ಕರಾವಳಿ

ದಾಯ್ಜಿವರ್ಲ್ಡ್ ವಾರಪತ್ರಿಕೆಯಿಂದ `ಸ್ವಾಭಿಮಾನ್ ಪ್ರಶಸ್ತಿ 2017′ : ಭಿನ್ನಸಾಮರ್ಥ್ಯದ ಸಾಧಕರಿಗೆ ವಿಶೇಷ ಪ್ರಶಸ್ತಿ

Pinterest LinkedIn Tumblr

ಮಂಗಳೂರು: ಮಾಧ್ಯಮ ಕ್ಷೇತ್ರದ ಅಂತರ್ಜಾಲ ತಾಣದಲ್ಲಿ ತನ್ನದೇ ಛಾಪು ಮೂಡಿಸಿಕೊಂಡು ದೇಶ ವಿದೇಶಗಳಲ್ಲೂ ಪ್ರಖ್ಯಾತಿಯನ್ನು ಹೊಂದಿರುವ ದಾಯ್ಜಿವರ್ಲ್ಡ್ ಡಾಟ್ ಕಾಂನ ಸಹೋದರ ಸಂಸ್ಥೆ ದಾಯ್ಜಿವರ್ಲ್ಡ್ ವೀಕ್ಲಿ ಇದೀಗ `ಸ್ವಾಭಿಮಾನ್ ಪ್ರಶಸ್ತಿ 2017′ ನೀಡಲು ಪ್ರವೇಶ ಪತ್ರಗಳನ್ನು ಆಹ್ವಾನಿಸಿದೆ.

ಹಿನ್ನೆಲೆ:ಕರ್ನಾಟಕ ರಾಜ್ಯದ ಏಕಮಾತ್ರ ವಾರಪತ್ರಿಕೆ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ `ದಾಯ್ಜಿವರ್ಲ್ಡ್ ವೀಕ್ಲಿ’ ಇದೀಗ ಭಿನ್ನಸಾಮರ್ಥ್ಯದವರು ಮಾಡಿರುವ ಸಾಧನೆಗಳನ್ನು ಪರಿಗಣಿಸಿ ಅವರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲು ಮುಂದಾಗಿದೆ. ಜೂ.2011ರಿಂದ `ಸ್ವಾಭಿಮಾನ್ ಪ್ರಶಸ್ತಿ’ಯನ್ನು ಪ್ರದಾನ ಮಾಡುತ್ತಿದೆ.

ಬಜ್ಜೋಡಿಯ ಶಾಂತಿ ಕಿರಣದಲ್ಲಿ ನಡೆದ ಸಮಾರಂಭದಲ್ಲಿ ಪದ್ಮಭೂಷಣ ಬಿ.ಎಂ.ಹೆಗ್ಡೆ ಅವರು ಮೊದಲ ಬಾರಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಈ ಸಮಾರಂಭವನ್ನು ಸ್ಮರಣೀಯವಾಗಿಸಿದ್ದರು. ಅಂದು ಮೊಹಮ್ಮದ್ ಇಕ್ಬಾಲ್, ಸುಧಾರತ್ನ ಕೆ.ಎಸ್, ವಿಲ್ಫ್ರೇಡ್ ವಲೇರಿಯನ್ ಗೋಮ್ಸ್, ಫಾ.ಐವನ್ ಮಾಡ್ತಾ, ಬೋನಿಫೇಸ್ ಪ್ರಭು, ಝೀನಾ ಕೊಲಾಸೋ ಮತ್ತು ಅರುಣಾ ಕುಮಾರಿ ಮಣಿಪಾಲ ಹೀಗೆ 7 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ದ್ವಿತೀಯ ಹಂತದ ಐದನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ 2014ರ ಜೂನ್ ೧೮ರಂದು ಸ್ವಾಭಿಮಾನಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪುರಭವನದಲ್ಲಿ ಏರ್ಪಡಿಸಲಾಗಿತ್ತು. ಮತ್ತೆ 7 ಮಂದಿ ಭಿನ್ನಸಾಮರ್ಥ್ಯದ ಸಾಧಕರನ್ನು ಗೌರವಿಸಲಾಗಿತ್ತು. ಅಂಜನಾ ದೇವಿ, ಕ್ಲೇಟೀಸ್ ಡೇಸಾ, ಹಮೀದ್ ಮತ್ತು ಲತೀಫ್, ಜಗದೀಶ್ ಪೂಜಾರಿ, ನೇಹಾ ರೈ ಪುತ್ತೂರು ಮತ್ತು ಸಬೀತಾ ಮೋನಿಸ್ ಬೆಳ್ತಂಗಡಿ ಇವರನ್ನು ಗೌರವಿಸಲಾಗಿತ್ತು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಂದು ಸಮಾರಂಭದಲ್ಲಿ ಪಾಲ್ಗೊಂಡು ಪ್ರಶಸ್ತಿ ಪ್ರದಾನ ಮಾಡಿದ್ದರು. `ಅತ್ಯಂತ ಅಪರೂಪದ ಕಾರ್ಯಕ್ರಮವಾಗಿ ಇದು ದಾಖಲಾಗಿದೆ. ನಾನು ಹಲವು ವರ್ಷಗಳಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಆದರೆ ಈ ಕಾರ್ಯಕ್ರಮ ನನ್ನ ಮನಸ್ಸು ಮುಟ್ಟಿದೆ. ಹೃದಯ ತುಂಬಿ ಬಂದಿದೆ. ಹಲವು ಸಾಧನೆಗಳನ್ನು ಮಾಡಿದ ಸಾಧಕರನ್ನು ನಾನು ನೋಡಿದ್ದೇನೆ. ಆದರೆ ಈ ಸಾಧಕರನ್ನು ಯಾರಿಗೂ ಸಾಟಿ ಮಾಡಲಾಗದು’ ಎಂದು ಅಂದು ಸಂತೋಷ್ ಹೆಗ್ಡೆ ಶ್ಲಾಘಿಸಿದ್ದರು.

