ಕರಾವಳಿ

ಕೊಂಕಣಿ ಕವಿ ನೂತನ್ ಸಾಖರ್‌ದಾಂಡೆ ಇವರಿಗೆ ಕವಿತಾ ಟ್ರಸ್ಟ್ ಕವಿತಾ ಪುರಸ್ಕಾರ ಘೋಷಣೆ

Pinterest LinkedIn Tumblr

ಮಂಗಳೂರು : ಕೊಂಕಣಿ ಕವಿತಾ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದವರಿಗಾಗಿ ಕವಿತಾ ಟ್ರಸ್ಟ್ ಪ್ರತಿ ವರ್ಷ ನೀಡುವ ಮತಾಯಸ್ ಕುಟುಂಬ ಕವಿತಾ ಪುರಸ್ಕಾರ-2016 ಗೋವಾ ನಿವಾಸಿ ಕೊಂಕಣಿ ಕವಿ ನೂತನ್ ಸಾಖರ್‌ದಾಂಡೆ ಇವರಿಗೆ ಲಭಿಸಿದೆ.

ಈ ಪುರಸ್ಕಾರವನ್ನು 2017 ಫೆಬ್ರುವರಿ 5ರಂದು ಮಂಗಳೂರಿನ ಗ್ಯಾಲರಿ ಓರ್ಕಿಡ್‌ನಲ್ಲಿ ನಡೆಯುವ ‘ಕವಿತಾ ಸಂಭ್ರಮ’ ಕಾರ್ಯಕ್ರಮದಲ್ಲಿ ಮಂಗಳೂರಿನ ಶಾಸಕರಾದ ಜೆ.ಆರ್. ಲೋಬೋರವರು ಈ ಪ್ರಶಸ್ತಿಯನ್ನು ಹಸ್ತಾಂತರಿಸುವರು.

ಈ ಪುರಸ್ಕಾರವು ರೂ. 25,000 ನಗದು, ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಎಮ್. ಪಿ. ರೊಡ್ರಿಗಸ್ ಇವರ ಕವನ ಸಂಕಲನ ‘ರಸ್ತ್ಯಾ ದೆಗೆಚಿಂ ಫುಲಾಂ’ ಪುಸ್ತಕ ವಿಮೋಚನೆ ಹಾಗೂ ಕವಿಗೋಷ್ಟಿ ಜರಗುವುದು.

ಕವಿತೆ ಮತ್ತು ಅನುವಾದ ಕ್ಷೇತ್ರದಲ್ಲಿ ಹೆಸರು ಮಾಡಿದ ನೂತನ್ ಸಾಖರ್‌ದಾಂಡೆ ಅವರ `ಜೀಣ್ ಜಾಲಿ ಕಸ್ತೂರಿ’, ‘ಪಾಸ್‌ವರ್ಡ್’ ಹಾಗೂ ‘ತನ್ಮಯಧೂಲ್’ ಅನುವಾದಿತ ಕವನ ಸಂಕಲನ ಪುಸ್ತಕಗಳು ಪ್ರಕಟಗೊಂಡಿವೆ. ಅವರ ‘ಶೆಣಿಲ್ಲೊ ಗಾಂವ್’ ಕವಿತೆ ಭಾರತದ 18  ಭಾಷೆಗಳಿಗೆ ಅನುವಾದಿಸಲ್ಪಟ್ಟಿದೆ.

ಗೋವೆಯ ಹೈಸ್ಕೂಲ್ ಹಾಗೂ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲಿ ಅವರ ಕವಿತೆಗಳು ಸ್ಥಾನ ದೊರಕಿಸಿ ಕೊಂಡಿವೆ. ನೂತನ್‌ರವರಿಗೆ ಡೊ. ಟಿ. ಎಮ್. ಎ. ಪೈ ಫೌಂಡೇಶನ್ ಅತ್ಯುತ್ತಮ ಪುಸ್ತಕ ಪ್ರಶಸ್ತಿ ಹಾಗೂ ಇನ್ನಿತರ ಹಲವಾರು ಪುರಸ್ಕಾರಗಳು ದೊರಕಿವೆ.

ಕೊಂಕಣಿ ಕವಿತೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸುವ ಕಾಯಕವನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಕವಿತಾ ಟ್ರಸ್ಟ್ ಉದ್ಯಮಿ ಜೊಸೆಫ್ ಮತಾಯಸ್ ಇವರ ಸಹಕಾರದಲ್ಲಿ 2008 ಇಸವಿಯಿಂದ ವರ್ಷಂಪ್ರತಿ ಈ ಪುರಸ್ಕಾರವನ್ನು ನೀಡುತ್ತಿದೆ.

Comments are closed.