ಕರಾವಳಿ

ಹೈಕೋರ್ಟ್‌ನಿಂದ ವ್ಯತಿರಿಕ್ತ ತೀರ್ಪು ಬಂದಲ್ಲಿ ಕಂಬಳ ಗದ್ದೆಗಿಳಿದು ಪ್ರತಿಭಟನೆ : ಜೈಲಿಗೆ ಹೋಗಲು ಸಿದ್ಧ ಎಂದ ಜೈನ್

Pinterest LinkedIn Tumblr

ಮಂಗಳೂರು, ಜನವರಿ.23: ತುಳುನಾಡಿ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ಸಂಬಂಧಿಸಿ ಹೈಕೋರ್ಟ್ ಜನವರಿ 28ರಂದು ತೀರ್ಪು ಪ್ರಕಟಿಸಲಿದ್ದು, ತೀರ್ಪು ಕಂಬಳದ ಪರವಾಗಿ ಬಂದರೆ ವಿಜಯೋತ್ಸವ ಕಂಬಳ, ಒಂದು ವೇಳೆ ವ್ಯತಿರಿಕ್ತ ತೀರ್ಪು ಬಂದಲ್ಲಿ ಕಂಬಳ ಗದ್ದೆಯಲ್ಲಿ ಹಕ್ಕೊತ್ತಾಯ ನಡೆಸುವುದಾಗಿ ಮೂಡುಬಿದಿರೆ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದ್ದಾರೆ.

ಜಿಲ್ಲಾ ಕಂಬಳ ಸಮಿತಿ ನಗರದಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಳಕ್ಕೆ ವಿಧಿಸಲಾಗಿರುವ ನಿರ್ಭಂಧದ ತೆರವಿಗೆ ಒತ್ತಾಯಿಸಿ ಕಂಬಳ ಪ್ರಿಯರು ಇಂದೇ ಧರಣಿಗೆ ಆಗ್ರಹಿಸಿದ್ದರು. ಆದರೆ ಗಣರಾಜ್ಯೋತ್ಸವ ದಿನದವರೆಗೆ ಧರಣಿ ನಡೆಸದಿರಲು ನಿರ್ಧರಿಸಲಾಗಿದೆ. ಕಂಬಳಕ್ಕೆ ಸಂಬಂಧಿಸಿ ಹೈಕೋರ್ಟ್ ಜನವರಿ 28ರಂದು ತೀರ್ಪು ನೀಡಲಿರುವುದರಿಂದ ಅಂದು ಮೂಡುಬಿದಿರೆಯಲ್ಲಿ ಕಂಬಳ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕಂಬಳಕ್ಕೆ ನಿಶೇಧಕ್ಕೆ ಸಂಬಂಧಿಸಿ ಜನವರಿ 28ರಂದು ಹೈಕೋರ್ಟ್ ವ್ಯತಿರಿಕ್ತ ತೀರ್ಪು ನೀಡಿದ್ದಲ್ಲಿ ಕಂಬಳ ಗದ್ದೆಯಲ್ಲಿ ಹಕ್ಕೊತ್ತಾಯ ನಡೆಸುವುದು. ಈ ಸಂದರ್ಭ 250 ಕೋಣಗಳನ್ನು ಕೆರೆಗೆ ಇಳಿಸಿ ಹಾಗೂ 25 ಸಾವಿರ ಪ್ರತಿಭಟನಾಕಾರರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು. ಈ ವೇಳೆ ರಾಜಕಾರಣಿಗಳು, ತುಳು ಚಿತ್ರ ನಟ ನಟಿಯರು ಸೇರಿದಂತೆ ಐವತ್ತು ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದೆ. ಹಾಗೆಯೇ ಇದೇ 24 ರಂದು ತುಳುನಾಡು ರಕ್ಷಣಾ ವೇದಿಕೆ ಸಹ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.

