ಕರಾವಳಿ

ಕಂಬಳ ಹೋರಾಟಕ್ಕೆ ಕಾಪಿಕಾಡ್ – ಕೊಡಿಯಾಲ್ ಬೈಲ್ ನೇತ್ರತ್ವದಲ್ಲಿ ತುಳು ಕಲಾವಿದರ ಬೆಂಬಲ

Pinterest LinkedIn Tumblr

ಮಂಗಳೂರು, ಜನವರಿ.27: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಹೋರಾಟಕ್ಕೆ ತುಳುನಾಡಿನ ಕಲಾವಿದರು ಕೈ ಜೋಡಿಸಿದ್ದು,ಇಂದು ಮಂಗಳೂರಿನಲ್ಲಿ ನಡೆಯುವ ಮಾನವ ಸರಪಳಿ ಹಾಗೂ ಜಿಲ್ಲಾ ಕಂಬಳ ಸಮಿತಿ ವತಿಯಿಂದ ಡಿ.28ರಂದು ಮೂಡುಬಿದಿರೆಯಲ್ಲಿ ನಡೆಯುವ ಕಂಬಳ ಪರ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.

ಗುರುವಾರ ಈ ಬಗ್ಗೆ ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ತುಳು ಕಲಾವಿದರ ಪರವಾಗಿ ತುಳು ಚಿತ್ರರಂಗದ ಹಿರಿಯ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಮತ್ತು ಹಿರಿಯ ನಟ, ನಿರ್ದೇಶಕ ದೇವದಾಸ ಕಾಪಿಕಾಡ್ ಅವರು ಮಾತನಾಡಿ,ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಬೆಂಬಲಿಸಿ ಜಿಲ್ಲೆಯ ತುಳು ಕಲಾವಿದರು ಬೆಂಬಲಿಸಲಿದ್ದಾರೆ. ತುಳು ಚಿತ್ರರಂಗದ ಕಲಾವಿದರು ಮಾತ್ರವಲ್ಲದೇ ನಾಟಕ, ಯಕ್ಷಗಾನ, ಸಾಂಸ್ಕೃತಿಕ ರಂಗಭೂಮಿಯ ಕಲಾವಿದರು ಕಂಬಳ ಬೆಂಬಲಿಸಿ ನಗರದಲ್ಲಿ ನಡೆಯುವ ಮಾನವ ಸರಪಳಿ ಹಾಗೂ 28 ರಂದು ಮೂಡುಬಿದಿರೆಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.

ಸಿನೆಮಾ, ರಂಗಭೂಮಿ, ಯಕ್ಷಗಾನ, ಜಾದೂ, ಭರತನಾಟ್ಯ ಹೀಗೆ ಸಾಂಸ್ಕೃತಿಕ ರಂಗದ ಎಲ್ಲವೂ ಕಂಬಳಕ್ಕೆ ಪ್ರಾಧ್ಯಾನತೆ ನೀಡುತ್ತಿದೆ. ಕರಾವಳಿಯ ಸಂಸ್ಕೃತಿ ಉಳಿಸಬೇಕಾದರೆ ಕಂಬಳವನ್ನು ಮುನ್ನಡೆಸಬೇಕು. ಈ ವಿಚಾರದಲ್ಲಿ ಎಲ್ಲ ಕಲಾವಿದರು ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸಬೇಕಾಗಿದೆ ಎಂದರು.

ಕನ್ನಡದ ಸ್ಟಾರ್ ನಟರಾದ ಶಿವರಾಜ್ ಕುಮಾರ್, ಜಗ್ಗೇಶ್, ಯಶ್, ರಕ್ಷಿತಾ ಈಗಾಗಲೇ ಕಂಬಳ ಹೋರಾಟವನ್ನು ಬೆಂಬಲಿಸಿದ್ದಾರೆ. ಸಾಂಸ್ಕೃತಿಕ ರಂಗದಲ್ಲಿರುವ ಎಲ್ಲಾ ಕಲಾವಿದರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ. ಇಲ್ಲಿ ಸುಮಾರು 25 ನಾಟಕ ತಂಡಗಳಿದ್ದು, ಇದರಲ್ಲಿ 15 ತಂಡಗಳನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಉಭಯ ದಿನಗಳು ನಡೆಯುವ ಪ್ರತಿಭಟನೆಗಳಲ್ಲಿ ತಲಾ ಸುಮಾರು ಒಂದೂವರೆ ಸಾವಿರ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇತ್ತೀಚಿಗೆ ಭರ್ಜರಿ ಯಶಸ್ಸು ಕಂಡ `ಬರ್ಸ’ ತುಳು ಚಲನಚಿತ್ರದ `ಪೊರ್ಲುಡು ಪೊರ್ಲು’ ಈ ತುಳುನಾಡು…’ ಜನಪ್ರಿಯ ಹಾಡಿನ ಧಾಟಿಯಲ್ಲಿ ಕಂಬಳದ ಹಾಡು ಧ್ವನಿ ಮುದ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುವುದು. ಕಂಬಳದ ಹಿರಿಮೆ- ಗರಿಮೆಯನ್ನು ಸಾರುವ ಸಾಹಿತ್ಯವನ್ನು ಈ ಜಾಗೃತಿ ಹಾಡು ಹೊಂದಿರುತ್ತದೆ ಎಂದು ದೇವದಾಸ ಕಾಪಿಕಾಡ್ ತಿಳಿಸಿದರು.

ಸಂಘಟಕ ಕದ್ರಿ ನವನೀತ್ ಶೆಟ್ಟಿ ಕಂಬಳದ ಮಹತ್ವ ಹಾಗೂ ಕಲಾವಿದ ಸುಂದರ ರೈ ಮಂದಾರ ಅವರು ಇನ್ನಿತರ ಪೂರಕ ಮಾಹಿತಿಗಳನ್ನು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಕಲಾವಿದರಾದ ಭೋಜರಾಜ ವಾಮಂಜೂರು, ಜಾದು ಕಲಾವಿದ ಕುದ್ರೋಳಿ ಗಣೇಶ್, ಸಾಂಸ್ಕೃತಿಕ ತಂಡದ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ಚಿತ್ರ ನಿರ್ಮಾಪಕರಾದ ಪಮ್ಮಿ ಕೊಡಿಯಾಲ್ ಬೈಲ್, ಧನರಾಜ್, ನಿರ್ಮಾಪಕಿ ಹಾಗೂ ನಟಿ ಅಶ್ವಿನಿ ಹರೀಶ್ ನಾಯಕ್, ಕಲಾ ಫೋಷಕ ಅಶೋಕ್ ಶೆಟ್ಟಿ ಸರಪಾಡಿ ಮುಂತಾದವರು ಉಪಸ್ಥಿತರಿದ್ದರು.

Comments are closed.