ಕರಾವಳಿ

ಜಾನಪದ ಕ್ರೀಡೆ ಕಂಬಳ ನಿಷೇಧ ವಿರೋಧಿಸಿ ತುರವೇ ವತಿಯಿಂದ ಮಂಗಳೂರಿನಲ್ಲಿ ಬೃಹತ್ ಜನಾಂದೋಲನಾ ಸಭೆ

Pinterest LinkedIn Tumblr

ಮಂಗಳೂರು, ಜ.25: ಸಮಗ್ರ ತುಳುನಾಡಿನ ಸಾಂಪ್ರದಾಯಿಕ ಆಚರಣೆ, ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ ಜಾನಪದ ಕ್ರೀಡೆ ಕಂಬಳ ನಿಷೇಧವನ್ನು ವಿರೋಧಿಸಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಮಂಗಳೂರಿನ ಮಿನಿ ವಿಧಾನಸೌಧ ಎದುರು ಬೃಹತ್ ಪ್ರತಿಭಟನೆ ಹಾಗೂ ಜನಾಂದೋಲನಾ ಸಭೆ ಜರುಗಿತು.

ಪ್ರತಿಭಟನಕಾರರನ್ನುದ್ದೇಶಿಸಿ ತುರವೇ ಸ್ಥಾಪಕಾದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ, ಸಮಗ್ರ ತುಳುನಾಡಿನ ಸಾಂಪ್ರದಾಯಿಕ ಆಚರಣೆ, ಜಾನಪದ ಕ್ರೀಡೆ ಕಂಬಳಕ್ಕೆ ನಿರ್ಭಂಧ ವಿಧಿಸಿರುವ ಕ್ರಮ ಸರಿಯಲ್ಲ. ರಾಜ್ಯದಲ್ಲಿ ಕಂಬಳವನ್ನು ನಿಷೇಧಿಸಿರುವುದರ ವಿರುದ್ಧ ನಡೆಯುವ ಎಲ್ಲಾ ಪ್ರತಿಭಟನೆಗೆ ತುಳುನಾಡು ರಕ್ಷಣಾ ವೇದಿಕೆ ಬೆಂಬಲ ನೀಡುತ್ತದೆ. ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಿಷೇಧವನ್ನು ಕೂಡಲೇ ತೆರವುಗೊಳಿಸ ಬೇಕು ಎಂದು ಆಗ್ರಹಿಸಿದರು.

ಕಳೆದ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ನಿಷೇಧದ ವಿರುದ್ಧ ಅಲ್ಲಿನ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ತಮ್ಮ ನಾಡಿನ ಸಂಪ್ರದಾಯದ ಕ್ರೀಡೆಯ ಉಳಿವಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಜೊತೆಗೆ ವಿಧಾನ ಸಭೆ, ಲೋಕಸಭೆ ಮತ್ತು ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಹಾಕುವವರೆಗೆ ತಮ್ಮ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಿರುತ್ತಾರೆ. ಆದರೆ ತುಳುನಾಡಿನ ಗ್ರಾಮೀಣ ಕ್ರೀಡೆ ಕಂಬಳದ ಬಗ್ಗೆ ನಮ್ಮ ಕರ್ನಾಟಕದ ಆಡಳಿತ ಮತ್ತು ವಿರೋಧ ಪಕ್ಷದವರು ಇದುವರೆಗೆ ಬೀದಿಗಿಳಿದು ಹೋರಾಟ ಮಾಡದೇ ಇರುವುದು ಬೇಸರದ ಸಂಗತಿ.

