ಕರಾವಳಿ

ಕಂಬಳ ನಿಷೇಧ ತೆರವಿಗೆ ಹೈಕೋರ್ಟ್ ನಿರಾಕರಣೆ : ವಿಚಾರಣೆ 2 ವಾರ ಮುಂದಕ್ಕೆ

Pinterest LinkedIn Tumblr

ಮಂಗಳೂರು, ಜನವರಿ. 30: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.ದಕ್ಷಿಣ ಕನ್ನಡ ಮತ್ತು ಉಡುಪಿಯ ಕ್ರೀಡೆ ಕಂಬಳದ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ಇಂದು ನಿರಾಕರಿಸಿದ್ದು, ಈ ಸಂಬಂಧ ವಿಚಾರಣೆಯನ್ನು 2 ವಾರ ಮುಂದೂಡಿದೆ ಎನ್ನಲಾಗಿದೆ.

ಕಂಬಳ ಕ್ರೀಡೆ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸುವಂತೆ ಕೋರಿ ಹೈಕೋರ್ಟ್ಗೆ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ವಿಚಾರಣೆ ನಡೆಸಿರುವ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಕಂಬಳದ ಮೇಲಿನ ನಿಷೇಧವನ್ನು ತೆರವುಗೊಳಿಸಲು ನಿರಾಕರಿಸಿದರು ಎಂದು ತಿಳಿದುಬಂದಿದೆ.

ಕಂಬಳ ನಿರ್ಬಂಧಿಸಿರುವುದನ್ನು ವಿರೋಧಿಸಿ ಹಾಗೂ ಶೀಘ್ರ ಅನುಮತಿ ನೀಡುವಂತೆ ಒತ್ತಾಯಿಸಿ ಇತ್ತೀಚೆಗೆ ಮಂಗಳೂರು ಹಾಗೂ ಮೂಡಬಿದ್ರೆಯಲ್ಲಿ ಬೃಹತ್ ಪ್ರತಿಭಟನೆ ಹಾಗೂ ಬೃಹತ್ ಹಕ್ಕೊತ್ತಾಯ ಸಭೆ ನಡೆದಿದ್ದು, ಹಕ್ಕೊತ್ತಾಯ ಮೆರವಣಿಗೆ ಹಾಗೂ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ಪಾಲ್ಗೊಂಡು, ಶಕ್ತಿ ಪ್ರದರ್ಶನ ಮಾಡಿದ್ದರು.

ಮೆರವಣಿಗೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿದ್ಯಾರ್ಥಿಗಳು, ಕನ್ನಡ, ತುಳು ಚಿತ್ರರಂಗ ಹಾಗೂ ತುಳು ರಂಗ ಕಲಾವಿದರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡು ಕಂಬಳ ಆಚರಣೆಗೆ ಸುಗ್ರೀವಾಜ್ಞೆ ಹೊರಡಿಸುವಂತೆ ಆಗ್ರಹಿಸಿದ್ದರು.

Comments are closed.