ಕರಾವಳಿ

ಉಡುಪಿಯಲ್ಲಿ ಸರ್ವಧರ್ಮ ದೀಪಾವಳಿ ಆಚರಣೆ

Pinterest LinkedIn Tumblr

ಉಡುಪಿ: ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ನಿಜಾರ್ಥ. ಆದ್ದರಿಂದ ಪ್ರತಿ ಮನೆಯಲ್ಲೂ ಪ್ರತಿಯೊಬ್ಬರ ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಮೂಲ ಸಂದೇಶವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ. ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಶುಕ್ರವಾರ ಉಡುಪಿ ಶೋಕಮಾತಾ ಇಗರ್ಜಿ ವಠಾರದಲ್ಲಿ ಸೌಹಾರ್ದ ಸಮಿತಿ, ಕೆಥೊಲಿಕ್ ಸಭಾ ಉಡುಪಿ ಘಟಕ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮ ವತಿಯಿಂದ ಆಯೋಜಿಸಿದ ಸರ್ವಧರ್ಮ ದೀಪಾವಳಿ ಆಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಭಾರತೀಯರೆಲ್ಲಗಿಗೂ ಭಾಗ್ಯ ತರುವ ಹಬ್ಬ ದೀಪಾವಳಿ. ದೀಪ ಪ್ರಕಾಶ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ ಅವಶ್ಯಕ. ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕ. ಹಬ್ಬಗಳ ಹೆಸರೇ ಮನುಷ್ಯನನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತವೆ. ಇಂದು ಜಾತಿ, ಧರ್ಮಗಳ ಪರಿಧಿಯನ್ನು ಮೀರಿ ಜನರು ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬಗಳ ಜಾಗತೀಕರಣ ಒಂದು ಉತ್ತಮ ಬೆಳವಣಿಗೆ. ಒಂದು ಸಮುದಾಯ ಅರಿತು ಬೆರೆತು ಹಬ್ಬಗಳ ಆಚರಣೆ ಮಾಡಿದರೆ ಅದರ ಸೊಗಸೇ ಬೇರೆ. ಬೆಳಕು ಜ್ಞಾನದ ರೂಪಕ. ಯಾವುದೆ ಭೇದವಿಲ್ಲದೆ, ಕಟ್ಟಲೆಯಿಲ್ಲದೆ ಹರಡುವ ಬೆಳಕು ಸಮಾನತೆಯ ಸಂಕೇತವೂ ಹೌದು. ಬಣ್ಣ ಬಣ್ಣದ ಸುಂದರ ಚಿತ್ತಾಕರ್ಷಕ ದೀಪಾವಳಿಯ ಆಕಾಶ ಬುಟ್ಟಿಗಳು ಮತ್ತದರ ಬೆಳಕು ನಮ್ಮ ಸಂಭ್ರಮದ, ಸಂತಸದ ಪ್ರತೀಕ. . ನಾವು ಹಚ್ಚುವ ದೀಪದ ಬೆಳಕಿನಿಂದ ನಮ್ಮೊಳಗಿನ ಅಜ್ಞಾನ, ಅವಿವೇಕ, ದುಷ್ಟ ಗುಣಗಳು ನಾಶವಾಗಿ, ಸದ್ಗುಣಗಳು ಹೆಚ್ಚಬೇಕು. ಎಲ್ಲ್ಲೆಡೆ ಶಾಂತಿ, ಸಮೃದ್ಧಿ ನೆಲಸಿ ಎಲ್ಲರಿಗೂ ಮಂಗಳವಾಗಲಿ, ದೀಪದಲ್ಲಿ ನಮಗೆ ದೇವರ ರೂಪ ಕಾಣಿಸಲಿ ಎಂದು ಆಶಿಸುತ್ತಾ ದೀಪಾವಳಿಯ ದಿನ ದೀಪ ಹಚ್ಚಬೇಕು.
ದೀಪಾವಳಿ ಬೆಳಕಲ್ಲಿ ದೀನದಲಿತರ ಕಣ್ಣೀರು, ಸಂಕಷ್ಟ ಮತ್ತು ದುಃಖ ಕಾಣಿಸಲಿ ಮತ್ತು ಅದನ್ನು ಒರೆಸುವ ಕೈ ನಮ್ಮದಾಗಲಿ. ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ ಎಂಬುದೇ ದೀಪಾವಳಿ ಹಬ್ಬದ ಪ್ರಮುಖ ಸಂದೇಶÀ. ಧರ್ಮ ಎಂದರೆ ಮನುಷ್ಯನ ವಾಸ್ತವ ಬದುಕನ್ನು ಸುಧಾರಿಸುತ್ತಾ, ಅವನೊಳಗೆ ಪರಮಾರ್ಥದ ಹಂಬಲವನ್ನು ಜಾಗೃತಗೊಳಿಸುತ್ತಾ ಮಾನವ ಪ್ರೇಮವನ್ನು ವಿಸ್ತರಿಸುತ್ತಾ, ಅವನನ್ನು ಸಹಜೀವಿಗಳ ಸೇವೆಯಲ್ಲಿ ತೊಡಗಿಸುವ ಒಂದು ಸತ್ವ. ಈ ವರ್ಷದ ದೀಪಾವಳಿಯ ಆಚರಣೆ ಈ ನೈಜ ಧರ್ಮದ ಪಾಲನೆಯನ್ನು ನಮಗೆಲ್ಲರಿಗೂ ಕಲಿಸಲಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ರಥಬೀದಿ ಗೆಳಯರು ಉಡುಪಿ ಇದರ ಅಧ್ಯಕ್ಷರಾದ ಮುರಳೀಧರ ಉಪಾಧ್ಯ ಮಾತನಾಡಿ ಇಂದಿನ ಕಲುಷಿತ ಸಮಾಜದಲ್ಲಿ ಇಂದಿನ ಮಕ್ಕಳಿಗೆ ಹಿಂದಿನ ನಮ್ಮ ಹಿರಿಯರು ತೋರಿಸಿಕೊಟ್ಟ ಸೌಹಾರ್ದತೆಯ ರಹಸ್ಯಗಳನ್ನು ತಿಳಿ ಹೇಳುವ ಅಗತ್ಯತೆ ಇದೆ ಎಂದರು.

