ಕರಾವಳಿ

ಸುಶಾಸನ ಹಾಗೂ ಆರ್ಥಿಕ ಶಿಸ್ತಿಗೆ ಒತ್ತು ನೀಡಿರುವ ದೂರದೃಷ್ಠಿಯ ಸಮಗ್ರ ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

Pinterest LinkedIn Tumblr

ಮಂಗಳೂರು : ದೇಶದಲ್ಲಿ ಬದಲಾವಣೆಗೆ ಅಪೇಕ್ಷೆ ಪಟ್ಟು ಜನಾದೇಶ ನೀಡಿರುವ ದೇಶದ ಜನತೆಯ ಆಶಯದಂತೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿತ್ತ ಸಚಿವ ಶ್ರೀ ಅರುಣ್ ಜೇಟ್ಲಿಯವರು ದೇಶದ ಅಭಿವೃದ್ಧಿಗೆ ಹಾಗೂ ಆರ್ಥಿಕತೆಯ ಬಲಪಡಿಸಲು ಪೂರಕವಾಗುವ ನಿಟ್ಟಿನಲ್ಲಿ ದೂರದೃಷ್ಠಿಯಿಟ್ಟುಕೊಂಡು ಸಿದ್ಧಪಡಿಸಿದ ಜನಪರ ಹಾಗೂ ಶಿಸ್ತುಬದ್ಧ ಬಜೆಟ್ ಇದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ವಿಜ್ಞಾನ ತಂತ್ರಜ್ಞಾನ, ಸಂಶೋಧನೆಗೆ ಪ್ರೋತ್ಸಾಹ ನೀಡುವುದರೊಂದಿಗೆ ದೇಶದ ರಕ್ಷಣಾ ಪಡೆಗಳ ಅಧುನೀಕರಣದ ನಿಟ್ಟಿನಲ್ಲಿ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗಿದೆ. ರೈತರಿಗೆ ಹಾಗೂ ದುರ್ಬಲ ವರ್ಗದವರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ವಸತಿ ರಹಿತರಿಗೆ ಮನೆ ನಿರ್ಮಿಸಲು, ಕೃಷಿ, ಗ್ರಾಮೀಣ ಅಭಿವೃದ್ಧಿ ಹಾಗೂ ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ಒತ್ತು ನೀಡಲಾಗಿದೆ. ಮನ್ರೇಗಾ ಯೋಜನೆಗೆ ದಾಖಲೆ ನಿಧಿ ಹೆಚ್ಚಳ, ಮಹಿಳಾ ಮತ್ತು ಶಿಶು ಕಲ್ಯಾಣಕ್ಕೆ ವಿಶೇಷ ನೆರವು. ಪ್ರತಿ ಹಳ್ಳಿಗಳಲ್ಲೂ ಶೌಚಾಲಯ ನಿರ್ಮಾಣಕ್ಕೆ ಒತ್ತು. ಹಳ್ಳಿಗಳಲ್ಲಿ ಕೃಷಿ ವಿಜ್ಞಾನ ಕೇಂದ್ರಗಳ ಸ್ಥಾಪನೆಗೆ ಆದ್ಯತೆ. ರೈಲ್ವೆ ಹಳಿ ಹಾಗೂ ರಸ್ತೆ ಹಾಗೂ ಹೆದ್ದಾರಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ವಯ ನಿರ್ಮಾಣವಾಗುತ್ತಿರುವ ರಸ್ತೆ ನಿರ್ಮಾಣದ ವೇಗ 2011ರಲ್ಲಿ ಇದ್ದ 73 ಕಿ.ಮೀ/ಪ್ರತಿದಿನ ಬದಲಾಗಿ 133 ಕಿ.ಮೀ./ಪ್ರತಿದಿನ ನಿರ್ಮಾಣವಾಗುತ್ತಿರುವುದು ದಾಖಲೆ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ. ಮಧ್ಯಮ ವರ್ಗ ಹಾಗೂ ಸಂಬಳದ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ರೂ. 5 ಲಕ್ಷ ವರೆಗಿನ ಆದಾಯ ತೆರಿಗೆಯನ್ನು ಶೇ.10 ರಿಂದ ಶೇ.5ಕ್ಕೆ ಇಳಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಸಣ್ಣ ಹಾಗೂ ಅತಿ ಸಣ್ಣ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿರುವುದಲ್ಲದೆ ಉದ್ಯೋಗ ಸೃಷ್ಟಿಗೂ ಒತ್ತು ನೀಡಲಾಗಿದೆ. ನಾಗರಿಕರ ಬದುಕಿನ ಗುಣಮಟ್ಟ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ. ಹಿರಿಯ ನಾಗರಿಕರಿಗೆ ಪೆನ್ಷನ್ ಹಾಗೂ ಆಧಾರ್ ಆಧಾರಿತ ಹೆಲ್ತ್ ಕಾರ್ಡ್ ಯೋಜನೆಗಳು ಹಿರಿಯ ನಾಗರಿಕರ ನಿರೀಕ್ಷೆ ಹೆಚ್ಚಿಸಿವೆ. ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗೆ ರಾಷ್ಟ್ರೀಯ ಪರೀಕ್ಷಾ ಮಂಡಳಿ ಸ್ಥಾಪನೆ ಮುಂತಾದವುಗಳ ಮೂಲಕ ಅನೇಕ ಸುಧಾರಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಎಲ್ಲಾ ಕ್ಷೇತ್ರಗಳಿಗೂ ಸಮಾನ ಒತ್ತು ನೀಡುವ ಇದೊಂದು ಸುಶಾಸನ, ಶಿಸ್ತುಬದ್ಧ, ಜನಪರ, ದೇಶದ ಅಭಿವೃದ್ಧಿಗೆ ಪೂರಕ ಹಾಗೂ ಆರ್ಥಿಕತೆ ಬಲಪಡಿಸುವ ಬಜೆಟ್ ಇದಾಗಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.