ಕರಾವಳಿ

ಕಂಬಳ ಸಾವಿರ ವರ್ಷ ಇತಿಹಾಸವಿರುವ ಜಾನಪದ ಕ್ರೀಡೆ – ಹೈಕೋರ್ಟ್ ಕಂಬಳದ ಪರವಾಗಿ ತೀರ್ಪು ನೀಡುವ ವಿಶ್ವಾಸ ;ಯಡಿಯೂರಪ್ಪ

Pinterest LinkedIn Tumblr

ಮಂಗಳೂರು, ಜನವರಿ. 23 : ಕಂಬಳ, ಸಾವಿರ ವರ್ಷ ಇತಿಹಾಸ ಹೊಂದಿರೋ ಜನಪದ ಕ್ರೀಡೆ. ಕರಾವಳಿ ಜನರಲ್ಲಿ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದೆ.ಕಂಬಳ ನಿಷೇಧ ತೆರವಿಗಾಗಿ ಕಾರ್ಯಕಾರಿಣಿಯಲ್ಲಿ ನಿರ್ಣಯಿಸಿದ್ದೇವೆ.ಕಂಬಳ ನಿಷೇಧವನ್ನು ಶೀಘ್ರ ತೆರವು ಮಾಡುವ ವಿಶ್ವಾಸ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸೋಮವಾರ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್ ಕಂಬಳದ ಪರವಾಗಿ ತೀರ್ಪು ನೀಡುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಬೇಕು. ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಜ.25ರಂದು ಮಂಗಳೂರಿಗೆ ಆಗಮಿಸಲಿದ್ದು, ಈ ವೇಳೆ ಕಂಬಳದ ಕುರಿತಂತೆ ಅವರಲ್ಲಿ ಜಿಲ್ಲಾ ಬಿಜೆಪಿ ನಾಯಕರು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದರು.

ಕಂಬಳ ಜಾನಪದ ಕ್ರೀಡೆಯಾಗಿದ್ದು, ಇದರಿಂದ ಇದುವರೆಗೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ಇದರ ನಿಷೇಧದ ವಿರುದ್ಧ ತಮಿಳುನಾಡಿನ ಜಲ್ಲಿಕಟ್ಟು ಪರ ಆಗಿರುವಂತಹ ಕ್ರಮ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿಯಿದೆ. ಬರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಕೇಂದ್ರ ಸರಕಾರ ನೀಡಿರುವ ಅನುದಾನದ ಸಮರ್ಪಕ ಬಳಕೆಯಾಗಿಲ್ಲ ಎಂದು ಆರೋಪಿಸಿದ ಅವರು, ಬರ ಪರಿಹಾರಕ್ಕೆ ರಾಜ್ಯದಿಂದ ಸಂಸತ್ ಗೆ ರಾಜ್ಯಸಭೆಗೆ, ವಿಧಾನ ಸಭೆ ಮತ್ತು ಪರಿಷತ್ ಗೆ ಆಯ್ಕೆಯಾಗಿರುವ ಬಿಜೆಪಿಯ ಜನಪ್ರತಿನಿಧಿಗಳ ನಿಧಿಯನ್ನು ಬಳಸಲಾಗುವುದು. ಈ ಅನುದಾನಗಳ ಮೂಲಕ ಸುಮಾರು 20 ಕೋ.ರೂ. ವೆಚ್ಚದಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.

ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ಕೊಲೆ, ಹಲ್ಲೆ ನಿರಂತರವಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರೇ ದಬ್ಬಾಳಿಕೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳ ಅಟ್ಟಹಾಸವನ್ನು ತಡೆಗಟ್ಟುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಯಡಿಯೂರಪ್ಪ ಆರೋಪಿಸಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಅವರ ಸೂಚನೆಯಂತೆ ಇದನ್ನು ಪರಿಹರಿಸಲಾಗುವುದು. ಕೆ.ಎಸ್.ಈಶ್ವರಪ್ಪ ಅವರ ಮನವೊಲಿಸುವ ಕುರಿತಂತೆ ವರಿಷ್ಠರೇ ನಿರ್ಧರಿಸುವರು ಎಂದರು.

ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಯೋಗೀಶ್ ಭಟ್, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮೋನಪ್ಪ ಬಂಡಾರಿ, ಸುಲೋಚನಾ ಭಟ್, ಬ್ರಿಜೇಶ್ ಚೌಟ, ಉಮಾನಾಥ ಕೊಟ್ಯಾನ್, ಜಿತೇಂದ್ರ ಕೊಟ್ಟಾರಿ, ಗುರುಚರಣ್ ಮೊದಲಾದ ಪಕ್ಷದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಮೊದಲಾದ ಪಕ್ಷದ ಮುಖಂಡರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.