ಕರಾವಳಿ

ಬ್ಯಾರೀಸ್ ವೆಲ್ಫೇರ್ ಫೋರಂನಿಂದ ನಾಳೆ ಮಂಗಳೂರಿನಲ್ಲಿ 17 ಜೋಡಿಗಳ ಸಾಮೂಹಿಕ ವಿವಾಹ

Pinterest LinkedIn Tumblr

ಮಂಗಳೂರು, ಫೆಬ್ರವರಿ. 10: ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲುಎಫ್) ವತಿಯಿಂದ ಫೆ. 11ರಂದು ಮಂಗಳೂರಿನಲ್ಲಿ 17 ಜೋಡಿಗಳ ಸಾಮೂಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಡಬ್ಲುಎಫ್ ಸಂಘಟನೆಯ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮಾಹಿತಿ ನೀಡಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಬಿಡಬ್ಲುಎಫ್ ಸಂಘಟನೆಯು ಹಮ್ಮಿಕೊಂಡಿರುವ ಸಾಮೂಹಿಕ ವಿವಾಹ ಕಾರ್ಯಕ್ರಮವು ಅಂದು ಬೆಳಗ್ಗೆ 10:30ಕ್ಕೆ ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆಯಲಿದೆ. ವಿವಾಹದ ಸಂದರ್ಭದಲ್ಲಿ ವಧುವಿಗೆ ಐದು ಪವನ್ ಚಿನ್ನ ಹಾಗೂ ವಧು ಮತ್ತು ವರನಿಗೆ ಬಟ್ಟೆ ಖರೀದಿಗಾಗಿ ತಲಾ 10 ಸಾವಿರ ರೂ.ಗಳನ್ನು ಸಂಸ್ಥೆಯಿಂದ ನೀಡಲಾಗುವುದು ಎಂದವರು ತಿಳಿಸಿದರು.

ಮಂಗಳೂರು ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ನಡೆಯಲಿರುವ ನಿಖಾವನ್ನು ರಾಜ್ಯ ವಕ್ಫ್ ಬೋರ್ಡ್ನ ಮಾಜಿ ಸದಸ್ಯ ಶಾಫಿ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಿಡಬ್ಲುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮಾಜಿ ಸಚಿವ ಬಿ.ಎ.ಮೊದೀನ್, ಸಚಿವ ಯು.ಟಿ.ಖಾದರ್, ಶಾಸಕ ಬಿ.ಎ.ಮೊದಿನ್ ಬಾವ, ಯುಎಇ ತುಂಬೆ ಗ್ರೂಪ್ನ ಮೊಹಿದಿನ್, ಅಬುಧಾಬಿ ಮಲ್ಟಿಲೈನ್ ಗ್ರೂಪ್ನ ಅಬೂ ಮುಹಮ್ಮದ್, ಬೆಂಗಳೂರು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ನ ಅಧ್ಯಕ್ಷ ಬಿ.ಎಂ.ಫಾರೂಕ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಎಂ. ಮಸೂದ್, ಮಸ್ಕತ್ ಬದ್ರ್ ಅಲ್ಸಮಾ ಗ್ರೂಪ್ನ ಅಬ್ದುಲ್ಲತೀಫ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಇನ್ಫ್ರಾಸ್ಟ್ರಕ್ಚರ್ಸ್ನ ಮುಸ್ತಫಾ ಎಸ್.ಎಂ., ದುಬೈನ ನೋರ್ದರ್ನ್ ಇನ್ಸೂರೆನ್ಸ್ನ ಅಫ್ರೋಝ್ ಅಸ್ಸಾದಿ, ದುಬೈ ಬಿಸಿಎಫ್ನ ಉಪಾಧ್ಯಕ್ಷ ಎಂ.ಇ.ಮೂಳೂರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುರ್ರಹ್ಮಾನ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್ನ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ, ಜಿಲ್ಲಾ ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಮುಸ್ತಫಾ ಕೆಂಪಿ, ಅಬುಧಾಬಿಯ ಸುಹೈಲ್ ಅಲ್ ಮರೆಝ್ರಿಯಿ ಸಂಸ್ಥೆಯ ಮುಹಮ್ಮದ್ ಆಸಿಫ್, ದುಬೈ ಎಮಿರೇಟ್ಸ್ ಗ್ಲಾಸ್ ಇಂಡಸ್ಟ್ರೀಸ್ನ ಫತಾವುಲ್ಲಾ ಸಾಹೇಬ್, ಅಲ್ ವಫಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮುಹಮ್ಮದ್ ಹನೀಫ್ ಜೀ., ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಆಝಾದ್ ಹಾರ್ಡ್ವೇರ್ಸ್ನ ಮನ್ಸೂರ್ ಅಹ್ಮದ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮುಹಮ್ಮದ್ ಅಲಿ ಉಚ್ಚಿಲ್ ಹೇಳಿದರು.