ಸ್ವಾಭಿಮಾನ್ ಪ್ರಶಸ್ತಿ – 2017 :

ಇದೀಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಜಿಲ್ಲೆಯ ಭಿನ್ನ ಸಾಮರ್ಥ್ಯದ ಸಾಧಕರನ್ನು ಗೌರವಿಸುವ ಹಿನ್ನೆಲೆಯಲ್ಲಿ ಮತ್ತೆ 7ನೇ ವರ್ಷದ ಸ್ವಾಭಿಮಾನಿ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಈ ಪ್ರಶಸ್ತಿಗೆ ಯಾವುದೇ ಮಾನದಂಡ ಇಲ್ಲ. ಜಾತಿ, ಧರ್ಮ, ಭಾಷೆ, ವಯಸ್ಸನ್ನು ಮೀರಿದ ಸಾಧನೆಯೊಂದೇ ಇದಕ್ಕೆ ಮಾನದಂಡ. ಮಾನಸಿಕವಾಗಿ/ದೈಹಿಕವಾಗಿ ಭಿನ್ನಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಮಂದಿ ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.

ಪ್ರಶಸ್ತಿಗೆ ಯೋಗ್ಯರಾಗಿರುವ ಮಂದಿಯ ಪ್ರವೇಶ ಪತ್ರವನ್ನೂ ಯಾರೂ ಕೂಡಾ ಕಳುಹಿಸಿಕೊಡಬಹುದಾಗಿದೆ. ಆದರೆ ಸಂಬಂಧಪಟ್ಟ ದಾಖಲೆ ಪತ್ರಗಳು ಇರುವುದು ಅತೀ ಅಗತ್ಯವಾಗಿದೆ. ಅವರ ಗುರುತು, ಹುಟ್ಟಿನ ದಿನಾಂಕ, ಸ್ಥಳ, ಮಾನಸಿಕವಾಗಿ/ದೈಹಿಕವಾಗಿ ಭಿನ್ನಸಾಮರ್ಥ್ಯವನ್ನು ಹೊಂದಿರುವ ದೃಢತೆ ಪತ್ರ, ಸಾಧನೆಯ ಸಮಗ್ರ ವಿವರ ಇರುವುದು ಅತೀ ಅಗತ್ಯವಾಗಿದೆ. ಜೊತೆಗೆ ಸಾಧಕರ ಸಂಪೂರ್ಣ ಮಾಹಿತಿ ಜೊತೆಗೆ ಭಾವಚಿತ್ರವನ್ನು ಲಗತ್ತಿಸಿ, ಸಂಪರ್ಕ ವಿಳಾಸದೊಂದಿಗೆ ಕಳುಹಿಸಬೇಕು.

