ಕರಾವಳಿ

ಎತ್ತಿನಹೊಳೆ ವಿರುದ್ಧ :ಪಾಲೆಮಾರ್, ವಿಜಯ ಕುಮಾರ್, ನಳಿನ್ ಕುಮಾರ್ ನೇತ್ರತ್ವದಲ್ಲಿ ಸರ್ಜಿಕಲ್ ಸ್ಟ್ರೈಕ್

Pinterest LinkedIn Tumblr

ಮಂಗಳೂರು,ಜನವರಿ,27: ಎತ್ತಿನಹೊಳೆ ಯೋಜನೆ ವಿರೋಧಿಸಿ ಫೆಬ್ರವರಿ 10 ರಿಂದ ಅಮರಣಾಂತಿಕ ಸತ್ಯಾಗ್ರಹ ನಡೆಸಲಿದ್ದು, ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಸಮಿತಿಯ ಸದಸ್ಯರು, ಸಾಧು ಸಂತರು, ವಿವಿಧ ಧಾರ್ಮಿಕ ನಾಯಕರು ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಸಂಸದ ನಳೀನ್ ಕುಮಾರ್‌ ಕಟೀಲ್‌ ತಿಳಿಸಿದರು.

ಗಣರಾಜ್ಯೋತ್ಸವ ಪ್ರಯುಕ್ತ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಸಮಿತಿಯ ಕಾರ್ಯಕರ್ತರು ಸಂಸದ ನಳಿನ್ ಕುಮಾರ್ ನೇತ್ರತ್ವದಲ್ಲಿ ಗುರುವಾರ ನಗರದ ಪುರಭವನದ ಮುಂಭಾಗದಲ್ಲಿರುವ ಮಹಾತ್ಮಾ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು, ಎತ್ತಿನಹೊಳೆ ಯೋಜನೆ ವಿರೋಧಿಸಿ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಹಾಗೂ ತನ್ನ ನೇತೃತ್ವದಲ್ಲಿ ಸರ್ಜಿಕಲ್ ಸ್ಟ್ರೈಕ್ ರೀತಿಯ ಹೋರಾಟ ನಡೆಸುವುದಾಗಿ ಹೇಳಿದರು.

ಫೆಬ್ರವರಿ 6ರಿಂದ 10ರ ವರೆಗೆ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಈ ಯೋಜನೆ ಕುರಿತು ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದ ಅವರು ಗಾಂಧಿ ತತ್ವದಲ್ಲಿ ನಂಬಿಕೆ ಇದ್ದರೆ ನಮ್ಮ ಬೇಡಿಕೆ ಈಡೇರಿಸಿ ಇಲ್ಲವೇ ಸರ್ಜಿಕಲ್ ಸ್ಟ್ರೈಕ್ ಎದುರಿಸಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಉಪಮೇಯರ್ ಸುಮಿತ್ರ.ಕೆ, ಮನಪಾ ವಿಪಕ್ಷ ನಾಯಕಿ ರೂಪ.ಡಿ.ಬಂಗೇರಾ, ಹೋರಾಟ ಸಮಿತಿಯ ಪ್ರಮುಖರಾದ ಡಾ. ಅಣ್ಣಯ್ಯ ಕುಲಾಲ್, ಶಶಿರಾಜ್ ಶೆಟ್ಟಿ ಕೊಳಂಬೆ, ಎಮ್.ಜಿ.ಹೆಗ್ಡೆ, ಸುಧೀರ್ ಶೆಟ್ಟಿ ಕಣ್ಣೂರ್, ರವಿ ಶಂಕರ್ ಮಿಜಾರ್, ಯೋಗೀಶ್ ಶೆಟ್ಟಿ ಜೆಪ್ಪು, ನಿತಿನ್ ಕುಮಾರ್ ಮತ್ತಿತ್ತರರು ಈ ವೇಳೆ ಉಪಸ್ಥಿತರಿದ್ದರು.

Comments are closed.