ಆದುದರಿಂದ ಇಲ್ಲಿ ಕೂಡ ನಮ್ಮ ಜಿಲ್ಲೆಯಿಂದ ಆಯ್ಕೆಯಾದ ಶಾಸಕರು, ಸಂಸದರು, ಮಂತ್ರಿಗಳು, ಮುಖ್ಯಮಂತ್ರಿಗಳು ಪಕ್ಷಬೇಧ ಮರೆತು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಇಲ್ಲವಾದಲ್ಲಿ ತುಳುನಾಡಿನ ಜನರ ಸಂಪ್ರದಾಯ ಮತ್ತು ತುಳುನಾಡಿನ ಜನರ ಭಾವನೆಗಳಿಗೆ ಸ್ಪಂದಿಸದ ಶಾಸಕರು ಮತ್ತು ಸಂಸದರು, ಮಂತ್ರಿಗಳನ್ನು ಮುಂದಿನ ದಿನಗಳಲ್ಲಿ ಜನತೆ ತಿರಸ್ಕರಿಸುವ ದಿನ ದೂರವಿಲ್ಲ ಎಂದು ಯೋಗೀಶ್ ಶೆಟ್ಟಿ ಜಪ್ಪು ಹೇಳಿದರು.

ಜಲ್ಲಿಕಟ್ಟುವಿಗೆ ಕಳೆದ 3 ವರ್ಷಗಳಲ್ಲಿ 60 ಜನ ಬಲಿಯಾಗಿದ್ದಾರಂತೆ, 3000 ದಷ್ಟು ಜನ ಗಂಭೀರವಾಗಿ ಗಾಯಗೊಂಡಿದ್ದಾರಂತೆ. ಆದರೆ ನಮ್ಮ ಕಂಬಳಕ್ಕೆ ಇಲ್ಲಿಯವರೆಗೆ ಬಲಿಯಾದವರೂ ಇಲ್ಲ, ಗಾಯಗೊಂಡವರೂ ಇಲ್ಲ. ಜಲ್ಲಿಕಟ್ಟುವಿಗಾಗಿ ನಡೆಯುತ್ತಿರುವ ಹೋರಾಟ ಗಮನಿಸಿದರೆ ಅನುಮತಿ ಸಿಕ್ಕರೂ ಸಿಕ್ಕೀತು. ರಾಜ್ಯದ ಜನತೆ, ಸರಕಾರ, ಚಿತ್ರರಂಗ ಎಲ್ಲವೂ ಇದರ ಬೆನ್ನಿಗಿದೆ. ಆದರೆ ಕಂಬಳದ ಬೆನ್ನಿಗೆ ನಮ್ಮ ರಾಜಧಾನಿಯಿಂದ ಯಾವ ಸದ್ದೂ ಬರ್ತಾ ಇಲ್ಲ. ಅಷ್ಟಕ್ಕೂ ಬೆಂಗಳೂರು ದಕ್ಷಿಣ ಕನ್ನಡವನ್ನು ಎತ್ತಿನಹೊಳೆ ಬಿಟ್ಟು ಬೇರೆ ಯಾವುದಕ್ಕೂ ಕರ್ನಾಟಕದ ಭಾಗವೆಂದು ಭಾವಿಸಿದ ಹಾಗಿಲ್ಲ ಎಂದು ಹೇಳಿದರು.

ಮಂಗಳೂರಿಗರ ಆಸಕ್ತಿ ಚಿತ್ರರಂಗದಿಂದ ಸ್ವಲ್ಪ ಭಿನ್ನವಾಗಿ ಯಕ್ಷಗಾನ, ಕಂಬಳ, ಕೋಳಿ ಅಂಕ, ತಾಳಮದ್ದಳೆಯ ಕಡೆಗಿದೆ. ಎಲ್ಲೆಡೆಯೂ ಹಳೆಯ ಸಂಪ್ರದಾಯಗಳು, ಕಲೆ ಇತ್ಯಾದಿ ವೀಕ್ಷಕರ ಕೊರತೆಯಿಂದ ಹಳ್ಳ ಹಿಡೀತಾ ಇದ್ರೆ, ಯಕ್ಷಗಾನದ ಪ್ರಭೆ ಇನ್ನು ಹೆಚ್ಚು ಹೆಚ್ಚಾಗಿ ಬೆಳಗುತ್ತಾ ಇದೆ. ಕಟೀಲು ದೇವಸ್ಥಾನದ ಪರವಾಗಿ ಯಕ್ಷಗಾನ ನಡೆಸಿಕೊಡುವ 6 ಮೇಳಗಳಿವೆ, ಆ ಆರೂ ಮೇಳಗಳು ಮುಂದಿನ 20 ವರ್ಷಕ್ಕೆ ಬುಕ್ ಆಗಿವೆ ಅಂದ್ರೆ ಜನರ ಆಸಕ್ತಿ ಯಾವ ಕಡೆಗಿದೆ ಅಂತ ಅಂದಾಜಿಸಬಹುದು.

