ಕರ್ನಾಟಕ

ಸಿದ್ದು ಸ್ವಕ್ಷೇತ್ರದಿಂದಲೇ ಎಚ್‌ಡಿಕೆ ಪ್ರಚಾರ ಆರಂಭ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಕ್ಷೇತ್ರ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ವಿಧಾನಸಭೆ ಚುನಾವಣೆ ಪ್ರಚಾರ ಆರಂಭಿಸಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಜೆಪಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನನ್ನ ಶತ್ರುಗಳೆಲ್ಲ ಒಂದಾದರೂ ನನ್ನ ಸೋಲಿಸಲು ಆಗದು ಎಂದು ಸವಾಲು ಹಾಕಿ ಗೆದ್ದೇ ಬಿಟ್ಟೆ ಎಂಬ ಭ್ರಮೆಯಲ್ಲಿದ್ದಾರೆ. ಆಲ್‌ ಡೇಸ್‌ ನಾಟ್‌ ಸಂಡೇ ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡ, ಹುಣಸೂರು ಕ್ಷೇತ್ರದಲ್ಲಿ ಎಚ್‌. ವಿಶ್ವನಾಥ್‌ ಸ್ಪರ್ಧೆ ಮಾಡಲಿದ್ದು ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಜೆಡಿಎಸ್‌ ಶಕ್ತಿ ಸಾಬೀತುಪಡಿಸುತ್ತೇವೆಂದರು.

ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆ ಹೇಗೆ ನಡೆಸಿದರು ಎಂಬುದು ಗೊತ್ತಿದೆ. ಅಷ್ಟು ಹಣ ಸುರಿದು ಎಷ್ಟು ಮತಗಳ ಅಂತರದಿಂದ ಗೆದ್ದರು ಎಂಬುದೂ ಗೊತ್ತಿದೆ. ಆ್ಯಂಬುಲೆನ್ಸ್‌ ಹಾಗೂ ಪೊಲೀಸ್‌ ವಾಹನಗಳಲ್ಲಿ ಹಣ ಸಾಗಿಸಿ ಮತದಾರರಿಗೆ ಹಂಚುವುದನ್ನು ಸಿದ್ದರಾಮಯ್ಯ ಬಿಜೆಪಿಯವರ ಬಳಿ ಕಲಿತುಕೊಂಡಿದ್ದಾರೆ. ಈ ಬಾರಿಯೂ ಗೆಲ್ಲಬಹುದು ಎಂದು ಕೊಂಡಿದ್ದಾರೆ. ಅವರ ಆಟ ನಡೆಯುವುದಿಲ್ಲ. ಚಾಮುಂಡೇಶ್ವರಿ ಆಶೀರ್ವಾದ ಪಡೆದು ಅದೇ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮುಂದೆ ಸಾಗುತ್ತೇನೆ. ನ. 1 ರಿಂದ ರಾಜ್ಯ ಪ್ರವಾಸ ಕೈಗೊಂಡು, ಉತ್ತರ ಕರ್ನಾಟಕದ 50 ಕ್ಷೇತ್ರಗಳಲ್ಲಿ ಪ್ರತಿದಿನ ಸಭೆ ನಡೆಸುತ್ತೇನೆ. ಅಧಿಕಾರಕ್ಕೆ ಬಂದರೆ ಎರಡು ವರ್ಷದಲ್ಲಿ ರಾಜ್ಯದ ಚಿತ್ರಣ ಬದಲಿಸುತ್ತೇನೆ ಎಂದರು.
ಬಿಜೆಪಿ-ಜೆಡಿಎಸ್‌ ನಾಯಕರು ಸುಳ್ಳುಗಾರರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇವರೇನು ಸತ್ಯ ಹರಿಶ್ಚಂದ್ರರಾ? ಕಾಂಗ್ರೆಸ್‌ನಲ್ಲಿ ಹಿಂದೊಮ್ಮೆ ಮಹಾನ್‌ ಸುಳ್ಳುಗಾರ ಬಿರುದು ಪಡೆದಿದ್ದವರು ಮುಖ್ಯ ಮಂತ್ರಿಯಾಗಿದ್ದರು. ಅವರನ್ನು ಮೀರಿಸುವ ಸುಳ್ಳುಗಾರ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದರು.

ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಅಬ್ಬರಿಸುವ ಸಿದ್ದರಾಮಯ್ಯ ಬಿಜೆಪಿ ಸೇರಲು ಅಡ್ವಾಣಿಯವರನ್ನು ಭೇಟಿ ಮಾಡಿರಲಿಲ್ಲವೇ? ಮುಕುಡಪ್ಪ, ಕೋದಂಡ ರಾಮಯ್ಯ, ವಿಶ್ವನಾಥ್‌ ಅವರಲ್ಲಿ ಕೇಳಿದರೆ ಹೇಳುತ್ತಾರೆ ಎಂದರು.
ಪ್ರಜ್ವಲ್‌, ನಿಖೀಲ್‌ ಪ್ರಚಾರ: ನಮ್ಮ ಕುಟುಂಬದಿಂದ ಯಾರು ಸ್ಪರ್ಧೆ ಮಾಡಬೇಕು ಎಂಬುದು ನಿರ್ಧಾರವಾಗಿದೆ. ಪ್ರಜ್ವಲ್‌ ರೇವಣ್ಣ, ನಿಖೀಲ್‌ ಇಬ್ಬರೂ ಪಕ್ಷ ಸಂಘಟನೆಯಲ್ಲಿ ತೊಡಗುತ್ತಾರೆ. ಚುನಾವಣೆಯಲ್ಲಿ ಪ್ರಚಾರವನ್ನೂ ಮಾಡಲಿದ್ದಾರೆ. ಆದರೆ ನಿಖೀಲ್‌ ಸ್ಪರ್ಧೆ ಮಾಡುವ ವಿಚಾರ ಸದ್ಯಕ್ಕೆ ಇಲ್ಲ ಎಂದರು.

ನಂಬರ್‌ ಪ್ಲೇಟ್‌ ದಂಧೆ: ದ್ವಿಚಕ್ರ ವಾಹನ, ಕಾರು ಹಾಗೂ ಭಾರೀ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ಕಡ್ಡಾಯ ಮಾಡಲು ರಾಜ್ಯ ಸರಕಾರ ಹೊರಟಿದೆ. ಇದೊಂದು ದೊಡ್ಡ ದಂಧೆ. ದ್ವಿಚಕ್ರ ವಾಹನಕ್ಕೆ 600 ರೂ., ಕಾರಿಗೆ 1200, ಭಾರೀ ವಾಹನಕ್ಕೆ 1,800 ರೂ. ಬೆಲೆಯ ನಂಬರ್‌ ಪ್ಲೇಟ್‌ ಯಾರ ಲಾಬಿಗೆ ಮಣಿದು ಜಾರಿಗೆ ತರುತ್ತಿದ್ದಾರೆ? ನಾನು ಸಿಎಂ ಆಗಿದ್ದಾಗಲೇ ಆ ಪ್ರಸ್ತಾವನೆ ಇತ್ತು. ನಾನು ಒಪ್ಪಿರಲಿಲ್ಲ. ಈಗ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಅದಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಎಷ್ಟು ಹೊಡೆಯಲಾಗಿದೆ? ಮುಖ್ಯಮಂತ್ರಿಗಳೇ ಹೇಳಲಿ ಎಂದರು.

“ಜೆಡಿಎಸ್‌ ಪ್ರಬಲವಾಗಿ ಕಟ್ಟುತ್ತೇನೆ’
ದೇವೇಗೌಡರ ನಂತರ ಜೆಡಿಎಸ್‌ ಇರುವುದಿಲ್ಲ ಎಂಬ ಬಂಡಾಯ ಶಾಸಕರ ಹೇಳಿಕೆಗೆ ಮಹತ್ವ ಕೊಡುವುದಿಲ್ಲ. ದೇವೇಗೌಡರ ಮಗ ನಾನಿದ್ದೇನೆ. ತಮಿಳುನಾಡಿನಲ್ಲಿ ಎಐಡಿಎಂಕೆ, ಡಿಎಂಕೆ, ಆಂಧ್ರಪ್ರದೇಶದಲ್ಲಿ ತೆಲುಗುದೇಶಂನಂತೆ ಕರ್ನಾಟಕದಲ್ಲೂ ಜೆಡಿಎಸ್‌ ಭದ್ರವಾಗಿ ಕಟ್ಟುತ್ತೇನೆ. ಪಕ್ಷ ಕಟ್ಟುವ ವಿಚಾರದಲ್ಲಿ ನಾನು ಅವರಿಂದ ಪಾಠ ಕಲಿಯಬೇಕಿಲ್ಲ. ನಾನಾಗಲಿ, ರೇವಣ್ಣ ಆಗಲಿ ನಮ್ಮ ಜೀವ ಇರೋವರೆಗೂ ಯಾವ ರಾಷ್ಟ್ರೀಯ ಪಕ್ಷದ ಮನೆಬಾಗಿಲಿಗೂ ಹೋಗುವುದಿಲ್ಲ. ಅಂತಹ ಪರಿಸ್ಥಿತಿ ಬಂದರೆ ರಾಜಕೀಯ ನಿವೃತ್ತಿ ಪಡೆಯುತ್ತೇವೆ ಎಂದು ಎಚ್‌.ಡಿ.
ಕುಮಾರಸ್ವಾಮಿ ಹೇಳಿದರು.

Comments are closed.