ತುಳುನಾಡಿ ಜಾನಪದ ಕ್ರೀಡೆಯಾಗಿರುವ ಕಂಬಳದ ಉಳಿವಿಗಾಗಿ ಶ್ರಮಿಸಬೇಕಿದೆ. ಕಂಬಳ ಉಳಿಯಬೇಕು ಎನ್ನುವುದು ಜನತೆಯ ಆಶಯ. ಇದನ್ನು ಸರಕಾರಕ್ಕೆ, ಕೋರ್ಟಿಗೆ ಮನವರಿಕೆ ಮಾಡುವ ಅಗತ್ಯವಿದೆ. ಅಗತ್ಯ ವಿರುವ ಹೋರಾಟಕ್ಕೆ ನಾನು ಜನತೆಯ ಪರವಾಗಿದ್ದು, ತುಳುನಾಡಿನ ವೀರ ಕ್ರೀಡೆಯಾಗಿರುವ ಕಂಬಳವನ್ನು ಉಳಿಸಲು ಜೈಲಿಗೆ ಹೋಗಲು ಸಿದ್ಧ ಎಂದು ಜೈನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಪದಾಧಿಕಾರಿಗಳಾದ ಭಾಸ್ಕರ್ ಕೊಟ್ಯಾನ್, ಮಿಥುನ್ ರೈ, ದೇವಿ ಪ್ರಸಾದ್ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.

ಜಲ್ಲಿಕಟ್ಟು ನಿಷೇಧ ತೆರವು ಹಿನ್ನೆಲೆ : ಕಂಬಳ ಪರ ಹೆಚ್ಚಿದ ಜನಬೆಂಬಲ

ಜಲ್ಲಿಕಟ್ಟು ಸಂಬಂಧ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪೆಟಾ ಸಂಸ್ಥೆ ಸಲ್ಲಿಸಿದ ಅಪೀಲ್ ಅನ್ವಯ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಹೈಕೋರ್ಟ್ ವಿಭಾಗೀಯ ಪೀಠವೊಂದು ತನ್ನ ಮಧ್ಯಂತರ ಆದೇಶವೊಂದರಲ್ಲಿ ಕಂಬಳಕ್ಕೆ ತಡೆ ಹೇರಿತ್ತು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ಕಂಬಳ ಸಮಿತಿಗಳು ಮಧ್ಯಂತರ ಅಪೀಲು ಸಲ್ಲಿಸಿದ್ದರೂ ಹೈಕೋರ್ಟಿನ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆಯನ್ನು ಜನವರಿ 28ಕ್ಕೆ ಮುಂದೂಡಿದೆ.

ಇದೀಗ ಜಲ್ಲಿಕಟ್ಟು ನಿಷೇಧ ತೆರವು ಬಳಿಕ ಕಂಬಳ ಪರ ಎದ್ದಿರುವ ದನಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದ್ದು ಇದೀಗ ಪಕ್ಷ, ಪ್ರಾಂತ ಭೇದವಿಲ್ಲದೆ ಬೆಂಬಲ ವ್ಯಕ್ತವಾಗುತ್ತಿದೆ. “ಕಂಬಳಕ್ಕೆ ಬೆಂಬಲ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಂಬಳ ರಣಕಹಳೆ ಎದ್ದಿದೆ. ಜನವರಿ 28ರಂದು ಹೈಕೋರ್ಟ್ ನಲ್ಲಿ ಕಂಬಳದ ಬಗ್ಗೆ ವಿಚಾರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಕೋರ್ಟ್ ಗೆ ಸೆಡ್ಡು ಹೊಡೆದಿರುವ ಕಂಬಳ ಸಮಿತಿ ಜನವರಿ 28ರಂದು ಬೆಳಗ್ಗೆ 11. 30ಕ್ಕೆ ಜೋಡುಕೆರೆಯಲ್ಲಿ ಕಂಬಳವನ್ನು ನಡೆಸಿಯೇ ತೀರುತ್ತೇವೆ ಎಂದು ಪಣ ತೊಟ್ಟಿದೆ.

Comments are closed.