ಬರಿ ಭಕ್ತಿಯೊಂದೇ ಈ ಮಟ್ಟದ ಪ್ರಚಾರ ತಂದುಕೊಡದು. ಕಲ್ಲುಗುಂಡಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ನಿರಂತರ 20 ಗಂಟೆಗಳ ಯಕ್ಷಗಾನಕ್ಕೆ ಯಾವತ್ತೂ ಪ್ರೇಕ್ಷಕರ ಕೊರತೆ ಕಂಡಿಲ್ಲ. ಹೀಗೆಯೇ ನಮ್ಮ ಕಂಬಳವೂ ಕೂಡ. ಕಂಬಳಕ್ಕೆ ಸೇರುವ ಜನ ನೋಡಿ ನಾವು ಅಂದಾಜಿಸಬೇಕು ಈ ಕ್ರೀಡೆಯ ಜನಪ್ರಿಯತೆಯನ್ನು. ನಮಗೆ ಯಾವತ್ತೂ ನೀವುಗಳು ಚಲನಚಿತ್ರದ ರೂಪದಲ್ಲಿ ತೋರಿಸುವ ಕೃತ್ರಿಮತೆ ಇಷ್ಟ ಆಗುವುದಿಲ್ಲ, ನಮ್ಮ ಕ್ರೀಡೆಗಳೇ ಬೇರೆ, ನಮ್ಮ ಸಂಕೃತಿಗಳೇ ಬೇರೆ. ನಾವು ಹೀಗಿರಲೇ ಇಷ್ಟಪಡುವುದು. ಗ್ರಾಫಿಕ್ಸ್ ನಲ್ಲಿ ಮಾಡಿದ ಕೋಣ ನಮಗೆ ಹಿಡಿಸುವುದಿಲ್ಲ ಎಂದು ತಿಳಿಸಿದರು.

ಬೆಳೆ ಬೆಳೆಯಲು ಗದ್ದೆ ಉಳುವಾಗ ಎತ್ತಿಗೆ ಎಷ್ಟು ಹಿಂಸೆ ಆಗುವುದೋ ಅಷ್ಟೇ ಹಿಂಸೆ ಕಂಬಳದಲ್ಲೂ ಆಗುವುದು. ಹಾಂಗೆಂದು ಕೃಷಿ ನಿಲ್ಲಿಸಲು ಸಾಧ್ಯವೇ? ಅಥವಾ ಎಲ್ಲರೂ ಟ್ರ್ಯಾಕ್ಟರ್ ಬಳಸಲು ಸಾಧ್ಯವೇ? ಮೈಸೂರಿನ ಸಮೀಪ ಯಾರೋ ಒಬ್ಬ ರೈತ ಬೋರ್ಡ್ ಹಾಕಿಕೊಂಡಿದ್ದರಂತೆ “ಟ್ರ್ಯಾಕ್ಟರ್ ಸಗಣಿ ಹಾಕುವುದಿಲ್ಲ, ಎತ್ತು ಹೊಗೆ ಉಗುಳುವುದಿಲ್ಲ”. ಹೀಗಾಗಿ ಕೃಷಿಗೆ ಎತ್ತಿನ ಬಳಕೆಯೇ ಹೆಚ್ಚು ಸೂಕ್ತ. ಎತ್ತು ಕೂಡ ಗದ್ದೆಗೆ ಇಳಿಯಲು ತುಂಬಾ ಖುಷಿ ಪಡುತ್ತದೆ. ಹೀಗೆಯೇ ಪ್ರಾಣಿ ಹಿಂಸೆ ನಿಲ್ಲಿಸಬೇಕು ಅನ್ನುವ ಕೂಗು ಜೋರಾಗಿ ಕೃಷಿಗೂ ಪ್ರಾಣಿಗಳನ್ನು ಬಳಸುವುದು ನಿಲ್ಲಿಸಲ್ಪಟ್ಟರೆ ಸಾಕುವವರಿಲ್ಲದೆ ಅವುಗಳ ಸಂತತಿ ನಿರ್ವಂಶವಾದೀತು.