ಜಾತಿ, ಧರ್ಮ ಮರೆತು ಶೌಚಾಲಯದ ವ್ಯವಸ್ಥೆ :

ಬಿಡಬ್ಲುಎಫ್ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮದ ಜೊತೆಗೆ ಜಾತಿ, ಧರ್ಮವನ್ನು ಮರೆತು ಈವರೆಗೆ ಒಟ್ಟು 130 ಮಂದಿಗೆ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಉಚಿತ ವಿವಾಹ ಸಮಾರಂಭಕ್ಕೆ ಬಂದಿರುವ ಅರ್ಜಿಗಳನ್ನು ಪರಿಗಣಿಸಿ ಅವರ ಮನೆಗೆ ತೆರಳಿ ಸಮೀಕ್ಷೆ ನಡೆಸಿ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ. ಇಂತಹ ಸಮೀಕ್ಷೆಯ ಸಂದರ್ಭದಲ್ಲಿ ಕೆಲವು ಮನೆಗಳಲ್ಲಿ ಶೌಚಾಲಯಗಳು ಇಲ್ಲದಿರುವುದನ್ನು ಗಮನಿಸಿದ್ದೇವೆ. ಇದೇ ಪ್ರೇರಣೆಯಿಂದ ಶೌಚಾಲಯ ಇಲ್ಲದ ಮನೆಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡುವ ಯೋಜನೆಯನ್ನು ಸಂಘಟೆನಯಿಂದ ಹಾಕಿಕೊಂಡೆವು ಎಂದು ಮುಹಮ್ಮದ್ ಅಲಿ ಉಚ್ಚಿಲ್ ವಿವರಿಸಿದರು.

2008ರಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಬಿಡಬ್ಲುಎಫ್ ಈವರೆಗೆ 83 ಜೋಡಿಗಳ ವಿವಾಹ ಕಾರ್ಯಕ್ರಮವನ್ನು ನೆರವೇರಿಸಿದೆ. ಇದೀಗ ಸಂಸ್ಥೆಯ ವತಿಯಿಂತ 7ನೆ ಸಾಮೂಹಿಕ ವಿವಾಹ ನಡೆಯುತ್ತಿದ್ದು, ಈ ಮೂಲಕ ಸಂಸ್ಥೆಯು 100 ಮಂದಿ ಬಡ ಹೆಣ್ಣುಮಕ್ಕಳ ವಿಹಾಹ ಕಾರ್ಯಕ್ರಮವನ್ನು ಉಚಿತವಾಗಿ ನೆರವೇರಿಸಿದಂತಾಗುತ್ತದೆ ಎಂದವರು ಮಾಹಿತಿ ನೀಡಿದರು.

ಬಿಡಬ್ಲುಎಫ್ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ, ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಕೃಷ್ಣಾಪುರ, ಕೋಶಾಧಿಕಾರಿ ಮುಹಮ್ಮದ್ ಸಿದ್ದೀಕ್ ಕಾಪು, ಸಂಯೋಜಕ ಇಮ್ರಾನ್ ಅಹ್ಮದ್ ಕುದ್ರೋಳಿ, ಮುಖ್ಯ ಸಲಹೆಗಾರರಾದ ಬಶೀರ್ ಬಜ್ಪೆ, ಸಿದ್ದೀಕ್ ಉಚ್ಚಿಲ್, ಸಲಹೆಗಾರ ಹನೀಫ್ ಉಳ್ಳಾಲ, ಉಮರ್ ಯು.ಎಚ್. ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.