ರಾಷ್ಟ್ರೀಯ

ಮುಸ್ಲಿಮರು ಇಂಟರ್‌ನೆಟ್‌ಗೆ ಫೋಟೋ ಹಾಕಬಾರದು: ಹೊಸ ಫ‌ತ್ವಾ

Pinterest LinkedIn Tumblr


ದೇವಬಂದ್‌ : ಭಾರತದಲ್ಲಿ ಇಸ್ಲಾಮ್‌ ಧರ್ಮ ಬೋಧನೆಯ ಅತೀ ದೊಡ್ಡ ಕೇಂದ್ರವಾಗಿರುವ ದಾರುಲ್‌ ಉಲೂಮ್‌ ದೇವಬಂದ್‌ ಹೊಸ ಫ‌ತ್ವಾ ಹೊರಡಿಸಿದೆ. ಭಾರತೀಯ ಮುಸ್ಲಿಮರು ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋ ಹಾಕುವುದನ್ನು ಈ ಫ‌ತ್ವಾ ನಿಷೇಧಿಸಿದೆ.

ಮುಸ್ಲಿಂ ಪುರುಷರು, ಮಹಿಳೆಯರು ಮತ್ತು ಅವರ ಕುಟುಂಬ ಸದಸ್ಯರು ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಯಾವುದೇ ಫೋಟೋಗಳನ್ನು ಹಾಕ ಕೂಡದೆಂದು ಫ‌ತ್ವಾಗಳನ್ನು ಹೊರಡಿಸುವ ದಾರುಲ್‌ ಉಲೂಮ್‌ ದೇವಬಂದ್‌ನ ದಾರುಲ್‌ ಇಫ್ತಾ ಅಪ್ಪಣೆ ಕೊಡಿಸಿದೆ.

ದಾರುಲ್‌ ಉಲೂಮ್‌ ದೇವಬಂದ್‌ ಉತ್ತರ ಪ್ರದೇಶದ ಸಹರಣಪುರ ಜಿಲ್ಲೆಯಲ್ಲಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋಗಳನ್ನು ಅಪ್‌ಲೋಡ್‌ ಮಾಡುವುದು ಇಸ್ಲಾಮ್‌ ವಿರೋಧಿಯಾಗಿರುವುದರಿಂದ ಮುಸ್ಲಿಮರು ಅಂತಹ ಕೆಲಸ ಮಾಡಕೂಡದು ಎಂದು ಫ‌ತ್ವಾ ಹೇಳಿದೆ.

ಈ ಫ‌ತ್ವಾವನ್ನು ಸಮರ್ಥಿಸಿಕೊಂಡಿರುವ ದಾರುಲ್‌ ಉಲೂಮ್‌ ದೇವಬಂದ್‌ನ ಶಹನವಾಜ್‌ ಕಾದ್ರಿ ಅವರು, “ಅನಗತ್ಯವಾಗಿ ಸಾಮಾಜಿಕ ಜಾಲ ತಾಣಗಳಿಗೆ ಫೋಟೋ ಅಪ್‌ಲೋಡ್‌ ಮಾಡುವುದು ತಪ್ಪು; ಈ ಬಗ್ಗೆ ದಾರುಲ್‌ ದೇವಬಂದ್‌ ಫ‌ತ್ವಾ ಹೊರಡಿಸಿರುವುದು ಸರಿಯೇ ಆಗಿದೆ” ಎಂದು ಹೇಳಿದರು.

ಮುಸ್ಲಿಂ ವ್ಯಕ್ತಿಯೋರ್ವ ತನ್ನ ಹಾಗೂ ತನ್ನ ಪತ್ನಿ ಮತ್ತು ಕುಟುಂಬ ಸದಸ್ಯರ ಫೋಟೋಗಳನ್ನು ಫೇಸ್‌ ಬುಕ್‌ ಮತ್ತು ವ್ಯಾಟ್ಸಾಪ್‌ ಗೆ ಹಾಕುವುದು ಇಸ್ಲಾಂ ಪ್ರಕಾರ ಸರಿಯೇ ತಪ್ಪೇ ಎಂದು ವ್ಯಕ್ತಿಯೋರ್ವರು ಕೇಳಿದ ಲಿಖೀತ ಪ್ರಶ್ನೆಗೆ ದಾರುಲ್‌ ದೇವಬಂದ್‌ ಫ‌ತ್ವಾ ಹೊರಡಿಸುವ ಮೂಲಕ ಉತ್ತರ ನೀಡಿದೆ.

ಈ ತಿಂಗಳ ಆದಿಯಲ್ಲಿ ದಾರುಲ್‌ ಉಲೂಮ್‌ ದೇವಬಂದ್‌, ಮುಸ್ಲಿಂ ಮಹಿಳೆಯರು ತಲೆ ಕೂದಲು ಕತ್ತರಿಸಿಕೊಳ್ಳುವುದು, ಹುಬ್ಬನ್ನು ಶೇಪ್‌ ಮಾಡುವುದು ಮುಂತಾದವುಗಳನ್ನು ನಿಷೇಧಿಸಿ ಫ‌ತ್ವಾ ಹೊರಡಿಸಿತ್ತು.

-ಉದಯವಾಣಿ

Comments are closed.