ಕೋಳಿ ಅಂಕ ನಿಷೇಧಿಸುವುದರಲ್ಲಿ ಒಂದು ಅರ್ಥ ಇದೆ. ಅಲ್ಲಿ ಕೋಳಿಗಳ ಹೊಡೆದಾಟದಲ್ಲಿ ಆಗುವ ಹಿಂಸೆ, ಗಾಯ ಇತ್ಯಾದಿ ಸಾತ್ವಿಕರು ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟ. ಆದರೆ ಕಂಬಳದ ಮೇಲೇಕೆ ಈ ಕೆಂಗಣ್ಣು? ಯಾವಾಗಲೂ ದುಡಿಮೆ, ಕೃಷಿ ಅಂತಿರುವ ಮನುಷ್ಯರಿಗಷ್ಟೇ ಅಲ್ಲ, ಎತ್ತು, ಕೋಣಗಳಿಗೂ ಕಂಬಳ ಒಂದು ಮನರಂಜನೆ. ಹೇಗೆ ಜೀವನವಿಡೀ ಮರುಭೂಮಿಯಲ್ಲೇ ಕಳೆದು ಕಾಡನ್ನು ವರ್ಣಿಸಲು ಸಾಧ್ಯವಿಲ್ಲವೋ ಹಾಗೆಯೇ ನಮ್ಮ ಮಂಗಳೂರಿನ ಮಣ್ಣಿಗೆ ಇಳಿಯದೆ, ಕಂಬಳದ ಸೊಗಡನ್ನು ಅರಿಯದೆ ಕಂಬಳದ ಬಗ್ಗೆ ವಿರೋಧಿಸುವುದರಲ್ಲಿ ಅರ್ಥವಿಲ್ಲ. ನಮಗಾಗಿ, ಎತ್ತುಗಳ ಉಳಿವಿಗಾಗಿ, ಸಂಸ್ಕೃತಿಯ ವೃದ್ಧಿಗಾಗಿ ಕಂಬಳ ಬೇಕು , ಹಾಗೂ ಇದು ಸಾಂಕೇತಿಕ ಹೋರಾಟವಾಗಿದ್ದು ಶಾಶ್ವತ ನ್ಯಾಯ ದೊರಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಾಡುವ ಅನಿವಾರ್ಯತೆ ಇದೆ ಎಂದು ಯೋಗೀಶ್ ಶೆಟ್ಟಿ ಜಪ್ಪು ಹೇಳಿದರು.

ತುಳುನಾಡು ರಕ್ಷಣಾ ವೇದಿಕೆಯ ಮುಖಂಡರಾದ ಮೋಹನ್ ದಾಸ್ ರೈ, ಶ್ರೀಕಾಂತ ಸಾಲ್ಯಾನ್,ಖಾಲಿದ್ ಉಜಿರೆ, ಜ್ಯೋತಿಕ ಜೈನ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.