ರಾಷ್ಟ್ರೀಯ

ವ್ಯಾಪಕ ಹಿಂಸಾಚಾರಕ್ಕೆ ತಿರುಗಿದ ಜಲ್ಲಿಕಟ್ಟು ವಿವಾದ; ತಮಿಳುನಾಡು ಪ್ರಕ್ಷುಬ್ಧ: ಉದ್ರಿಕ್ತರಿಂದ ವಾಹನಗಳಿಗೆ ಬೆಂಕಿ-ಅಘೋಷಿತ ಬಂದ್ -ನಿಷೇಧಾಜ್ಞೆ ಜಾರಿ

Pinterest LinkedIn Tumblr

ಚೆನ್ನೈ: ಜಲ್ಲಿಕಟ್ಟು ವಿವಾದ ಸಂಬಂಧ ತಮಿಳುನಾಡಿನಾದ್ಯಂತ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ವ್ಯಾಪಕ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನೆಯ ಕೇಂದ್ರ ಬಿಂದುವಾಗಿದ್ದ ಚೆನ್ನೈನ ಮರೀನಾ ಬೀಚ್ ಸುತ್ತಮುತ್ತಲ ಪ್ರದೇಶದಲ್ಲಿ ಹಿಂಸಾಚಾರ ತಾರಕಕ್ಕೇರಿದೆ.

ಜಲ್ಲಿಕಟ್ಟು ಆಚರಣೆ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನಲೆಯಲ್ಲಿ ಕೂಡಲೇ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟು ಮರೀನಾ ಬೀಚ್ ತೆರವು ಮಾಡುವಂತೆ ಪೊಲೀಸರು ಮನವಿ ಮಾಡಿದ್ದರು. ಆದಕೆ ಜಲ್ಲಿಕಟ್ಟು ವಿವಾದ ಸಂಬಂಧ ಶಾಶ್ವತ ಪರಿಹಾರಕ್ಕೆ ಬಿಗಿಪಟ್ಟು ಹಿಡಿದಿರುವ ಪ್ರತಿಭಟನಾಕಾರರು ಇದಕ್ಕೊಪ್ಪದೇ ಪ್ರತಿಭಟನೆ ಮುಂದುವರೆಸಿದರು. ಈ ವೇಳೆ ಪೊಲೀಸರು-ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಕೇವಲ ಮರೀನಾ ಬೀಚ್ ಮಾತ್ರವಲ್ಲದೇ ಮಧುರೈ, ಕುಡಲೂರು, ಕೊಯಮತ್ತೂರು ಜಿಲ್ಲೆಗಳಲ್ಲಿಯೂ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆ ಹಿಂಸಾರೂಪ ತಾಳಿದೆ. ಮಧುರೈನ ಹಲವೆಡೆ ರಸ್ತೆ ತಡೆ ನಡೆಸಲಾಗುತ್ತಿದ್ದು, ಟೈರ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಮಧುರೈನ ತಮುಕ್ಕಮ್ ನಲ್ಲಿ ಪೊಲೀಸರು-ಉದ್ರಿಕ್ತರ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ವ್ಯಕ್ತಿಗೆ ಗಾಯವಾಗಿದೆ ಎಂದು ತಿಳುದುಬಂದಿದೆ. ಅಂತೆಯೇ ಅಲಂಗನಲ್ಲೂರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 25ಕ್ಕೂ ಹೆಚ್ಚು ಮಹಿಳಾ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು ಚೆನ್ನೈನ ವಿವಿಧೆಡೆ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ. ಚೆನ್ನೈ ಪೀಟರ್ಸ್ ರಸ್ತೆಯಲ್ಲಿ ಕೆಲ ಉದ್ರಿಕ್ತ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಕೆಲ ನಾಗರಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಪೊಲೀಸರು ತಮ್ಮ ರಕ್ಷಣೆಗೆ ಬುಲೆಟ್ ಪ್ರೂಫ್ ಶಿಲ್ಡ್ ಗಳ ಮೊರೆ ಹೋಗಿದ್ದಾರೆ. ಅಂತೆಯೇ ಐಸ್ ಹೌಸ್ ಪೊಲೀಸ್ ಠಾಣೆಯ ಸಮೀಪ ಕೂಡ ಉದ್ರಿಕ್ತರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚಿರುವ ವಿಚಾರ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಒಟ್ಟಾರೆ ಜಲ್ಲಿಕಟ್ಟು ವಿವಾದ ಸಂಬಂಧ ನಡೆದ ಪ್ರತಿಭಟನೆಯಿಂದಾಗಿ ಇಡೀ ತಮಿಳುನಾಡು ರಾಜ್ಯ ಪ್ರಕ್ಷುಬ್ದಗೊಂಡಿದ್ದು, ಯಾವುದೇ ರೀತಿಯ ಸಂಧಾನಕ್ಕೂ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಡುತ್ತಿಲ್ಲ. ಇನ್ನು ಚೆನ್ನೈನ ಮರೀನಾ ಬೀಚ್ ನಲ್ಲಿ ಉಂಟಾಗಿರುವ ವ್ಯಾಪಕ ಹಿಂಸಾಚಾರದ ಹಿನ್ನಲೆಯಲ್ಲಿ ಚೆನ್ನೈ ಪೊಲೀಸರು ಹೆಲಿಕಾಪ್ಟರ್ ಮೂಲಕ ಪರೀಕ್ಷಣೆ ನಡೆಸುತ್ತಿದ್ದಾರೆ.

ಚೆನ್ನೈನಲ್ಲಿ ನಿಷೇಧಾಜ್ಞೆ ಜಾರಿ!
ಚೆನ್ನೈನಗರದಾದ್ಯಂತ ವ್ಯಾಪಕ ಹಿಂಸಾಚಾರ ಹಬ್ಬುತ್ತಿರುವ ಬೆನ್ನಲ್ಲೇ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಅಂತೆಯೇ ಮುಂಜಾಗ್ರತಾ ಕ್ರಮವಾಗಿ ಚೆನ್ನೈನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮರೀನಾ ಬೀಚ್ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುತ್ತಿದ್ದು, ಈಗಾಗಲೇ ಸುಮಾರು 150ಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Comments are closed.