ಕರಾವಳಿ

ಮಂಗಲಗೋಯಾತ್ರೆ ಮಂಗಳೂರಿಗೆ ಆಗಮನ : ಮೂರು ದಿನಗಳ ಮಹಾಮಂಗಲ ಕಾರ್ಯಕ್ರಮಕ್ಕೆ ರಾಘವೇಶ್ವರ ಶ್ರೀಯವರಿಂದ ವಿದ್ಯುಕ್ತ ಚಾಲನೆ

Pinterest LinkedIn Tumblr

ಹುಲಿಯ ಬದಲು ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ದೇಶ ಘೋಷಿಸಬೇಕು : ಆಗ್ರಹ

ಮಂಗಳೂರು, ಜನವರಿ, 28: ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ದಿವ್ಯ ಪರಿಕಲ್ಪನೆಯ ದಶರಥಗಳ ಮಹಾಭಿಯಾನ ‘ಮಂಗಲಗೋಯಾತ್ರೆ’ಯ ಮಹಾಮಂಗಲ ಕಾರ್ಯಕ್ರಮವು ಶುಕ್ರವಾರ ಗೋಧೂಳಿ ಲಗ್ನದಲ್ಲಿ ಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿಯ ‘ಮಂಗಲಭೂಮಿ’ಯಲ್ಲಿ ಆರಂಭಗೊಂಡಿದೆ.

13 ಸಾವಿರ ಕಿಲೋಮೀಟರ್ ಪರ್ಯಟನೆ ಕೈಗೊಂಡ ಮಂಗಲ ಗೋಯಾತ್ರೆ ಮಂಗಳೂರಿಗೆ ಆಗಮಿಸಿದ್ದು, ಗೋಧೂಳಿ ಲಗ್ನದಲ್ಲಿ ಸಾಲಂಕೃತ ದಶರಥಗಳು, ಹಸಿರುಕಾಣಿಕೆ ಹೊತ್ತ ನೂರಾರು ವಾಹನಗಳು ಮತ್ತು ಸಹಸ್ರಾರು ಗೋಪ್ರೇಮಿಗಳು ಮಂಗಲಭೂಮಿ ಪ್ರವೇಶಿಸಿದರು.ಬೆಳಗ್ಗೆ 7.30ಕ್ಕೆ ಕಾಮಧೇನು ಹವನ, ಗೋವರ್ಧನ ಪೂಜೆ, ಗೋಪೂಜೆ, ಗೋದಾನ, ಗೋ ತುಲಾಭಾರ, ಸಂಜೆ ಮಂಗಳೂರು ಪಡೀಲ್‌ನಿಂದ ಹಸಿರುಕಾಣಿಕೆ ಸಹಿತ ಶೋಭಾಯಾತ್ರೆ ಪ್ರಾರಂಭವಾಗಿ ಸಂಜೆ 6.30ರ ಗೋಧೂಳಿ ಸಮಯ ಕೂಳೂರಿನ ಮಂಗಲಭೂಮಿಗೆ ಪ್ರವೇಶವಾಯಿತು.

ಬಳಿಕ ನಾಡಿನ ಮಠಾಧೀಶರ ಉಪಸ್ಥಿತಿಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋಜ್ಯೋತಿ ಪ್ರಜ್ವಲನ ನಡೆಸಿ, ಗೋದೀಪೋತ್ಸವ ನೆರವೇರಿಸಿದರು. ಈ ಅಪೂರ್ವ ಸಮಾರಂಭದೊಂದಿಗೆ ಮೂರು ದಿನಗಳ ಮಹಾಮಂಗಲ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರಕಿತು.

