ಕರಾವಳಿ

ಬಿಸಿಯೂಟ ನೌಕರರ ವಿವಿಧ ಬೇಡಿಕೆಗೆ ಆಗ್ರಹಿಸಿ ನೌಕರರಿಂದ ಬೀದಿಗಿಳಿದು ಪ್ರತಿಭಟನೆ

Pinterest LinkedIn Tumblr

ಮಂಗಳೂರು,ಜನವರಿ.21: ಬಿಸಿಯೂಟ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ದ.ಕ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಸಮಿತಿಯ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಅವರು, ಅಕ್ಷರ ದಾಸೋಹ ಯೋಜನೆಯನ್ನು ಖಾಸಗಿ ಸಂಸ್ಥೆಗಳ ಕೈಗಳಿಗೆ ನೀಡಲು ಸರಕಾರ ಹೊರಟಿರುವುದು ಸರಿಯಲ್ಲ.ಸುಮಾರು 25 ಲಕ್ಷ ಜನ ಈ ಯೋಜನೆಯಲ್ಲಿ ಯಾವುದೇ ಸಾಮಾಜಿಕ ಭದ್ರತೆ ಇಲ್ಲದೆ ದುಡಿಯುತ್ತಿದ್ದಾರೆ.ಅವರಿಗೆ ಸರಕಾರ ಕನಿಷ್ಠ ವೇತನ ನಿಗದಿ ಪಡಿಸಬೇಕು ಎಂದು ಹೇಳಿದರು.

ದ.ಕ ಜಿಲ್ಲಾ ಸಿಐಟಿಯು ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಅಕ್ಷರ ದಾಸೋಹ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಲು ಸಂಸದರಿಗೆ ಮನವಿ ಮಾಡಿದರೂ ಯಾವೂದೇ ಸ್ಪಂದನ ಇಲ್ಲ. ಸರಕಾರದ ಈ ಧೋರಣೆ ವಿರೋಧಿಸಿ ಬೆಂಗಳೂರಿನಲ್ಲಿ ಜನವರಿ 31ವಿಧಾನ ಸೌಧ ಚಲೋ ನಡೆಯಲಿದೆ ಎಂದು ತಿಳಿಸಿದರು.

ಸಿಐಟಿಯು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ರಾಜ್ಯದಲ್ಲಿದ್ದ ಹಿಂದಿನ ಸರಕಾರ ಅಕ್ಷರ ದಾಸೋಹ ನೌಕರರ ವೇತನದ ಹೆಚ್ಚಳದ ಭರವಸೆ ಈಡೇರಿಸಿಲ್ಲ ಈಗಿನ ಸರಕಾರವೂ ಈ ಬಗ್ಗೆ ಕ್ರಮ ಕೈ ಗೊಂಡಿಲ್ಲ.ಅಕ್ಷರ ದಾಸೋಹ ಯೋಜನೆಗೆ 3ಲಕ್ಷ ಕೋಟಿ ರೂ ಕಡಿತ ಮಾಡಿರುವುದು ಸರಕಾರದ ಬಡ ನೌಕರರ ಹಾಗೂ ಬಡವರ ವಿರೋಧಿಯಾದ ಧೋರಣೆಯಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯ ಬಳಿಕ ಪ್ರತಿಭಟನಕಾರರ ನಿಯೋಗವು ಅಕ್ಷರ ದಾಸೋಹ ಯೋಜನೆಗೆ ಕಡಿತವಾಗಿರುವ 3ಲಕ್ಷ ಕೋಟಿ ಅನುದಾನವನ್ನು ವಾಪಾಸು ನೀಡಬೇಕು, ಬಿಸಿಯೂಟ ನೌಕರರನ್ನು ದುಡಿಯುವ ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಕನಿಷ್ಟ ವೇತನ ಹಾಗೂ ನಿವೃತ್ತಿ ಸೌಲಭ್ಯ ನೀಡಬೇಕು,ನೌಕರರನ್ನು ಖಾಯಾಂಗೊಳಿಸಿ ಅವರಿಗೆ ಸಾಮಾಜಿಕ ಭದ್ರತೆಯ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತ್ತು.

ಪ್ರತಿಭಟನೆಗೂ ಮೊದಲು ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಯವರೆಗೆ ಜಾಥಾ ಕೈಗೊಂಡರು. ಸಂಘಟನೆಯ ಖಜಾಂಜಿ ಭವ್ಯಾ,ಪ್ರಧಾನ ಕಾರ್ಯದರ್ಶಿ ಗಿರಜಾ,ಸಿಐಟಿಯು ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್,ಯೋಗೀಶ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.