ಕರಾವಳಿ

ಉಳ್ಳಾಲದಲ್ಲಿ ತಂಡವೊಂದರಿಂದ ಯುವಕನ ಮೇಲೆ ಹಲ್ಲೆ…

Pinterest LinkedIn Tumblr

ಮಂಗಳೂರು, ಫೆಬ್ರವರಿ.3: ಮಾತುಕತೆಗೆ ಕರೆದು ತಂಡವೊಂದು ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ, ಹರಿತವಾದ ಆಯುಧದಿಂದ ಹೊಟ್ಟೆಗೆ ಇರಿದು ಗಾಯಗೊಳಿಸಿದ ಘಟನೆ ನಿನ್ನೆ ರಾತ್ರಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಿಲದಲ್ಲಿ ನಡೆದಿದೆ.

ಉಳ್ಳಾಲ ಹಳೆಕೋಟೆ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಝಾಕಿರ್(24) ಹಲ್ಲೆಗೊಳಗಾದ ಯುವಕ. ಅಳೇಕಲ ನಿವಾಸಿ ನಿಝಾಮ್ ಹಾಗೂ ಆತನ ಸ್ನೇಹಿತರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಪಾರಿವಾಳ ಕಳವಾಗಿರುವ ವಿಷಯಕ್ಕೆ ಸಂಬಂಧಿಸಿ ನಿಝಾಮ್ ಮತ್ತು ಝಾಕಿರ್ನ ನಡುವೆ ಕೆಲವು ದಿನಗಳ ಹಿಂದೆ ಜಗಳವಾಗಿತ್ತೆನ್ನಲಾಗಿದೆ. ಕೆಲವರ ಮಧ್ಯಸ್ಥಿಕೆಯಲ್ಲಿ ಅದನ್ನು ತಿಳಿ ಮಾಡಲಾಗಿತ್ತೆನ್ನಲಾಗಿದೆ.

ನಿನ್ನೆ ರಾತ್ರಿ ಅದೇ ವಿಷಯಕ್ಕೆ ಸಂಬಂಧಿಸಿ ನಿಝಾಮ್ ಝಾಕಿರ್ ನನ್ನು ಮಂಚಿಲಕ್ಕೆ ಮಾತುಕತೆಗೆ ಕರೆದು ಸ್ನೇಹಿತರ ಜೊತೆ ಸೇರಿ ಕೈಯಿಂದ ಹೊಡೆದು ಹರಿತವಾದ ಆಯುಧದಿಂದ ಹೊಟ್ಟೆಗೆ ಇರಿದು ಗಾಯಗೊಳಿಸಿದ್ದಾನೆ ಎಂದು ತಿಳಿದು ಬಂದಿದೆ.

ಹಲ್ಲೆಗೊಳಗಾಗಿ ಗಾಯಗೊಂಡಿರುವ ಝಾಕಿರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲಾಗಿದ್ದು, ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

Comments are closed.