಹೇಳಿದ್ದಾರೆ. ಯಡಿಯೂರಪ್ಪ ಅವರದ್ದು ಬೇಜವಾಬ್ದಾರಿ ಹೇಳಿಕೆ. ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ,” ಎಂದು ಹೇಳಿದರು.
“ಬಿಜೆಪಿಯವರು ಚುನಾವಣೆ ಗೆದ್ದ ಭ್ರಮೆಯಲ್ಲಿದ್ದಾರೆ. ಯಡಿಯೂರಪ್ಪ ಮಿಷನ್-150 ಎಂದು ಹೇಳುತ್ತಿದ್ದರು. ಈಗ ಅದು ಮಿಷನ್-50ಗೆ ಬಂದಿಳಿದಿದೆ,” ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ “ಅಮಿತ್ ಷಾ ರಾಜ್ಯಕ್ಕೆ ಬಂದ ಮೇಲೆ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿಯವರು ಸುಳ್ಳು ಆರೋಪ ಮಾಡಲು ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ಕೋಮುವಾದಿ ಪಕ್ಷಕ್ಕೆ ಅಧಿಕಾರ ನೀಡಬೇಡಿ. ಕೋಮುವಾದಿಗಳ ಮಾತಿಗೆ ಕಿವಿಗೊಡಬೇಡಿ,” ಎಂದು ಸಲಹೆ ನೀಡಿದರು.
“ಪ್ರಧಾನಿ ಮೋದಿ ಅಚ್ಛೇ ದಿನ್ ಅಂತಾ ಹೇಳಿದರು. ಅಚ್ಛೇ ದಿನ್ ಕೇವಲ ಅದಾನಿ ಅಂಬಾನಿಗೆ ಮಾತ್ರ ಬಂದಿದೆ. ಕಪ್ಪು ಹಣ ವಾಪಾಸ್ ತಂದು 15 ಲಕ್ಷ ಅಕೌಂಟ್ ಗೆ ಹಾಕುವುದಾಗಿ ಹೇಳಿದರು. 15 ರೂಪಾಯಿ ಕೂಡಾ ಹಾಕಲಿಲ್ಲ. ಮೋದಿ ಮನ್ ಕೀ ಬಾತ್ ಮಾಡಿದರು. ಆದರೆ ನಾವು ಜನರನ್ನು ಮೋಸ ಮಾಡುವುದಿಲ್ಲ. ನಮ್ಮದು ಕಾಮ್ ಕೀ ಬಾತ್,” ಎಂದು ಸಿದ್ದರಾಮಯ್ಯ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿಯಲ್ಲಿ ಲೋಕಸಭೆಯಲ್ಲಿ ಮುಸ್ಲಿಂ ಪ್ರತಿನಿಧಿಯಿಲ್ಲ. ಉತ್ತರ ಪ್ರದೇಶ ಕ್ಯಾಬಿನೆಟ್ ನಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ. ಬಿಜೆಪಿಗೆ ಅನ್ವರ್ಥನಾಮ ಡೋಂಗಿಗಳ ಪಕ್ಷ ಎಂದು ಅವರು ವ್ಯಂಗ್ಯವಾಡಿದರು.
ವೇದಿಕೆಯಲ್ಲಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಡಿ.ಕೆ.ಶಿವಕುಮಾರ್, ಎಚ್.ಸಿ.ಮಹಾದೇವಪ್ಪ, ರೋಶನ್ ಬೇಗ್, ಈಶ್ವರ ಬಿ., ಟಿ.ಬಿ.ಜಯಚಂದ್ರ, ಪ್ರಮೋದ್ ಮಧ್ವರಾಜ್, ಶಾಸಕರಾದ ಕೆ.ಅಭಯಚಂದ್ರ ಜೈನ್, ಐವನ್ ಡಿಸೋಜ, ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಮೊಯ್ದಿನ್ ಬಾವ, ಮೇಯರ್ ಕವಿತಾ ಸನಿಲ್, ಮಕ್ಕಳ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮುಂತಾದವರು ಉಪಸ್ಥಿತರಿದ್ದರು.
Comments are closed.