ಜ. 29ರಂದು ಸಂತ ಸಂಗಮ ಹಾಗೂ ಲಕ್ಷಾಂತರ ಗೋ ಪ್ರೇಮಿಗಳ ಸಂಗಮದಿಂದ ಗೋ ರಕ್ಷಣೆಯ ಅಭೇದ್ಯ ಕೋಟೆ ನಿರ್ಮಾಣವಾಗಲಿದ್ದು ಗೋ ಹತ್ಯೆ ನಿಲ್ಲುವ ಕುರಿತಾಗಿ ಸಂಪೂರ್ಣ ವಿಶ್ವಾಸ ಹೊಂದಿದ್ದೇನೆ. ಭಾರತವನ್ನು ಗೋ ಸೂತ್ರ ಒಂದಾಗಿಸಬಲ್ಲುದು. ವಿವಿಧ ಜಾತಿ ಪಂಗಡಗಳಿದ್ದರೂ ಗೋ ರಕ್ಷಣೆಗಾಗಿ ಒಂದಾದಾಗ ಗೋ ಸಂಹಾರ ನಿಲ್ಲುತ್ತದೆ. ಗೋ ಹತ್ಯಾ ಕಳಂಕದಿಂದ ದೇಶವನ್ನು ರಕ್ಷಿಸುವುದು ಸಂತರಾದ ನಮ್ಮಿಂದ ಮಾತ್ರ ಸಾಧ್ಯ. ಗೋ ಪ್ರೇಮಿಗಳಿಗೆ, ಗೋ ಭಕ್ತರಿಗೆ ಶಕ್ತಿಯಾಗಿ ಸಂತರು ನಿಂತಾಗ ಗೋಹತ್ಯಾ ಮುಕ್ತ ದೇಶವನ್ನಾಗಿ ಮಾಡಬಹುದಾಗಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಹೇಳಿದರು.

ಮೂಡಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಮಾತನಾಡಿ, ಹುಲಿಯ ಬದಲು ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ದೇಶ ಘೋಷಿಸಬೇಕು. ಹೀಗಾದಾಗ ಮಾತ್ರ ಗೋ ಹತ್ಯೆ ನಿಲ್ಲಲಿದೆ. ರಾಷ್ಟ್ರ ಪಕ್ಷಿ ನವಿಲು, ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಕೊಲ್ಲಲು ಹೇಗೆ ನಿಷೇಧವಿದೆಯೋ ಹಾಗೆಯೇ ಗೋ ಹತ್ಯೆಗೂ ನಿಷೇಧ ಅಗತ್ಯ ಎಂದು ಹೇಳಿದರು.

ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ವಿಖ್ಯಾತಾನಂದ ಸ್ವಾಮೀಜಿ, ಚೆನ್ನಕೇಶವ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಬ್ರಹ್ಮಕುಮಾರಿ ವಿಶ್ವೇಶ್ವರಿ, ಸ್ವಾಗತ ಸಮಿತಿ ಅಧ್ಯಕ್ಷ ನಿಟ್ಟೆ ವಿನಯ ಹೆಗ್ಡೆ ಮತ್ತು ಮಾರ್ಗದರ್ಶಕ ಮಂಡಳಿ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಮತ್ತಿತರರು ಉಪಸ್ಥಿತರಿದ್ದರು.

ನಾಳೆ ನಡೆಯಲಿರುವ ಮಹಾತ್ರಿವೇಣಿಗೆ ಭವ್ಯ ವೇದಿಕೆ ಸಜ್ಜಾಗುತ್ತಿದ್ದು, ದೇಶದ ಮೂಲೆ ಮೂಲೆಗಳಿಂದ ಸಂತರಸಾಗರ ಮಂಗಲಭೂಮಿಗೆ ಆಗಮಿಸಿದ್ದಾರೆ. ಔರಂಗಾಬಾದ್‌ನಿಂದ ಆಗಮಿಸಿರುವ 100ಕ್ಕೂ ಹೆಚ್ಚು ಸಂತರು ಹಾಗೂ ತ್ರಯಂಬಕೇಶ್ವರದಿಂದ ಆಗಮಿಸಿರುವ 80ಕ್ಕೂ ಹೆಚ್ಚು ಸಂತರು ಹಂಪಿ ಹಾಗೂ ಕೊಲ್ಲಾಪುರದಲ್ಲಿ ತಂಗಿದ್ದು, ಶನಿವಾರ ಸಂಜೆ ಮಂಗಲಭೂಮಿಗೆ ತಲುಪಲಿದ್ದಾರೆ.

