ಮಂಜೇಶ್ವರ, ಜನವರಿ.20: ಕರ್ನಾಟಕದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ ಗೌರವಾರ್ಥ ಅವರ ಹುಟ್ಟೂರಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಕರ್ನಾಟಕ,ಕೇರಳ ಹಾಗೂ ಕೇಂದ್ರ ಸರಕಾರ ಮತ್ತು ಇತರ ದಾನಿಗಳ ಸಹಕಾರ, ಸಹಯೋಗ ದೊಂದಿಗೆ ರಾಷ್ಟ್ರಕವಿ ಗೋವಿಂದ ಪೈ ಹೆಸರಿನಲ್ಲಿ ನಿರ್ಮಿಸಿರುವ “ಗಿಳಿವಿಂಡು” ಸಾಂಸ್ಕೃತಿಕ ಕೇಂದ್ರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಣರಾಯಿ ವಿಜಯನ್ ಅವರು, ಕೇರಳದ ಮಹಾನ್ ಕವಿ ವೆಲ್ಲತ್ತೊಳ್ರಿಗೆ ಹಾಗೂ ಮಂಜೇಶ್ವರ ಗೊವಿಂದ ಪೈಗಳಿಗೆ ಹಲವು ವಿಚಾರಗಳಲ್ಲಿ ಸಾಮ್ಯತೆ ಇದೆ. ಇಬ್ಬರೂ ಜಾತ್ಯತೀತ ಮನೋಭಾವದ ಕವಿಗಳಾಗಿದ್ದರು. ಇಬ್ಬರು ಒಂದೇ ಕಾಲಘಟ್ಟದಲ್ಲಿ ರಾಷ್ಟ್ರ ಕವಿ ಪುರಸ್ಕಾರವನ್ನು ಪಡೆದವರು ಎಂದು ಹೇಳಿದರು.
ಕನ್ನಡ ಸಾಹಿತ್ಯದಲ್ಲಿ ನಡುಗನ್ನಡ ಪ್ರಕಾರವನ್ನು ಬೆಳಕಿಗೆ ತಂದ ಮಂಜೇಶ್ವರ ಗೋವಿಂದ ಪೈಗಳು ಅಗಾಧ ಪಾಂಡಿತ್ಯವನ್ನು ಹೊಂದಿದ್ದವರು ಸಂಸ್ಕೃತ, ಪಾಲಿ, ಗ್ರೀಕ್, ಲ್ಯಾಟಿನ್ ಭಾಷೆ ಸೇರಿದಂತೆ 23 ಭಾಷೆಗಳ ಬಗ್ಗೆ ಜ್ಞಾನ ಹೊಂದಿದ್ದ ಬಹು ಭಾಷಾ ಪಂಡಿತರಾಗಿದ್ದರು. ಮ್ಯಾಕ್ಸ್ಮುಲ್ಲರ್ನ ರೀತಿಯ ಚಿಂತನೆಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು.
ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಗಾಂಧಿ ದಂಡಿ ಸತ್ಯಾಗ್ರಹಕ್ಕೆ ಹೊರಟಾಗ ಮಂಜೇಶ್ವರದ ಗೋವಿಂದ ಪೈಗಳ ಮೂಲಕ ಅವರಿಗೆ ಊರು ಗೋಲು ನೀಡಲಾಗಿತ್ತು ಎನ್ನುವ ವಿಷಯ ಹಲವರಿಗೆ ತಿಳಿದಿರಲಿಕ್ಕಿಲ್ಲ. ಕಾಸರಗೋಡು ಹಿಂದೆ ತುಳುನಾಡಿನ ಭಾಗವಾಗಿದ್ದು, ಬಹುಭಾಷೆ ಸಂಸ್ಕೃತಿಯ ಕೇಂದ್ರವಾಗಿದೆ ಗಾಂಧೀವಾದ, ಸಮಾಜವಾದ,ಕಮ್ಯೂನಿಸಂ ಸಿದ್ಧಾಂತಗಳಿಗೆ ತೆರೆದುಕೊಂಡ ಪ್ರದೇಶ. ಪಾರ್ತಿಸುಬ್ಬ ರಂತಹ ಯಕ್ಷಗಾನ ಕಲೆಯ ಆರಂಭಿಕರ ನೆಲೆಯಾಗಿದೆ, ಹೋರಾಟಗಾರರ ನಾಡಾಗಿದೆ.
