ಕರಾವಳಿ

ಮಂಗಳೂರು: ಮುಖ್ಯಮಂತ್ರಿ ಸಮ್ಮುಖದಲ್ಲೇ ಕಾಂಗ್ರೆಸ್ ಶಾಸಕರಿಬ್ಬರ ಮಧ್ಯೆ ವಾಕ್ಸಮರ

Pinterest LinkedIn Tumblr

ಮಂಗಳೂರು, ಅಕ್ಟೋಬರ್ 22: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿಗೆ ಇಂದು ಭೇಟಿ ನೀಡಿದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಲ್ಲೇ ಶಾಸಕರಿಬ್ಬರ ಮಧ್ಯೆ ವಾಗ್ವಾದ ನಡೆಯುವ ಮೂಲಕ ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಭಿನ್ನಮತ ಸ್ಫೋಟಗೊಂಡಿದೆ.

ದ.ಕ. ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ, ಶಿಲಾನ್ಯಾಸ ನೆರವೇರಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾನುವಾರ ಮಂಗಳೂರಿಗೆ ಆಗಮಿಸಿದ್ದರು. ಇಂದು ಬೆಳಗ್ಗೆ 10:55ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಲ್ಲೇ ಸಿಎಂರನ್ನು ಸ್ವಾಗತಿಸಲು ಬಂದಿದ್ದ ಮಾಜಿ ಸಚಿವ, ಹಾಲಿ ಶಾಸಕ ಅಭಯಚಂದ್ರ ಜೈನ್ ಹಾಗೂ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ನಡುವೆ ವಾಗ್ವಾದ ನಡೆದಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಿಎಂಗೆ ಸ್ವಾಗತ ಕೋರಲು ಐವನ್ ಡಿಸೋಜಾ ಕೂಡ ಬಂದಿದ್ದರು. ಆದರೆ ಮುಖ್ಯಮಂತ್ರಿಗಳ ಸಮೀಪ ಬರದಂತೆ ಐವನ್ ಡಿಸೋಜಾರನ್ನು ಅಭಯಚಂದ್ರ ಜೈನ್ ಕೈಯಲ್ಲಿ ದೂಡಿ ತಡೆದಿದ್ದಾರೆ ಎನ್ನಲಾಗಿದೆ. ಇದರಿಂದ ಶಾಸಕರಿಬ್ಬರು ಸಿದ್ದರಾಮಯ್ಯ ಎದುರಲ್ಲೇ ತಳ್ಳಾಟ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನೊಂದು ಮೂಲದ ಪ್ರಕಾರ ಐವನ್ ಡಿಸೋಜ ಬೆಂಬಲಿಗರ ಜಯಕಾರಕ್ಕೆ ಜೈನ್ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದ್ದು, ಐವನ್ ಪರ ಭಿತ್ತಿಪತ್ರ ಹಿಡಿದಿದ್ದ ಬೆಂಬಲಿಗರ ವಿರುದ್ಧ ಜೈನ್‌‌ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಎಂ ಪಕ್ಕದಲ್ಲಿಯೇ ನಾಯಕರಿಬ್ಬರು ತಳ್ಳಾಟ ನೂಕಾಟ ನಡೆಸುವ ಮೂಲಕ ಸುದ್ಧಿಯಾಗಿದ್ದಾರೆ ಎನ್ನಲಾಗಿದೆ.

ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವ ಯು.ಟಿ.ಖಾದರ್ ಮಂಗಳೂರು ಮೇಯರ್ ಕವಿತಾ ಸನಿಲ್ ಸೇರಿದಂತೆ ಗಣ್ಯರು ಸ್ವಾಗತಿಸಿದರು. ಸಿಎಂ ಸಿದ್ದರಾಮಯ್ಯ ಜೊತೆ ಸಚಿವರಾದ ಡಿಕೆಶಿ, ರೋಶನ್ ಬೇಗ್ ಸಹ ಆಗಮಿಸಿದ್ದು, ಸಚಿವ ರಮಾನಾಥ್‌‌ ರೈ ಎಲ್ಲರನ್ನು ಸ್ವಾಗತಿಸಿ ಮಂಗಳೂರು ಏರ್ ಪೋರ್ಟ್‌ನಿಂದ ಸರ್ಕ್ಯೂಟ್ ಹೌಸ್‌ಗೆ ಜೊತೆಯಾಗಿ ತೆರಳಿದರು. ಅಲ್ಲಿಂದ ನಂತರ ಬಂಟ್ವಾಳಕ್ಕೆ ತೆರಳಿದರು.

Comments are closed.