ಕರಾವಳಿ

ನಗದು ರಹಿತ ವೇತನ ವ್ಯವಸ್ಥೆಗೆ ಖಂಡನೆ :ನಗದು ರೂಪದಲ್ಲಿ ವೇತನ ನೀಡುವಂತೆ ಅಗ್ರಹಿಸಿ ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಜ.25: ಕೇಂದ್ರ ಸರ್ಕಾರವು ರೂ.500 ಮತ್ತು ರೂ.1000 ನೋಟಿನ ಮಾನ್ಯತೆ ರದ್ದು ಮಾಡಿರುವುದು ಮಾತ್ರವಲ್ಲದೆ ನಗದು ರಹಿತ ವೇತನ ವ್ಯವಸ್ಥೆಗೆ ಆದೇಶ ಹೊರಡಿಸಿದೆ. ಆದರೆ ರಾವಳಿಯ ಜೀವನಾಡಿಯಾಗಿರುವ ಬೀಡಿ ಕೈಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಮತ್ತು ಗುತ್ತಿಗೆದಾರರಿಗೆ ಚಾಲ್ತಿಯಲ್ಲಿರುವಂತೆ ನಗದು ವೇತನ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿ ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ), ಎಚ್‌ಎಂಎಸ್, ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು) ಹಾಗೂ ದ.ಕ., ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟ್ದಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕಾಂಟ್ರಾಕ್ಟರ್‌ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನ.8ರಿಂದ ಅನ್ವಯವಾಗುವಂತೆ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಬೀಡಿ ಕಾರ್ಮಿಕರು ಅತಂತ್ರಸ್ಥಿತಿಗೆ ತಲುಪಿದ್ದಾರೆ. ಬೀಡಿ ಕಾರ್ಮಿಕರಲ್ಲಿ ಶೇ.60ರಷ್ಟು ಮಂದಿ ಅನಕ್ಷರಸ್ಥರಾಗಿದ್ದಾರೆ. ಹೆಚ್ಚಿನವರಿಗೆ ಬ್ಯಾಂಕ್ ವ್ಯವಹಾರ ಮಾಡಿ ಗೊತ್ತಿಲ್ಲ. ನೋಟು ನಿಷೇಧಕ್ಕೆ ಮುನ್ನವೇ ಬೀಡಿ ಮಾಲಕರು ತಮ್ಮ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡಿದ್ದರೆ, ಬೀಡಿ ಕಾರ್ಮಿಕರು ಇನ್ನೂ ದಿನದೂಡಲು ಹರಸಾಹಸ ಪಡುತ್ತಿದ್ದಾರೆ ಎಂದು ಹೇಳಿದರು.

ಈ ಕೈಗಾರಿಕೆಯಲ್ಲಿ ಕರಾವಳಿ ಜಿಲ್ಲೆಯ ಸುಮಾರು 5 ಲಕ್ಷ ಮಂದಿ ತೊಡಗಿಸಿಕೊಂಡಿದ್ದಾರೆ.ನಗದು ರಹಿತ ವೇತನ ಪದ್ಧತಿ ಕರಾವಳಿ ಜಿಲ್ಲೆಯ ಬೀಡಿ ಕಾರ್ಮಿಕರು ಮತ್ತು ಕಾಂಟ್ರಾಕ್ಟರ್‌ರನ್ನು ಬೀದಿಗೆ ತಳ್ಳಲಿದ್ದು, ಬೀಡಿ ಕೈಗಾರಿಕೆಗೆ ಮಾರಕವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಬೀಡಿ ಕೈಗಾರಿಕೆಗೆ ನಗದು ರಹಿತ ವೇತನ ಪದ್ಧತಿಯಿಂದ ವಿನಾಯಿತಿ ನೀಡಬೇಕೆಂದು ಅವರು ಒತ್ತಾಯಿಸಿದರು.

ಈ ಹಿಂದಿನಂತೆ ನಗದು ಪದ್ಧತಿಯಿಂದ ವೇತನ ವಿತರಿಸಲು ಅವಕಾಶ ನೀಡಬೇಕು. ಒಂದು ವೇಳೆ ಹಠಮಾರಿತನ ಪ್ರಯೋಗಿಸಿ ವೇತನವನ್ನು ಬ್ಯಾಂಕಿಂಗ್ ರಂಗಕ್ಕೆ ಅಳವಡಿಸಬೇಕೆಂದು ಒತ್ತಾಯ ಹೇರಿದರೆ ತೀವ್ರತರದ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಮಹಮ್ಮದ್ ರಫಿ ಎಚ್ಚರಿಕೆ ನೀಡಿದರು.

ಪ್ರತಿಭಟನ ಸಭೆಗೂ ಮೊದಲು ಸಾವಿರಾರು ಬೀಡಿ ಕಾರ್ಮಿಕರು ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಜಾಥದಲ್ಲಿ ತೆರಳಿದರು.

ಎಚ್‌ಎಂಎಸ್ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಪ್ರತಿಭಟನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ, ವಿವಿಧ ಕಾರ್ಮಿಕ ಸಂಘಟನೆಯ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ, ಪಿ.ಸಂಜೀವ, ಸೀತಾರಾಮ ಬೇರಿಂಜ, ಯು.ಬಿ. ಲೋಕಯ್ಯ, ಕೃಷ್ಣಪ್ಪ ತೊಕ್ಕೊಟ್ಟು, ಆಲಿಯಬ್ಬ, ಗಂಗಾಧರ ಶೆಟ್ಟಿ, ರವಿ, ಹಾಜಿ ಜಲೀಲ್ ಪುತ್ತೂರು, ಪದ್ಮಾವತಿ ಶೆಟ್ಟಿ, ಸರಸ್ವತಿ ಕಡೇಶಿವಾಲಯ, ಶರೀಫ್ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.

Comments are closed.