ಕರಾವಳಿ

ಕಂಬಳ ನಿಷೇಧ ಹಿನ್ನೆಲೆ : ತುರವೇಯಿಂದ ನಾಳೆ ಪ್ರತಿಭಟನೆ – ತುಳುನಾಡಿನ ಜನರು ಬೀದಿಗಿಳಿದು ಹೋರಾಟ ಮಾಡುವಂತೆ ಆಗ್ರಹ

Pinterest LinkedIn Tumblr

ಮಂಗಳೂರು, ಜನವರಿ.23: ಸಮಗ್ರ ತುಳುನಾಡಿನ ಸಾಂಪ್ರದಾಯಿಕ ಆಚರಣೆ, ಜಾನಪದ ಕ್ರೀಡೆ ಕಂಬಳಕ್ಕೆ ನಿರ್ಭಂಧ ವಿಧಿಸಿರುವ ಕ್ರಮ ಸರಿಯಲ್ಲ. ರಾಜ್ಯದಲ್ಲಿ ಕಂಬಳವನ್ನು ನಿಷೇಧಿಸಿರುವುದರ ವಿರುದ್ಧ ನಡೆಯುವ ಪ್ರತಿಭಟನೆಗೆ ತುಳುನಾಡು ರಕ್ಷಣಾ ವೇದಿಕೆ ಬೆಂಬಲ ನೀಡುತ್ತದೆ. ಮಾತ್ರವಲ್ಲದೇ ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಿಷೇಧ ಖಂಡಿಸಿ ಹಾಗೂ ಕಂಬಳ ನಿಷೇಧ ತೆರವುಗೊಳಿಸುವಂತೆ ಆಗ್ರಹಿಸಿ ನಾಳೆ ಜನವರಿ 24ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ತಿಳಿಸಿದ್ದಾರೆ.

ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಿಷೇಧದ ಹಿನ್ನೆಲೆಯಲ್ಲಿ ನಗರದಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಳ ನಿಷೇಧ ಕುರಿತಂತೆ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಕ್ರೀಡೆಗೆ ಮಧ್ಯಂತರ ತಡೆ ನೀಡಿರುವುದು ತುಳುನಾಡಿನ ಜನತೆಯ ಆತ್ಮಾಭಿಮಾನವನ್ನು ಪ್ರಶ್ನಿಸಿದಂತಾಗಿದೆ.

ಇಲ್ಲಿನ ಜನರ ಸಂಸ್ಕೃತಿಯ ಒಂದು ಭಾಗವೇ ಆಗಿರುವ ಈ ಜಾನಪದ ಆಚರಣೆಗೆ ಸುಮಾರು 800 ವರ್ಷಗಳ ಇತಿಹಾಸವಿದ್ದು, ಕಂಬಳಕ್ಕೂ ಕೃಷಿಕರಿಗೂ ಬಿಟ್ಟಿರಲಾರದ ನಂಟಿದೆ. ಇದರ ನಿಷೇಧವೆಂದರೆ ಈಗಾಗಲೇ ನಶಿಸುತ್ತಿರುವ ಕೃಷಿ ಬದುಕು ಮತ್ತಷ್ಟು ಅವನತಿಗೆ ಸಾಗಿದಂತಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆ ಸೇರಿದಂತೆ ಇಲ್ಲಿ ಸುಮಾರು 25ಕ್ಕೂ ಹೆಚ್ಚ್ಚು ಕಂಬಳ ಕೂಟಗಳಿಗೆ ದಿನ ನಿಗದಿಯಾಗಿತ್ತು. ಇದೀಗ ಏಕಾ‌ಏಕಿ ನಿಷೇಧದಿಂದ ಕಂಬಳ ಪ್ರಿಯರಿಗೆ ಆಘಾತವಾದಂತಾಗಿದೆ ಎಂದು ಹೇಳಿದರು.

ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ವಿತಂಡವಾದ ಒಪ್ಪುವಂಥದ್ದಲ್ಲ. ಹಿಂಸೆ ಎನ್ನುವ ಪ್ರಾಣಿದಯಾ ಸಂಘದವರಿಗೆ ಎತ್ತು, ಕೋಣ ಇತರ ಜಾನುವಾರುಗಳ ಬಗ್ಗೆ, ಅವುಗಳ ದೇಹರಚನೆ ಬಗ್ಗೆ ಸಮರ್ಪಕ ಮಾಹಿತಿಯೇ ಇಲ್ಲ.

