ಕರಾವಳಿ

ಕುಂದಾಪುರದಲ್ಲಿ 68ನೇ ಗಣರಾಜ್ಯೋತ್ಸವ ದಿನಾಚರಣೆ

Pinterest LinkedIn Tumblr

ಕುಂದಾಪುರ: ಅಹಿಂಸೆಯ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆದುಕೊಂಡ ಭಾರತದ ಸ್ವಾತಂತ್ರ್ಯ ಹೋರಾಟ ವಿಶ್ವಕ್ಕೆ ಮಾದರಿಯಾಗಿದೆ. ಈ ಕಾರಣದಿಂದಲೆ ವಿಶ್ವ ಮಾನ್ಯವಾಗಿರುವ ಭಾರತದ ಗಣತಂತ್ರ ವ್ಯವಸ್ಥೆಗಳ ಗಟ್ಟಿ ನೆಲೆಯಲ್ಲಿ ನಾವುಗಳು ಮುಂದೆ ಸಾಗಬೇಕು. ರಾಜ್ಯದ ಅಭಿವೃದ್ದಿಯ ಸದುದ್ದೇಶದಿಂದ ಜಾರಿಗೆ ತಂದಿರುವ ಹಲವು ಜನಪರ ಯೋಜನೆಗಳನ್ನು ಸದ್ಭಳಿಕೆ ಮಾಡಿಕೊಳ್ಳುವ ಮೂಲಕ ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುವ ಪ್ರಯತ್ನಗಳು ನಮ್ಮದಾಗಬೇಕು ಎಂದು ಕುಂದಾಪುರ ಕಂದಾಯ ಸಹಾಯಕ ಆಯುಕ್ತೆ ಶಿಲ್ಪನಾಗ್ ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಗುರುವಾರ ನಡೆದ 68ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಅವರು ಗಣರಾಜ್ಯೋತ್ಸವ ಸಂದೇಶ ನೀಡಿದರು.

ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಪುರಸಭಾಧ್ಯಕ್ಷೆ ವಸಂತಿ ಸಾರಂಗ, ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ, ಕುಂದಾಪುರ ಉಪವಿಭಾಗದ ಡಿವೈ‌ಎಸ್‌ಪಿ ಪ್ರವೀಣ್.ಎಚ್.ನಾಯಕ್, ತಾಲ್ಲೂಕು ತಹಶೀಲ್ದಾರ್ ಜಿ.ಎಂ. ಬೋರ್ಕರ್, ತಾಲ್ಲೂಕು ಪಂಚಾಯಿತಿ ಕಾರ್‍ಯನಿರ್ವಹಣಾಧಿಕಾರಿ ಚನ್ನಪ್ಪ ಮೊಯಿಲಿ, ಸರ್ಕಲ್ ಇನ್‌ಸ್ಪೆಕ್ಟರ್ ಮಂಜಪ್ಪ, ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ, ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪುರಸಭಾ ಸದಸ್ಯರುಗಳಾದ ಪಿ.ಗುಣರತ್ನ, ಪುಷ್ಪಾ ಶೇಟ್, ಶಕುಂತಲಾ ಗುಲ್ವಾಡಿ, ಶ್ರೀಧರ ಶೇರುಗಾರ, ಶಿವರಾಂ ಪುತ್ರನ್ ಇದ್ದರು.

ಕುಂದಾಪುರ ಪೊಲೀಸ್ ಠಾಣಾಧಿಕಾರಿ ನಾಸೀರ್ ಹುಸೇನ್ ನೇತ್ರತ್ವದಲ್ಲಿ ಪೊಲೀಸ್, ಗೃಹ ರಕ್ಷಕದಳ, ಎನ್.ಸಿ.ಸಿ, ಭಾರತ್ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳ ಆಕರ್ಷಕ ಪಥ ಸಂಚಲನ ನಡೆಯಿತು. ನಗರ ವ್ಯಾಪ್ತಿಯ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರಾದ ಪ್ರೇಮಲತಾ ಗಣೇಶ್ ಹಾಗೂ ಫಿಲೋಮಿನಾ ಅವರುಗಳನ್ನು ಗೌರವಿಸಲಾಯಿತು.

ಕುಂದಾಪುರ ವಲಯದ ಪ್ರಭಾರ ಶಿಕ್ಷಣಾಧಿಕಾರಿ ಕೆ.ಸೀತಾರಾಮ ಶೆಟ್ಟಿ ಸ್ವಾಗತಿಸಿದರು, ತಾಲ್ಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ವಂದಿಸಿದರು, ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ವಂದಿಸಿದರು.

Comments are closed.