ಉಡುಪಿ ಜಿಲ್ಲಾ ಅಪರ ಜಿಲ್ಲಾ ಸರ್ಕಾರಿ ವಕೀಲರದ ಮಹಮ್ಮದ್ ಸುಹಾನ್ ಮಾತನಾಡಿ ಮಾನವ ಸಹೋದರತೆಯನ್ನು ಬಲಿಷ್ಠಗೊಳಿಸಲು ಕೆಲಸ ಮಾಡುವುದರೊಂದಿಗೆ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಕಲಹಗಳನ್ನು ಬದಿಗಿಟ್ಟು ಸಹೋದರತೆಯ ಸಂದೇಶದೊಂದಿಗೆ ಪ್ರತಿಯೊಬ್ಬರು ಸಾಗಬೇಕಾಗಿದೆ ಎಂದರು.

ಸಿಎಸ್‍ಐ ಎಬನೇಜರ್ ಚರ್ಚ್ ಮಲ್ಪೆ ಇದರ ಪಾಸ್ಟರ್ ರೆ. ಸುಧೀರ್ ರೊಬಿನ್ಸನ್ ಆನಂದ ಮಾತನಾಡಿ ಧರ್ಮಗಳು ಭಾವನೆಯನ್ನು ವ್ಯಕ್ತಪಡಿಸಿದರೆ ಮಾನವತೆ ಪರಸ್ಪರ ಸಹೋದರತೆಯ ಸಂಬಂಧವನ್ನು ತೋರಿಸುತ್ತವೆ. ಹಣತೆ, ಎಣ್ಣೆ ಮತ್ತು ಬತ್ತಿ ಸೇರಿದಾಗ ಪೂರ್ಣ ದೀಪವಾಗಲು ಸಾಧ್ಯ ಅಂತೆಯೇ ಎಲ್ಲರೂ ಸಮಾಜದಲ್ಲಿ ಒಟ್ಟಾಗಿ ಬಾಳಿ ಬದುಕಿದಾಗ ನೆಮ್ಮದಿಯಿಂದ ಬದುಕು ನಡೆಸಲು ಸಾಧ್ಯ. ಸಮಾಜ ಬದಲಾಗುವುದರ ಬದಲು ನಮ್ಮಲ್ಲಿ ನಾವು ಬದಲಾವಣೆ ಕಂಡಾಗ ಮಾತ್ರ ಸಹೋದರತೆಯ ನಿಜ ಭಾವನೆ ಮೂಡಲು ಸಾಧ್ಯವಿದೆ ಎಂದರು.

ಉಡುಪಿ ಶೋಕ ಮಾತಾ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ ವಲೇರಿಯನ್ ಮೆಂಡೊನ್ಸಾ ಸ್ವಾಗತಿಸಿ, ಮೈಕಲ್ ಡಿಸೋಜಾ ವಂದಿಸಿದರು. ಅಲ್ಫೋನ್ಸ್ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲ ವಿಶೇಷ ಆಕರ್ಷಣೆಯ ಬೃಹತ್ ಗಾತ್ರದ ಗೋಪುರ ದೀಪದ ಪ್ರದರ್ಶನ, ಗೂಡುದೀಪಗಳ ಪ್ರದರ್ಶನ, ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಸಿಹಿತಿಂಡಿ ವಿತರಣೆ, ಹಣತೆಗಳ ಬೆಳಗುವಿಕೆ ನಡೆಯಿತು.

Comments are closed.