ಇಕ್ಕೇರಿ ಅರಸರು ಕಟ್ಟಿದ ಪುರಾತನ ಬೇಕಲ ಕೋಟೆ ಇರುವ ಐತಿಹಾಸಿಕ ಮಹತ್ವದ ಕೇಂದ್ರ ಇರುವ ಪ್ರದೇಶದಲ್ಲಿ ಗೋವಿಂದ ಪೈಗಳ ಸ್ಮಾರಕದ ಅಭಿವೃದ್ಧಿ ಸರಕಾರ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ಪಿಣರಾಯಿ ವಿಜಯನ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಗಿಳಿವಿಂಡು ಸಾಂಸ್ಕೃತಿಕ ಕೇಂದ್ರದಲ್ಲಿ ನಿರ್ಮಿಸಲಾಗಿರುವ ಕವಿ ನಿವಾಸ ಹಾಗೂ ಭವನಿಕಾ ರಂಗ ಮಂದಿರವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಗೋವಿಂದ ಪೈಯವರು ಕನ್ನಡದ ಪ್ರಥಮ ರಾಷ್ಟ್ರಕವಿಯಾಗಿದ್ದರೂ ಮಾತ್ರವಲ್ಲ ಜಾತ್ಯತೀತ ಮನೋಭಾವವನ್ನು ಹೊಂದಿದ್ದ ಮಹಾನ್ ಕವಿ, ಸಾಹಿತಿ, ಸಂಶೋಧಕರಾಗಿದ್ದರು.ಕನ್ನಡ ಸಾಹಿತ್ಯ ಕ್ಷೇತ್ರವನ್ನು ತಮ್ಮ ಪಾಂಡಿತ್ಯದಿಂದ ಸಮೃದ್ಧಗೊಳಿಸಿದವರು ಎಂದು ಸಿದ್ದರಾಮಯ್ಯ ಹೇಳಿದರು.
ಜಾತ್ಯತೀತ ಮನೋಭಾವದ ಮಹಾನ್ ಸಾಹಿತಿ ಮಂಜೇಶ್ವರ ಗೋವಿಂದ ಪೈ ಅವರ ನೆನಪಿನ ಸ್ಮಾರಕ ಗಿಳಿವಿಂಡು ಅಭಿವೃದ್ದಿಗೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಎರಡು ಕೋಟಿ ರೂ ಅನುದಾನ ಘೋಷಿಸಿದ್ದು ಒಂದು ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ ಮುಂದೆಯೂ ಸಹಾಯ ನೀಡುವುದಾಗಿ ತಿಳಿಸಿದರು.
ಮಂಜೇಶ್ವರ ಗೊವಿಂದ ಪೈಗಳ ಬದುಕೇ ಮಹಾನ್ ಕಾವ್ಯ.ಕೇರಳದ ಮಹಾನ್ಕವಿ ವೆಲ್ಲತ್ತೋಳ್ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣವಾಗಿದೆ ಆದರೆ ಅದೇ ಸಂದರ್ಬದಲ್ಲಿ ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಯವರು ಹೆಸರು ಗಳಿಸಿದ್ದರೂ ಅವರ ಹೆಸರಿನಲ್ಲಿ ಸ್ಮಾರಕ ಇಲ್ಲದೆ ಇರುವುದು ಒಂದು ಕೊರತೆಯಾಗಿತ್ತು ಮತ್ತು ಕನಸಾಗಿತ್ತು ಸುಮಾರು 75ವರ್ಷದ ಹಿಂದಿನ ಆ ಕನಸು ಇಂದು ಸ್ಮಾರಕ ರಚನೆಯಾಗುವ ಮೂಲಕ ನೆರವೇರಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸರಕಾರದ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ತಿಳಿಸಿದರು.
ಸಮಾರಂಭದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ , ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಗೋವಿಂದ ಪೈ ಪ್ರತಿಮೆ ಅನಾವರಣ ಗೊಳಿಸಿದರು.
ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಂದಾಯ ಸಚಿವ ಇ ಚಂದ್ರಶೇಖರನ್ ಗಿಳಿವಿಂಡು ಯಕ್ಷ ದೇಗುಲವನ್ನು ,ನವೀಕೃತ ಗೋವಿಂದ ಪೈ ನಿವಾಸವನ್ನು ಉದ್ಘಾಟಿಸಿದರು.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕರ್ನಾಟಕ ಸರಕಾರದ ಅರಣ್ಯ,ಪರಿಸರ ಸಚಿವ ಬಿ.ರಮಾನಾಥ ರೈ ಪಾರ್ಥಿ ಸುಬ್ಬ ವೇದಿಕೆಯನ್ನು ಉದ್ಘಾಟಿಸಿದರು.
ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಸಭಾಧ್ಯಕ್ಷತೆ ವಹಿಸಿದ್ದರು. ಲೋಕ ಸಭಾ ಸದಸ್ಯ ಪಿ.ಕರಣಾಕರನ್ ,ತ್ರಿಕರಿಪುರ ಶಾಸಕ ಎಂ.ರಾಜಗೋಪಾಲನ್,ಟ್ರಸ್ಟ್ನ ಸದಸ್ಯರಾದ ಡಿ.ಕೆ.ಚೌಟ, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಗಿಳಿವಿಂಡು ಯೋಜನೆ:
ಸಾಹಿತ್ಯ , ಕಲೆ , ಸಂಸ್ಕೃತಿಯ ಬಗ್ಗೆ ಅಪಾರ ಸಂಶೋಧನೆಗಳನ್ನು ಮಾಡಿರುವ ಗೋವಿಂದ ಪೈಯವರ ಕೊಡುಗೆಗಳನ್ನು ಮುಂದಿನ ತಲೆಮಾರಿಗೆ ತಿಳಿಸಲು, ಅವುಗಳು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲು ಹಾಗೂ ಸಾಹಿತ್ಯಿಕ ಕೊಡುಗೆಗಳನ್ನು ಸ್ಮರಿಸುವುದಕ್ಕಾಗಿ ಮಂಜೇಶ್ವರದಲ್ಲಿರುವ ಪೈ ನಿವಾಸವನ್ನು ನವೀಕರಿಸಿ ಸ್ಮಾರಕವನ್ನಾಗಿಸಲಾಗಿದೆ.
