ಕರಾವಳಿ

ಜ.25ರಂದು ಮಂಗಳೂರಿನಲ್ಲಿ ಬೃಹತ್ ಡಿಜಿ ಧನ್ ಮೇಳ

Pinterest LinkedIn Tumblr

ಮ0ಗಳೂರು, ಜನವರಿ 22 : ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಬೃಹತ್ ಡಿಜಿ ಧನ್ ಮೇಳ ಜ.25ರಂದು ಮಂಗಳೂರಿನಲ್ಲಿ ನಡೆಯಲಿದೆ.

ಈ ಕುರಿತು ಪೂರ್ವಭಾವಿ ಸಭೆ ಅಪರ ಜಿಲ್ಲಾಧಿಕಾರಿ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು. ಜನವರಿ 25ರಂದು ನಗರದ ಪುರಭವನದಲ್ಲಿ ಇಡೀ ದಿನ ಕಾರ್ಯಕ್ರಮ ನಡೆಯಲಿದೆ. ಪುರಭವನದ ಆವರಣದಲ್ಲಿ ಡಿಜಿಟಲ್ ಪಾವತಿಯ ವಿವಿಧ ಆಯಾಮಗಳ ವಸ್ತುಪ್ರದರ್ಶನವನ್ನೂ ಏರ್ಪಡಿಸಲಾಗಿದೆ ಎಂದು ಕುಮಾರ್ ಹೇಳಿದರು.

ಬ್ಯಾಂಕುಗಳು, ಸಾರ್ವಜನಿಕ ಉದ್ದಿಮೆ ಸಂಸ್ಥೆಗಳು, ಪೆಟ್ರೋಲಿಯಂ ಮತ್ತು ತೈಲ ಕಂಪೆನಿಗಳು, ಖಾಸಗಿ ಉದ್ದಿಮೆ ಸಂಸ್ಥೆಗಳು ಸೇರಿದಂತೆ ಡಿಜಿಟಲ್ ವ್ಯಾಪಾರವನ್ನು ಪ್ರೋತ್ಸಾಹಿಸುವ ಹಲವಾರು ಸಂಸ್ಥೆಗಳು ಈ ವಸ್ತುಪ್ರದರ್ಶನದಲ್ಲಿ ಭಾಗವಹಿಸಲಿವೆ.

ಈ ಸಂಸ್ಥೆಗಳು ತಮ್ಮ ವಿವಿಧ ಡಿಜಿಟಲ್ ಪಾವತಿಗಳ ವಿವರಗಳನ್ನು ಸಾರ್ವಜನಿಕರಿಗೆ ನೀಡಲಿವೆ. ಕೇಂದ್ರ ಸಂಪರ್ಕ ಸಚಿವ ರವಿಶಂಕರ ಪ್ರಸಾದ್ ಹಾಗೂ ಕೇಂದ್ರ ಕುಡಿಯುವ ನೀರು ಸರಬರಾಜು ಸಚಿವ ರಮೇಶ್ ಜಿಗಜಿಣಗಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.

ಇದಲ್ಲದೇ, ಡಿಜಿಟಲ್ ವ್ಯವಹಾರ ನಡೆಸಿದ ಗ್ರಾಹಕರಿಗೆ ಲಕ್ಕೀ ಡ್ರಾ ಕಾರ್ಯಕ್ರಮ ಪುರಭವನದಲ್ಲಿ ನಡೆಯಲಿದೆ. ಈ ಡಿಜಿ ಧನ್ ಮೇಳದ ಯಶಸ್ವೀಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.

ಸಭೆಯಲ್ಲಿ ಜಂಟೀ ಕೈಗಾರಿಕಾ ನಿರ್ದೇಶಕ ಗೋಕುಲದಾಸ್ ನಾಯಕ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ವಿವಿಧ ಇಲಾಖಾಧಿಕಾರಿಗಳು, ತೈಲ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.