ಪ್ರವೇಶ ಪತ್ರಗಳನ್ನು ಕಳುಹಿಸಿಕೊಡುವ ಮುನ್ನ ಈ ಅಂಶ ನೆನಪಿನಲ್ಲಿಡಿ…

1. ಇತ್ತೀಚಿನ ಭಾವಚಿತ್ರದ ಜೊತೆಗೆ ದೈಹಿಕವಾಗಿ ಭಿನ್ನಸಾಮರ್ಥ್ಯದ ಬಗ್ಗೆ ದಾಖಲೆ ಅಗತ್ಯ
2. ಅಪ್ಪಟ ಭಾರತೀಯನಾಗಿರಬೇಕು. ಖಡ್ಡಾಯವಾಗಿ ದಕ್ಷಿಣ ಕನ್ನಡ/ ಉಡುಪಿ ಕರಾವಳಿ ಮೂಲದವರಾಗಿರಬೇಕು.
3. ಯಾವುದೇ ಧರ್ಮ, ಜಾತಿ, ಭಾಷೆ, ಸಮುದಾಯದವರಾಗಿರಬಹುದು. ಆದರೆ ಅದಕ್ಕೆ ಸಂಬಂಧಿಸಿದ ದಾಖಲೆ ಅತೀ ಅಗತ್ಯ. ದೈಹಿಕ ಸಾಮರ್ಥ್ಯದಿಂದ ಮಾಡಿದ ಸಾಧನೆ ಬಗ್ಗೆ ದಾಖಲೆಗಳು ಅಗತ್ಯ.
4. ವ್ಯಕ್ತಿ ಅಥವಾ ಸಂಬಂಧಿಕರು ನಾಮ ನಿರ್ದೇಶನ ಮಾಡಬಹುದು.
5. ಪೋಸ್ಟ್/ಈ ಮೇಲ್/ಕೊರಿಯರ್ ಮೂಲಕ ಪ್ರವೇಶ ಪತ್ರ, ಸಮಗ್ರ ವಿವರ ಕಳುಹಿಸಿಕೊಡಬಹುದು.
6. ಫೆ.15,2017 ಪ್ರವೇಶ ಪತ್ರಗಳನ್ನು ಕಳುಹಿಸಿಕೊಡಲು ಕೊನೆ ದಿನಾಂಕ.
7. ಜೂ.2017ರ ದಾಯ್ಜಿವರ್ಲ್ಡ್ ವೀಕ್ಲಿಯ ೭ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
8. ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿದ ಸಂಪೂರ್ಣ ಹಕ್ಕು ತೀರ್ಪುಗಾರರದ್ದಾಗಿದೆ.

ಪ್ರವೇಶ ಪತ್ರಗಳನ್ನು ಕಳುಹಿಸಿಕೊಡಬೇಕಾದ ವಿಳಾಸ:

ಪ್ರಧಾನ ಸಂಪಾದಕರು, ದಾಯ್ಜಿವರ್ಲ್ಡ್ ಪಬ್ಲಿಕೇಶನ್ ಪ್ರೈ.ಲಿ. ದಾಯ್ಜಿವರ್ಲ್ಡ್ ಕಾರ್ಪೋರೇಟ್ ಆಫೀಸ್, ದಾಯ್ಜಿವರ್ಲ್ಡ್ ರೆಸಿಡೆನ್ಶಿ, ಏರ್‌ಪೋರ್ಟ್ ರೋಡ್,ಬೊಂದೇಲ್, ಮಂಗಳೂರು – 8. ದಕ್ಷಿಣ ಕನ್ನಡ , ಕರ್ನಾಟಕ.

ಪ್ರವೇಶ ಪತ್ರದ ಮೇಲೆ `ಸ್ವಾಭಿಮಾನ್ ಪ್ರಶಸ್ತಿ’ ಎಂಬ ಬಗ್ಗೆ ಖಡ್ಡಾಯವಾಗಿ ಉಲ್ಲೇಖಿಸತಕ್ಕದ್ದು. ಅಂತರ್ಜಾಲ ತಾಣ: weekly@daijiworld.com. ಇನ್ನಷ್ಟು ಮಾಹಿತಿ, ವಿವರಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:0824- 298 2028.

Comments are closed.