ಇದಕ್ಕೆ ಅವರ ಪ್ರಮುಖ ಕೃತಿಗಳಲ್ಲೊಂದಾದ ‘ಗಿಳಿವಿಂಡು’ ಎಂಬ ಹೆಸರಿನ್ನಿಡಲಾಗಿದೆ. ಸುಮಾರು 1.83 ಎಕರೆ ಭೂಮಿಯಲ್ಲಿ ತಲೆ ಎತ್ತಿ ನಿಂತಿರುವ ಯೋಜನೆಯ ಕವಿ ನಿವಾಸದಲ್ಲಿ ಭವನಿಕಾ ಸಭಾಗೃಹ, ಬಯಲು ರಂಗ ಮಂದಿರ, ಒಳಾಂಗಣ ರಂಗ ಮಂದಿರ, ಪ್ರಸಾದನ ಕೊಠಡಿ, ಚಿತ್ರಶಿಲ್ಪ ಕಲಾ ಪ್ರದರ್ಶನ, ಯಕ್ಷಗಾನ ಜಾನಪದ ಕೇಂದ್ರ, ಗ್ರಂಥ ಭಂಡಾರ, ಸಂಶೋಧನೆ, ಅಧ್ಯಯನ, ಹಸ್ತಪ್ರತಿಗಳ ವಿಭಾಗ, ಆಧುನಿಕ ತಂತ್ರಜ್ಞಾನ, ಪ್ರಾಚೀನ ಸಾಹಿತ್ಯ ಅಧ್ಯಯನ ವಿಭಾಗಗಳನ್ನು ಒಳಗೊಂಡಿದೆ. ಕೇಂದ್ರದ ಮಾಜಿ ಸಚಿವ ಸಂಸದ ಎಂ.ವೀರಪ್ಪ ಮೊಯ್ಲಿ ಸಾರಥ್ಯದ ತಂಡದ ಅವಿರತ ಪ್ರಯತ್ನ ಹಾಗೂ ಶ್ರಮದ ಫಲದಿಂದಾಗಿ ಇಲ್ಲಿನ ಸಾಹಿತ್ಯ ಪ್ರೇಮಿಗಳ ಬಹು ದೊಡ್ಡ ಕನಸಾಗಿರುವ ಗಿಳಿವಿಂಡು ಯೋಜನೆ ಇಂದು ಉದ್ಘಾಟನೆಗೊಂಡಿದೆ.
ಯಕ್ಷಗಾನ ಮ್ಯೂಸಿಯಂ :
‘ಗಿಳಿವಿಂಡು’ವಿನಲ್ಲಿ ಯಕ್ಷಗಾನಕ್ಕಾಗಿ ವಿಶೇಷ ಮ್ಯೂಸಿಯಂ ಒಂದನ್ನು ಸಿದ್ಧಪಡಿಸಲಾಗಿದೆ. ಹಿರಿಯ ಕಲಾವಿದರ ಛಾಯಾಚಿತ್ರಗಳು, ವಿವಿಧ ಯಕ್ಷ ವೇಷಗಳು, ಕಲಾಕೃತಿಗಳು, ತೆಂಕುತಿಟ್ಟು ಮತ್ತು ಬಡಗುತಿಟ್ಟಿನ ಸುಮಾರು 10 ಖ್ಯಾತ ಯಕ್ಷಗಾನ ಕಲಾವಿ ದರ ಏಳು ಅಡಿ ಎತ್ತರದ ಪ್ರತಿಕೃತಿಗಳನ್ನು ಈ ಕೇಂದ್ರ ದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದಲ್ಲದೆ ಪ್ರಸಿದ್ಧ ಯಕ್ಷಗಾನ ಕಲಾವಿದರ ಭಾವಚಿತ್ರ ಮತ್ತು ಅವರ ವಿವರಗಳನ್ನೊಳಗೊಂಡಿರುವ ಮಾಹಿತಿಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಯಕ್ಷಗಾನದ ಬಗ್ಗೆ ಸಂಶೋಧನೆ ಮಾಡುವ ಸಂಶೋಧನಾ ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಮ್ಯೂಸಿಯಂನ್ನು ಸಜ್ಜುಗೊಳಿಸಲಾಗಿದೆ. ಪೈ ನಿವಾಸದ ಛಾವಡಿ ಯಲ್ಲಿ 6 ಅಡಿ ಎತ್ತರದ ಗೋವಿಂದ ಪೈಯವರ ಪ್ರತಿಮೆ ಸ್ಥಾಪಿಸಲಾಗಿದೆ.
Comments are closed.