ಪ್ರಸ್ತುತ ಜಲ್ಲಿಕಟ್ಟು, ಎತ್ತಿನಗಾಡಿ ಓಟ ಹಾಗೂ ಗ್ರಾಮೀಣ ಕ್ರೀಡೆಯಾದ ಕಂಬಳ ಒಂದೇ ನಿಯಮದಡಿ ಇವೆ. ಜಲ್ಲಿಕಟ್ಟು, ಎತ್ತಿನಗಾಡಿ ಓಟದಲ್ಲಿ ಸಾಕಷ್ಟು ಹಿಂಸೆ ನೀಡಲಾಗುತ್ತಿದೆ. ಪ್ರಾಣಾಪಾಯ ಸಂಭವಿಸಿದ ಉದಾಹರಣೆಗಳೂ ಇವೆ.

ಕೋಣಗಳಿಗೆ ಹೊಡೆಯುವುದು ಹಿಂಸೆಯಾದರೆ ಹೆಚ್ಚಿನ ಕಡೆ ಒಂಟೆ, ಕುದುರೆ, ಆನೆಗಳು ಇದಕ್ಕಿಂತ ಹೆಚ್ಚಿನ ಹಿಂಸೆ ಅನುಭವಿಸುತ್ತಿವೆ. ಆಹಾರಕ್ಕಾಗಿ ವಿವಿಧ ಪ್ರಾಣಿಗಳನ್ನು ಸಂಹರಿಸುತ್ತಿರುವುದು ಹಿಂಸೆಯಲ್ಲವೆ.. ?

ಗದ್ದೆ ಉಳುಮೆಯ ಸಂದರ್ಭದಲ್ಲಿ ಎತ್ತು, ಕೋಣಗಳಿಗೆ ಸಹಜವಾಗಿ ಬೆತ್ತದಿಂದ ಪೆಟ್ಟು ಕೊಡುವ ಕ್ರಮವಿದೆ. ಇದನ್ನು ಹಿಂಸೆ ಎನ್ನಲಾಗುತ್ತಿದೆಯೇ ?

ಬೇಸಾಯದ ನಂಟು, ತುಳುನಾಡಿನ ಅರಸರ ಆಶ್ರಯ ದೈವ-ದೇವರುಗಳ ಸಂಬಂಧವೂ ಕಂಬಳಕ್ಕಿದೆ. ತುಳುನಾಡಿನಲ್ಲಿ ಕಂಬಳ ಎಂದರೆ ಬರೇ ಸ್ಪರ್ಧೆಯಲ್ಲ. ಅದು ನೆಲದ ಆರಾಧನೆ, ದೇವರ ಕಂಬಳ, ಪೂಕರೆ ಕಂಬಳಗಳಲ್ಲಿ ‘ಪನಿ’ ಕುಳಿತುಕೊಳ್ಳುವುದು, ಸೇಡಿ ಹಾಕುವುದು, ಮಾರಿ ಕಳೆಯುವುದು ಮೊದಲಾದ ಕ್ರಿಯೆಗಳು ಇಂದಿಗೂ ನಡೆದುಕೊಂಡು ಬಂದಿವೆ.

ದೈವ-ದೇವರ ಮತ್ತು ಭೂಮಿತಾಯಿಯ ಆರಾಧನೆ ಇಲ್ಲಿ ಮುಖ್ಯವಾದವುಗಳು. ಈಗಲೂ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕೆಸರ್ದ ಪರ್ಬ, ಸಾಮೂಹಿಕ ನಾಟಿ, ಬೆಳೆಕೊಯ್ಯುವಂತಹ ಕಾರ್ಯಕ್ರಮಗಳಲ್ಲಿ ಜಾತಿ ಮತ್ತು ಧರ್ಮದ ಎಲ್ಲೆ ಮೀರಿ ಗ್ರಾಮಸ್ಥರು ಭಾಗವಹಿಸುತ್ತಿದ್ದಾರೆ. ಕೆಸರ ಕ್ರೀಡೆಯಿಂದಾಗಿ ಉತ್ತಮ ಫಸಲೂ ಲಭ್ಯವಾಗುತ್ತಿದೆ. ಇಂತಹ ಆಚರಣೆಗಳಿಂದ ನಶಿಸುತ್ತಿರುವ ಕೃಷಿ ಬದುಕು ಮತ್ತು ಮನುಷ್ಯ ಸಂಬಂಧಗಳು ಗಟ್ಟಿಗೊಳ್ಳುತ್ತಿವೆ.