ಮಹಾಮಂಗಲ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರದಿಂದಲೇ ಆರಂಭವಾಗಿವೆ. ಗೋಸೂಕ್ತ ಹವನ, ಕಾಮಧೇನು ಯಾಗ, ಕಲ್ಪೋಕ್ತ ಗೋಪಾಲಕೃಷ್ಣ ಪೂಜೆ, 1008 ಗೋಸೂಕ್ತ ಪಾರಾಯಣ, ಗೋ ತುಲಾಭಾರ ಸೇವೆಗಳು ಆರಂಭವಾಗಿವೆ.

ಶ್ರೀರಾಮಚಂದ್ರಾಪುರ ಮಠದ ಗೋಶಾಲೆಯಿಂದ 30ತಳಿಗಳ ಹಸುಗಳು ಮಂಗಲಭೂಮಿಗೆ ಆಗಮಿಸಿವೆ. ಅಮೃತ್ ಮಹಲ್, ಮಲೆನಾಡು ಗಿಡ್ಡ, ಬರಗೂರು, ಓಂಗೋಲ್, ಸಾಹಿವಾಲ್, ಥಾರ್ಪರ್ಕರ್, ಗೀರ್ ಮತ್ತಿತರ ಗೋತಳಿಗಳು ಗಮನ ಸೆಳೆಯುತ್ತಿವೆ. ಬಜಕೂಡ್ಲು, ವೇಣೂರು, ಕಿನ್ನಿಗೋಳಿ ಯಳತ್ತೂರಿನ ಶಕ್ತಿದರ್ಶನ ಯೋಗಾಶ್ರಮದಿಂದಲೂ ಗೋವುಗಳು ಆಗಮಿಸಿವೆ.

ಅಳಿವಿನ ಅಂಚಿನಲ್ಲಿರುವ ಭಾರತೀಯ ಪಾರಂಪರಿಕ ಗೋತಳಿಗಳ ಸಂರಕ್ಷಣೆಗಾಗಿ, ಪ್ರಕೃತಿ – ಪರಿಸರದ ಉಳಿವಿಗಾಗಿ, ಜೀವ ಜಗತ್ತಿನ ಒಳಿತಿಗಾಗಿ, ಮನುಕುಲದ ಸ್ವಸ್ಥ ಬದುಕಿಗಾಗಿ, ಗೋಮಾತೆಯ ಹಾಲುಂಡ ಹೃದಯಗಳಲ್ಲಿ ಭಾವ ಜಾಗೃತಿಗಾಗಿ ಗೋವಿಗಾಗಿ ಆತ್ಮಾರ್ಪಣೆ ಮಾಡಿದ ಗೋ ಪ್ರೇಮಿ ಮಂಗಲಪಾಂಡೆಯ ಪ್ರೇರಣೆಯೊಂದಿಗೆ ನಾಡಿನ ಮಠಾಧೀಶರ ನೇತೃತ್ವದಲ್ಲಿ 2016ರ ನವಂಬರ್‌ 08 ಗೋಪಾಷ್ಟಮಿಯಂದು ಪ್ರಾರಂಭಿಸಿದ ಮಂಗಲ ಗೋಯಾತ್ರೆಯು 81 ದಿನಗಳ ಕಾಲ ಸಪ್ತರಾಜ್ಯಗಳ ಪರ್ಯಂತ ಸಂಚರಿಸಿ ಜನಮಾನಸದಲ್ಲಿ ಗೋಜಾಗರಣಾ ಜ್ಯೋತಿಯನ್ನು ಪ್ರಜ್ವಲಿಸಿದೆ.

Comments are closed.