ಒಟ್ಟಿನಲ್ಲಿ ಪುರಾತನ ಸಾಂಪ್ರದಾಯಿಕ ಆಚರಣೆಯೊಂದು ಜಾನುವಾರು, ಕೃಷಿ ಬದುಕು, ದೈವಾರಾಧನೆ – ಇವುಗಳ ಬಗ್ಗೆ ಎಳ್ಳಷ್ಟೂ ಅರಿವಿಲ್ಲದ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತಿರುವವರ ಅರೆಪಕ್ವ ನಿರ್ಧಾರದಿಂದ ನಿಂತು ಹೋಗುವುದು ತುಳು ಸಂಸ್ಕೃತಿಯ ದುರಂತವೆನಿಸಿಕೊಳ್ಳುತ್ತದೆ ಎಂದು ಹೇಳಿದರು.

ಕಳೆದ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ನಿಷೇಧದ ವಿರುದ್ಧ ಅಲ್ಲಿನ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ತಮ್ಮ ನಾಡಿನ ಸಂಪ್ರದಾಯದ ಕ್ರೀಡೆಯ ಉಳಿವಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಜೊತೆಗೆ ವಿಧಾನ ಸಭೆ, ಲೋಕಸಭೆ ಮತ್ತು ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಹಾಕುವವರೆಗೆ ತಮ್ಮ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಿರುತ್ತಾರೆ. ಆದರೆ ತುಳುನಾಡಿನ ಗ್ರಾಮೀಣ ಕ್ರೀಡೆ ಕಂಬಳದ ಬಗ್ಗೆ ನಮ್ಮ ಕರ್ನಾಟಕದ ಆಡಳಿತ ಮತ್ತು ವಿರೋಧ ಪಕ್ಷದವರು ಇದುವರೆಗೆ ಬೀದಿಗಿಳಿದು ಹೋರಾಟ ಮಾಡದೇ ಇರುವುದು ಬೇಸರದ ಸಂಗತಿ.

ಆದುದರಿಂದ ಇಲ್ಲಿ ಕೂಡ ನಮ್ಮ ಜಿಲ್ಲೆಯಿಂದ ಆಯ್ಕೆಯಾದ ಶಾಸಕರು, ಸಂಸದರು, ಮಂತ್ರಿಗಳು, ಮುಖ್ಯಮಂತ್ರಿಗಳು ಪಕ್ಷಬೇಧ ಮರೆತು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಇಲ್ಲವಾದಲ್ಲಿ ತುಳುನಾಡಿನ ಜನರ ಸಂಪ್ರದಾಯ ಮತ್ತು ತುಳುನಾಡಿನ ಜನರ ಭಾವನೆಗಳಿಗೆ ಸ್ಪಂದಿಸದ ಶಾಸಕರು ಮತ್ತು ಸಂಸದರು, ಮಂತ್ರಿಗಳನ್ನು ಮುಂದಿನ ದಿನಗಳಲ್ಲಿ ಜನತೆ ತಿರಸ್ಕರಿಸುವ ದಿನ ದೂರವಿಲ್ಲ ಎಂದು ಯೋಗೀಶ್ ಶೆಟ್ಟಿ ಜಪ್ಪು ಹೇಳಿದರು.

ಕಂಬಳಾಚರಣೆ ಉಳಿಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಂಬಳ ಸಮಿತಿಯ ನೇತೃತ್ವದಲ್ಲಿ ವಿವಿಧ ಹಂತದ ಹೋರಾಟ ನಡೆಸಲು ನಿರ್ಧರಿಸಲಾಗಿದ್ದು, ಈ ಎಲ್ಲಾ ಬಗೆಯ ಹೋರಾಟಗಳಿಗೆ ತುಳುನಾಡ ರಕ್ಷಣಾ ವೇದಿಕೆ ಜೊತೆಗಿದ್ದು ಬೆಂಬಲ ನೀಡುತ್ತದೆ ಅಲ್ಲದೆ ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ನಾಳೆ ಜನವರಿ 24ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಛೇರಿ ಎದುರುಗಡೆ ಪ್ರತಿಭಟನೆ ಸಭೆ ನಡೆಯಲಿದೆ. ಮುಂದಿನ ದಿನಗಳಲ್ಲಿ ವಿವಿಧೆಡೆ ಜನಜಾಗೃತಿ ಸಭೆ, ಧರಣಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತುಳುನಾಡು ರಕ್ಷಣಾ ವೇದಿಕೆಯ ಮುಖಂಡರಾದ ಮೋಹನ್ ದಾಸ್ ರೈ, ಶ್ರೀಕಾಂತ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

By : Sathish Kapikad – Mob:9035089084 / 9845896141

Comments are closed.